ಲಾಕ್ ಡೌನ್ ಬೆದರಿಕೆಗೆ ತಿಲಾಂಜಲಿ ಇಟ್ಟಿರುವ ಮುಖ್ಯಮಂತ್ರಿಗಳು ಚಂದದ ಜಿಲ್ಲೆಗಳಲ್ಲಿ ಶಾಲೆ ಆರಂಭಿಸಲು ಸೂಚಿಸಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮಗಳ ಜಾರಿ ಸಂಬಂಧ ತಜ್ಞರು, ಅಧಿಕಾರಿಗಳ ಜೊತೆ ಇಂದು ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸದ್ಯಕ್ಕೆ ಲಾಕ್ ಡೌನ್ ಆಗಲಿ ಅಥವಾ ವೀಕೆಂಡ್ ಕರ್ಫ್ಯೂ ಇಲ್ಲ. ಮುಂದಿನ ಎರಡು ವಾರ ಈಗ ಜಾರಿಯಲ್ಲಿರುವ ಕೋವಿಡ್ ನಿಯಮಗಳನ್ನೇ ಮುಂದುವರಿಸುವಂತೆ ಸೂಚಿಸಿದ್ದಾರೆ.
ಕೊರೋನಾ 2ನೇ ಅಲೆ ಇನ್ನೂ ಸಂಪೂರ್ಣವಾಗಿ ಹೋಗಿಲ್ಲ, ಸೋಂಕು ಹೆಚ್ಚು ಇರುವ ಜಿಲ್ಲೆಗಳನ್ನು ಬಿಟ್ಟು ಉಳಿದ ಜಿಲ್ಲೆಗಳಲ್ಲಿ ಶಾಲಾ ಕಾಲೇಜು ಆರಂಭಿಸುವಂತೆಯೂ ತಿಳಿಸಿದ್ದಾರೆ.
ಇಂದಿನ ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ತಜ್ಞರ ಜೊತೆಗೆ ಸುಧೀರ್ಘವಾದ ಚರ್ಚೆಯಾಗಿದೆ. ನೆರೆಯ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಸ್ಥಿತಿಗತಿ ಸೇರಿದಂತೆ ಎಲ್ಲಾ ಅಂಶಗಳ ಬಗ್ಗೆ ವಿವರವಾದ ವರದಿ ನೀಡಿದ್ದಾರೆ. ಕೋವಿಡ್ ಎರಡನೇ ಹಂತ ಇನ್ನೂ ಪೂರ್ಣಗೊಂಡಿಲ್ಲ, ಹೀಗಾಗಿ ನಾವು ಮುಂಜಾಗ್ರತೆ ವಹಿಸಬೇಕಾಗಿದೆ. ಶಾಲೆಗಳ ಬಗ್ಗೆ ಚರ್ಚೆಯಾಗಿದೆ. ಕೋವಿಡ್ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರೆಯುವುದು ಬೇಡ, ಪಾಟಿವಿವಿಟಿ 2 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಜಿಲ್ಲೆಗಳಲ್ಲಿ ಶಾಲೆ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಒಂದು ವೇಳೆ ಶಾಲೆ ಆರಂಭವಾದ ನಂತರ ಪಾಸಿಟಿವಿಟಿ ದರ ಶೇ. 2ಕ್ಕಿಂತ ಹೆಚ್ಚಾದಲ್ಲಿ ಒಂದು ವಾರಗಳ ಕಾಲ ಶಾಲೆ ಮುಚ್ಚಿ, ಸ್ಯಾನಿಟೈಸ್ ಮಾಡಿದ ಒಂದು ವಾರದ ನಂತರ ಪುನರ್ ಆರಂಭಿಸಲು ತೀರ್ಮಾನಿಸಲಾಗಿದೆ ಎಂದರು.
ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರಿನಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿದ್ದು, ಪರೀಕ್ಷೆ, ಲಸಿಕೆ ಹೆಚ್ಚಾಗಬೇಕು. ಮಹಾರಾಷ್ಟ್ರ ಮತ್ತು ಕೇರಳ ಗಡಿಯಲ್ಲಿನ ಸುಮಾರು ಹತ್ತು ಕಿಲೋಮೀಟರ್ ಒಳಗಿನ ಹಳ್ಳಿಗಳಲ್ಲಿ ಪರೀಕ್ಷೆ ಪ್ರಮಾಣ ಹೆಚ್ಚಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಸಂಭಾವ್ಯ ಮೂರನೇ ಅಲೆ ನಿಯಂತ್ರಣಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಶಿವಮೊಗ್ಗದಲ್ಲಿ ಜಿನೋಬ್ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆ
ಬೆಂಗಳೂರು, ಮೈಸೂರು, ಶಿವಮೊಗ್ಗ, ಕಲಬುರಗಿ ಮತ್ತು ಬೆಳಗಾವಿ, ಹುಬ್ಬಳ್ಳಿಯಲ್ಲಿ ಮುಂದಿನ ಮೂರು ವಾರಗಳೊಳಗೆ ಜಿನೋಬ್ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆಗೆ ಮಾಡಬೇಕೆಂದು ಸೂಚಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಮಕ್ಕಳ ಆರೈಕೆಗಾಗಿ ಆಸ್ಪತ್ರೆಗಳಲ್ಲಿ ಬೆಡ್, ಐಸಿಯು ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಮುಂದಿನ ವಾರ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ, ಲಸಿಕೆ ಪೂರೈಕೆ ಪ್ರಮಾಣವನ್ನು ಹೆಚ್ಚಿಸುವಂತೆ ಮನವಿ ಮಾಡುವುದಾಗಿ ಮುಖ್ಯಮಂತ್ರಿ ತಿಳಿಸಿದರು.