ಶಿವಮೊಗ್ಗ:
ಕೊರೋನಾ ಮೂರನೇ ಅಲೆಯ ಭೀತಿಯ ನಡುವೆ ಸರ್ಕಾರದ ಕಟ್ಟುನಿಟ್ಟಿನ ನಿರ್ಬಂಧದ ನಡುವೆಯೂ ಹೊಸ ವರ್ಷ 2022 ರ ಸಂಭ್ರಮಕ್ಕೆ ನಗರದ ಹೋಟೆಲ್, ಬಾರ್, ರೆಸ್ಟೋರೆಂಟ್, ಬೇಕರಿಗಳು ಸರ್ವ ಸಿದ್ಧತೆ ಮಾಡಿಕೊಂಡಿವೆ. ಗ್ರಾಹಕರನ್ನು ಸೆಳೆಯಲು ಅನೇಕ ಕೊಡುಗೆ ನೀಡಿವೆ.

ಕೋವಿಡ್ -19 ರಿಂದ ಕಳೆದೆರಡು ವರ್ಷಗಳಲ್ಲಿ ಅಪಾರ ನಷ್ಟ ಅನುಭವಿಸಿದ ಆಹಾರೋದ್ಯಮ ಸೇರಿದಂತೆ ಎಲ್ಲಾ ಉದ್ಯಮಗಳು ಇನ್ನೇನು ಚೇತರಿಸಿಕೊಳ್ಳಬೇಕು ಎನ್ನುವಾಗ ಕೊರೋನಾ ರೂಪಾಂತರಿ ಒಮಿಕ್ರಾನ್, ಮೂರನೇ ಅಲೆ ಆತಂಕ ಎದುರಾಗಿದೆ.
ನಿರ್ಬಂಧಗಳ ನಡುವೆ ಜನರು ಹೊಸ ವರ್ಷವನ್ನು ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಸಾರ್ವಜನಿಕವಾಗಿ ಆಚರಣೆಗೆ ಅವಕಾಶವಿಲ್ಲದ ಕಾರಣ ಪಾರ್ಸೆಲ್ ತೆಗೆದುಕೊಂಡು ಮನೆ, ಇಲ್ಲವೇ ರೂಮ್ ಗಳಲ್ಲಿ ಹೊಸ ವರ್ಷಾಚರಣೆಗೆ ರೆಡಿ ಮಾಡಿಕೊಂಡಿದ್ದಾರೆ.
ಆದರೆ ಹೊಸ ವರ್ಷದ ಸಂಭ್ರಮ ರಾತ್ರಿ 10 ಗಂಟೆಯ ತನಕ ಮಾತ್ರ. ನಿಯಮಾವಳಿ ಮೀರಿದಲ್ಲಿ ಪೊಲೀಸರು ಬಿಸಿ ಮುಟ್ಟಿಸಲಿದ್ದಾರೆ. ರಸ್ತೆಗಳಲ್ಲಿ ಕೂಗಾಡುವುದು, ಕೇಕೆ ಹಾಕುವುದು, ಪಟಾಕಿ ಸಿಡಿಸುವುದು, ಮದ್ಯಪಾನ ಮಾಡಿ ಅನಾವಶ್ಯಕವಾಗಿ ಓಡಾಡುವುದಕ್ಕೆ ಬ್ರೇಕ್ ಹಾಕಲಾಗಿದೆ.

10 ಗಂಟೆಗೆ ನೈಟ್ ಕರ್ಫ್ಯೂ ಇರುವುದರಿಂದ ಅಷ್ಟರೊಳಗೆ ಸಾರ್ವಜನಿಕರು ಮನೆ ಸೇರಿಕೊಳ್ಳಬೇಕಿದೆ. ನಿರ್ಬಂಧಗಳ ನಡುವೆ ಹೊಸ ವರ್ಷಾಚರಣೆಗೆ ಹೋಟೆಲ್, ರೆಸ್ಟೊರೆಂಟ್, ರೆಸಾರ್ಟ್ ಗಳಲ್ಲಿ ಶೇ. 50 ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಿರುವುದಕ್ಕೆ ಹೋಟೆಲ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಇಂತಹ ಅವೈಜ್ಞಾನಿಕ ನಿರ್ಧಾರಗಳಿಂದ ಮೊದಲೇ ಸಂಕಷ್ಟದಲ್ಲಿದ್ದ ಹೋಟೆಲ್ ಉದ್ಯಮಕ್ಕೆ ಬರೆ ಎಳೆದಂತಾಗಿದೆ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.

ಇನ್ನು ಯುವಕರು ಸೇರಿದಂತೆ ಕೆಲವರು ತೋಟದ ಮನೆ ಸೇರಿ ಹೊರ ವಲಯಗಳಲ್ಲಿ ಹೊಸ ವರ್ಷವನ್ನು ಆಚರಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ರಾತ್ರಿ 10 ಗಂಟೆ ನಂತರ ಅಡ್ಡಾಡುವಂತಿಲ್ಲವಾದ್ದರಿಂದ ಪಾರ್ಟಿ ಸ್ಥಳಗಳಲ್ಲೇ ಉಳಿದು ಬೆಳಗ್ಗೆ ಮನೆ ಸೇರುವ ಪ್ಲಾನ್ ಮಾಡಿದ್ದಾರೆ. ಕೆಲವರು ಗೋವಾಕ್ಕೆ ತೆರಳಿದ್ದಾರೆ.
ಬೇಕರಿಗಳಲ್ಲಿ ಕೇಕ್ ಸೇರಿದಂತೆ ಸಿಹಿ ತಿನಿಸುಗಳ ವ್ಯಾಪಾರ ಜೋರಾಗಿದ್ದು, ಹೆಚ್ಚಿನವರು ಹೊಸ ಬಟ್ಟೆ ಖರೀದಿಯಲ್ಲಿ ತೊಡಗಿದ್ದರು. ನಾನ್ ವೆಜ್ ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಆರ್ಡರ್ ನೀಡಲಾಗಿದೆ.

ಇದರೊಂದಿಗೆ ಅನೇಕ ಸ್ನೇಹಿತರ ಬಳಗದಿಂದ ತಾವೇ ಅಡುಗೆ ಮಾಡಿಕೊಂಡು ಹೊಸ ವರ್ಷದ ಪಾರ್ಟಿಗೆ ತಯಾರಿ ಕೂಡ ನಡೆದಿದೆ. ಒಟ್ಟಿನಲ್ಲಿ ನಿರ್ಬಂಧಗಳ ನಡುವೆಯೂ ಹೊಸ ವರ್ಷಾಚರಣೆಗೆ ತಮ್ಮದೇ ರೀತಿಯಲ್ಲಿ ಸಿದ್ಧತೆ ನಡೆಸಿದ್ದಾರೆ.

