ಶಿವಮೊಗ್ಗ, ಅ.೨೦:
ಶಿವಮೊಗ್ಗ ಜಿಲ್ಲೆಯಾದ್ಯಂತ ರೈತರು ಶ್ರದ್ಧಾ ಭಕ್ತಿಯಿಂದ ಭೂಮಿ ಹುಣ್ಣಿಮೆಯನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ಹೊಲದಲ್ಲಿ ಬೆಳೆದು ನಿಂತ ಫಸಲಿಗೆ ಪೂಜೆ ಸಲ್ಲಿಸಿ, ಉತ್ತಮ ಬೆಳೆಗಾಗಿ ಪ್ರಾರ್ಥಿಸಿದರು.
ಮನೆಯವರೆಲ್ಲ ಹೊಲದಲ್ಲೇ ಕುಳಿತು ಊಟ ಮಾಡಿ ಮನೆಗೆ ಮರಳುತ್ತಾರೆ. ಅನ್ನದಾತರು ಶ್ರದ್ಧಾ ಭಕ್ತಿಯಿಂದ ಈ ಪೂಜೆ ಸಲ್ಲಿಸುತ್ತಾರೆ. ಭೂಮಿ ತಾಯಿಗೆ ವಿಶೇಷ ಗೌರವ ಸಲ್ಲಿಸುವ ಆಚರಣೆ ಇದಾಗಿದೆ.

ಇದಕ್ಕಾಗಿ ಒಂದು ವಾರದ ಸಿದ್ಧತೆಯೂ ಇರಲಿದೆ.
ಪೂಜೆ ಹಿನ್ನೆಲೆ ಮಹಿಳೆಯರು ರಾತ್ರಿ ಪೂರ್ತಿ ಅಡುಗೆ ಮಾಡುತ್ತಾರೆ. ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ. ಹಲವು ತರಕಾರಿಗಳು, ಸೊಪ್ಪುಗಳನ್ನು ಹಾಕಿ ಬೇಯಿಸಿ ಹಚ್ಚಂಬಲಿ ತಯಾರಿ ಮಾಡುತ್ತಾರೆ. ಹಚ್ಚಂಬಲಿಯನ್ನು ಬುಟ್ಟಿಯಲ್ಲಿ ಇರಿಸಿಕೊಂಡು, ಪೂಜೆಯಾದ ಬಳಿಕ ಗದ್ದೆಯ ತುಂಬೆಲ್ಲ ಬೀರಲಾಗುತ್ತದೆ. ‘ಹಚ್ಚಂಬಲಿ.. ಹಾಲಂಬಲಿ.. ಗುಡ್ಡದ ಮೇಲಿನ ನೂರೊಂದು ಕುಡಿ ಭೂ ತಾಯಿ ಬಂದು ಉಂಡೋಗಲಿ’ ಎಂದು ಹಾಡುತ್ತ ಹಚ್ಚಂಬಲಿಯನ್ನು ಬೀರಲಾಯಿತು.
ಭೂಮಿ ಹುಣ್ಣಿಮೆಯಂದು ರೈತರು ಕಾಗೆಗಳು, ಇಲಿಗಳಿಗೆ ಎಡೆ ಇಡುತ್ತಾರೆ. ನಿಧನರಾದ ಕುಟುಂಬದ ಹಿರಿಯರಿಗೆ ಎಡೆ ಅರ್ಪಿಸಲಾಗುತ್ತದೆ.

ಅದಕ್ಕಾಗಿ ಕಾಗೆಗಳಿಗೆ ಒಂದೆಡೆ ಎಡೆ ಇಡಲಾಗುತ್ತದೆ. ಇನ್ನು ಬೆಳೆ ಹಾನಿ ಮಾಡುವ ಇಲಿಗಳಿಗೂ ಎಡೆಯಲ್ಲಿ ಪಾಲು ಕೊಡಲಾಗುತ್ತದೆ. ತಮ್ಮ ಬೆಳೆಗಳನ್ನು ಹಾನಿ ಮಾಡಬೇಡ ಎಂದು ಪ್ರಾರ್ಥಿಸಿ ರೈತರು ಇಲಿಗಳಿಗೆ ಎಡೆ ಅರ್ಪಿಸುತ್ತಾರೆ. ಪೂಜೆಗೆ ತಂದ ಕಡಬನ್ನು ಗದ್ದೆಯ ಒಂದು ಭಾಗದಲ್ಲಿ ಹೂಳಲಾಗುತ್ತದೆ.


ಭತ್ತದ ಕೊಯ್ಲಿನ ಸಂದರ್ಭ ಈ ಕಡಬನ್ನು ಹೊರಗೆ ತೆಗೆಯುತ್ತಾರೆ. ಆ ದಿನ ಅಡುಗೆ ವೇಳೆ ಆ ಕಡಬು ಹಾಕಲಾಗುತ್ತದೆ. ಕೊಯ್ಲಿಗೆ ಬಂದವರಿಗೆಲ್ಲ ಪ್ರಸಾದದ ರೀತಿಯಲ್ಲಿ ಕೊಡಲಾಗುತ್ತದೆ.

ಮಲೆನಾಡು ಭಾಗದ ರೈತರು ಆಚರಿಸುವ ಶೀಗಿ ಹುಣ್ಣಿಮೆ ಅಥವಾ ಭೂಮಿ ಹುಣ್ಣಿಮೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ತುಂಬು ಗರ್ಭಿಣಿಗೆ ಸೀಮಂತ ಶಾಸ್ತ್ರ ಮಾಡುವಂತೆ ಭೂಮಿ ತಾಯಿಗೆ ಪೂಜೆ ಸಲ್ಲಿಸಲಾಗುತ್ತದೆ. ವಿಶೇಷ ಖಾದ್ಯಗಳನ್ನು ತಯಾರಿಸಿ, ಭೂ ಮಣ್ಣಿ ಬುಟ್ಟಿಗಳಲ್ಲಿ ಕೊಂಡೊಯ್ದು ಎಡೆ ಇಡಲಾಗುತ್ತದೆ. ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಹಬ್ಬದ ಅಡುಗೆಯನ್ನು ಎಲ್ಲೆಡೆ ಬೀರಲಾಗುತ್ತದೆ.

By admin

ನಿಮ್ಮದೊಂದು ಉತ್ತರ

error: Content is protected !!