ಶಿವಮೊಗ್ಗ: ಪ್ರಾಚ್ಯ ವಸ್ತು ಇಲಾಖೆಗೆ ಸೇರಿರುವ ಜಾಗವನ್ನು ಕೆಲವರು ಖಬರಸ್ಥಾನ ಜಾಗವೆಂದು ಕಬಳಿಸಲು ಹೊರಟಿರುವ ದುಂಡಾವರ್ತನೆಯನ್ನು ಬಿಜೆಪಿ ಮುಖಂಡ ಎಸ್.ಎನ್. ಚನ್ನಬಸಪ್ಪ ತೀವ್ರವಾಗಿ ಖಂಡಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಲಿಯಲ್ಲಿ ಈಗ ಇರುವ ಸರ್ವೇ ನಂ. 157 ರ 1.19 ಎಕರೆ ಜಾಗ ನೂರಾರು ವರ್ಷಗಳಿಂದ ಐತಿಹಾಸಿಕವಾಗಿ ಪ್ರಸಿದ್ಧವಾಗಿದೆ. ಈ ಜಾಗದಲ್ಲಿ ಶಿವಪ್ಪನಾಯಕರ ಸಹೋದರರ ಸಮಾಧಿ ಕೂಡ ಇದೆ. ಇದಕ್ಕೆ ದಾಖಲೆಯೂ ಇದೆ. ಮತ್ತು 1905 ರಲ್ಲಿಯೇ ಇದನ್ನು ಗುಂಡು ತೋಪು ಎಂದು ನಗರಸಭೆಯಲ್ಲಿ ಗುರುತಿಸಿದ್ದಾರೆ. ಅವತ್ತಿನ ಪಹಣಿಯಲ್ಲೂ ಕೂಡ ಈ ಜಾಗ ಗುಂಡು ತೋಪು ಎಂದೇ ಇದೆ. ಎಲ್ಲಿಯೂ ಕೂಡ ಖಬರಸ್ಥಾನದ ಬಗ್ಗೆ ಮಾಹಿಯೂ ಇಲ್ಲ. ಆ ಜಾಗದಲ್ಲಿ ಎಲ್ಲಾ ಹಿಂದೂ ಸಂಸ್ಕೃತಿಯ ನೆರಳೇ ಇದೆ. ಇಂತಹ ದಾಖಲೆ ಇರುವ ಜಾಗವನ್ನು ಈಗ ಕೆಲವರು ಇದು ಖಬರಸ್ಥಾನವಾಗಿತ್ತು ಎಂದು ಕಬಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.ನಂತರದ ವರ್ಷಗಳಲ್ಲಿ ನಗರಸಭೆ ಕೂಡ ಈ ಜಾಗವನ್ನು ಗುಂಡು ತೋಪು ಎಂದೇ ನಿರ್ಧರಿಸಿತ್ತು. ಮತ್ತು ನ್ಯಾಯಾಲಯದ ಆದೇಶಗಳು ಕೂಡ ಈ ಜಾಗ ಪ್ರಾಚ್ಯ ವಸ್ತು ಇಲಾಖೆಗೆ ಸೇರಿದ್ದು ಎಂದು ಸ್ಪಷ್ಟವಾಗಿ ಹೇಳಿದೆ. ಈ ಜಾಗದಲ್ಲಿ ಬಯಲು ಮ್ಯೂಸಿಯಂ ನಿರ್ಮಿಸಲು ಸಹ ತೀರ್ಮಾನ ಕೈಗೊಳ್ಳಲಾಗಿದೆ. ಇಷ್ಟೆಲ್ಲಾ ದಾಖಲೆಗಳಿದ್ದರೂ ಕೆಲವರು ಈ ಜಾಗ ನಮ್ಮದು ಎಂದು ವಿನಾಕಾರಣ ವಿವಾದ ಎಬ್ಬಿಸುತ್ತಿದ್ದಾರೆ. ಇದಕ್ಕೆ ನಾವು ಎಂದಿಗೂ ಅವಕಾಶ ಕೊಡುವುದಿಲ್ಲ. ಇದು ಪ್ರಾಚ್ಯ ವಸ್ತು ಇಲಾಖೆಗೆ ಸೇರಬೇಕಾಗಿದೆ ಎಂದರು.

ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ಈ ಜಾಗದ ಬಗ್ಗೆ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಯಾವಾಗಲೂ ಓಲೈಕೆ ರಾಜಕಾರಣ ಮಾಡುತ್ತಲೇ ಬಂದ ಅವರು ಈ ಜಾಗವನ್ನು ಪ್ರಾಚ್ಯ ವಸ್ತು ಇಲಾಖೆಗೆ ಸೇರಿದ್ದರೂ ಕೂಡ ಅದನ್ನು ಸೇರಿಸದೇ ಒಂದು ಸಮುದಾಯದ ಪರ ರಾಜಕಾರಣ ಮಾಡುತ್ತಿರುವುದನ್ನು ಹಿಂದೂ ಸಮಾಜ ಖಂಡಿಸುತ್ತದೆ ಎಂದರು. 

ಈ ಜಾಗವನ್ನು ನಾವು ಸ್ವಚ್ಛಗೊಳಿಸುತ್ತೇವೆ. ಇಲ್ಲಿ ಬಯಲು ಮ್ಯೂಸಿಯಂ ತೆರೆಯಲು ಸಹಾಯ ಮಾಡುತ್ತೇವೆ. ಇದು ನಮ್ಮದೆಂದು ಹೇಳುವ ಸಮುದಾಯದವರಿಗೆ ಎಚ್ಚರಿಕೆ ಕೊಡುತ್ತೇವೆ. ಮತ್ತು ಇದು ಎಸಿ ಕೋರ್ಟ್ ನಲ್ಲಿರುವುದರಿಂದ ತಕ್ಷಣವೇ ಈ ಜಾಗ ಪ್ರಾಚ್ಯ ವಸ್ತು ಇಲಾಖೆಗೆ ಸೇರಿದ್ದು ಎಂದು ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಹೋರಾಟ ಆರಂಭಿಸುತ್ತೇವೆ. ಗುರುವಾರದವರೆಗೆ ಗಡುವು ನೀಡುತ್ತೇವೆ. ಅಷ್ಟರೊಳಗೆ ಈ ಜಾಗದ ಬಗ್ಗೆ ಸರಿಯಾದ ತೀರ್ಮಾನ ಕೈಗೊಳ್ಳದಿದ್ದರೆ, ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!