ಶಿವಮೊಗ್ಗ,ಅ.10:
ಇಂದಿನಿಂದ ಅಕ್ಟೋಬರ್ 14ರವರೆಗೆ ಜಿಲ್ಲೆಯಾದ್ಯಂತ ಕೋವಿಡ್ ವಿಶೇಷ ಲಸಿಕಾ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ಹೇಳಿದ್ದಾರೆ.
ಜಿಲ್ಲೆಯ ಎಲ್ಲಾ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ವಾರ್ಡ್ ವಾರು ವಿಶೇಷ ಕೋವಿಡ್ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಗ್ರಾಮ ಪಂಚಾಯಿತಿಯ ಗ್ರಾಮವಾರು ಹಾಗೂ ನಗರ ಪ್ರದೇಶದ ವಾರ್ಡ್ ನ 18 ವರ್ಷ ಮೇಲ್ಪಟ್ಟ ಎಲ್ಲಾ ಫಲಾನುಭವಿಗಳು ಮೊದಲನೇ ಡೋಸ್ ಹಾಗೂ ಕೋವಿಶೀಲ್ಡ್ ಲಸಿಕೆ ಪಡೆದು 85 ದಿನ ಮತ್ತು ಕೋವ್ಯಾಕ್ಸಿನ್ ಲಸಿಕೆ ಪಡೆದು 28 ದಿನ ಪೂರೈಸಿದ ಫಲಾನುಭವಿಗಳು 2 ನೇ ಡೋಸ್ ಲಸಿಕೆ ಪಡೆಯ ಬಹುದಾಗಿದೆ. ಎಲ್ಲಾ ಪ್ರಾಥಮಿಕ ಕೇಂದ್ರ, ಎಲ್ಲಾ ಸಮುದಾಯ ಅರೋಗ್ಯ ಕೇಂದ್ರ, ಎಲ್ಲಾ ತಾಲ್ಲೂಕು ಆಸ್ಪತ್ರೆ, ಸಿಮ್ಸ್ ಮೆಡಿಕಲ್ ಕಾಲೇಜು ಶಿವಮೊಗ್ಗ ಮತ್ತು ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರ ಕುವೆಂಪು ರಸ್ತೆ ಶಿವಮೊಗ್ಗ ಹಾಗೂ ತಮ್ಮ ಹತ್ತಿರದ ಲಸಿಕಾ ಕೇಂದ್ರಕ್ಕೆ ತಮ್ಮ ಆಧಾರ್ ಕಾರ್ಡ್ ನೊಂದಿಗೆ ಬಂದು ಲಸಿಕೆ ಪಡೆಯಬಹುದು.
ಜಿಲ್ಲೆಯಲ್ಲಿ ಸಾಕಷ್ಟು ಲಸಿಕೆ ದಾಸ್ತಾನಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಮುಂದೆ ಬರಬಹುದಾದ ಕೋವಿಡ್ ಮಹಾಮಾರಿ 3 ನೇ ಅಲೆಯಿಂದ ಸುರಕ್ಷತೆ ಪಡೆಯುವಂತೆ ಅವರು ಕೋರಿದ್ದಾರೆ.