ಶಿವಮೊಗ್ಗ,ಸೆ.19: ಇಲ್ಲಿನ ಟಿಪ್ಪುನಗರದಲ್ಲಿ ಮತ್ತೆ ಮಚ್ಚು ಲಾಂಗುಗಳು ಝಳಪಳಿಸಿ, ರೌಡಿ ಆಸಾಮಿ ಹಾಗೂ ಗಾಂಜಾ ಅಕ್ರಮ ಮಾರಾಟಗಾರ ಎನ್ನಲಾಗುತ್ತಿದ್ದ ಯುವಕನ ಬಲಿ ತೆಗೆದುಕೊಂಡಿದೆ ಎಂದು ಸುದ್ದಿ ಮೂಲಗಳು ತಿಳಿಸಲಾಗಿದೆ.
ರಾತ್ರಿ 10 ರ ಹೊತ್ತಿಗೆ ಅಲ್ಲಿನ ಏಳನೇ ತಿರುವಿನಲ್ಲಿ ಚಾಕುವಿನಿಂದ ಚುಚ್ಚಿ ಯುವಕನ ಕೊಲೆ ಮಾಡಲಾಗಿದೆ.
ಮಾರ್ನಮಿ ಬೈಲ್ ನ ನಿವಾಸಿ ಇರ್ಫಾನ್ (30) ಮೃತ ದುರ್ದೈವಿ. ಈತನ ವಿರುದ್ದ ಈ ಹಿಂದೆ ದಾಖಲಾದ ಗಾಂಜಾ ಪ್ರಕರಣಗಳ ವಿಚಾರದಲ್ಲಿ ಅಸಾದ್ ಮತ್ತು ಶಾಬೀರ್ ನಡುವೆ ಜಗಳ ಪ್ರಾರಂಭವಾಗಿದ್ದು. ಆ ಸಮಯದಲ್ಲಿ ಅಲ್ಲೇ ಇದ್ದ 7 ರಿಂದ 8 ಜನ ಯುವಕರು ಸಹ ಜಗಳದಲ್ಲಿ ಸೇರಿಕೊಂಡಿದ್ದು, ಆ ಸಮಯದಲ್ಲಿ ಇರ್ಫಾನ್ ತನ್ನ ಬಳಿ ಇದ್ದ ಚಾಕುವಿನಿಂದ ಒಬ್ಬ ಆರೋಪಿಯ ಮೇಲೆ ಹಲ್ಲೆ ಮಾಡಿದಾಗ ಎದುರಾಳಿಗಳು ಚಾಕುವನ್ನು ಕಸಿದುಕೊಂಡು ಅದೇ ಚಾಕುವಿನಿಂದ ಈತನ ಎದೆಯ ಭಾಗಕ್ಕೆ ಚುಚ್ಚಿ ಕೊಲೆ ಮಾಡಿದ್ದಾರೆಂದು ಮೃತ ಇರ್ಫಾನ್ ನ ತಮ್ಮ ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಪೊಲೀಸರು ತನಿಖೆ ಕೈಗೊಂಡು ಪ್ರಕರಣದಲ್ಲಿ ಒಟ್ಟು ನಾಲ್ಕು ಜನ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಇನ್ನುಳಿದ ಆರೋಪಿತರ ಪತ್ತೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.