ಶಿವಮೊಗ್ಗ, ನ.13
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಮ್ಮ ಇಂದಿನ ಯುವ ಶಕ್ತಿಯೇ ದೇಶವನ್ನು ಮುನ್ನಡೆಸುವ ದೊಡ್ಡ ಶಕ್ತಿಯಾಗಿದ್ದು, ಸಂಸತ್ತಿನ ಕಾರ್ಯವೈಖರಿ, ಶಾಸನ ರಚನೆ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿಗಳ ಬಗ್ಗೆ ಯುವಜನತೆ ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಹಾಗೂ ಜಿಲ್ಲಾ ಉಪ ನಿರ್ದೇಶಕರ ಕಚೇರಿ ಇವರ ಸಹಭಾಗಿತ್ವದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಸಂಸತ್ ಎಂಬುದು ಕೇವಲ ಒಂದು ಸ್ಪರ್ಧೆಯಲ್ಲ. ಇದು ನಮ್ಮ ಸಂಸದೀಯ ವ್ಯವಸ್ಥೆ, ಸಂವಿಧಾನದ ಮೌಲ್ಯಗಳು, ಕಾನೂನು ರಚನೆಯ ಪ್ರಕ್ರಿಯೆ ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬಗೆಯನ್ನು ಹತ್ತಿರದಿಂದ ಅರಿತುಕೊಳ್ಳುವ ಒಂದು ಅದ್ಭುತ ವೇದಿಕೆಯಾಗಿದೆ.

ಸಂಸತ್ತಿನಲ್ಲಿ ಅಥವಾ ವಿಧಾನಸಭೆಯಲ್ಲಿ
ಕೇವಲ ಒಂದೆರಡು ಗಲಾಟೆಗಳು ಅಥವಾ ವಿವಾದಗಳು ನಡೆದಾಗ ಹೆಚ್ಚಿನ ಪ್ರಚಾರ ಆಗುತ್ತದೆ. ಆದರೆ ನಮ್ಮ ನಿಜವಾದ ಕೆಲಸ ಮತ್ತು ಅಧ್ಯಯನಗಳು ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪುವುದು ಕಷ್ಟವಾಗುತ್ತದೆ.
ಆಳವಾದ ಅಧ್ಯಯನ ಮತ್ತು ಸಿದ್ಧತೆ: ಒಂದು ಪ್ರಶ್ನೆಗೆ ಅಥವಾ ವಿಷಯಕ್ಕೆ ಉತ್ತರ ನೀಡಲು ಕನಿಷ್ಠ ಮೂರು ಗಂಟೆಗಳ ಕಾಲ ಅಧ್ಯಯನ ಮಾಡಲಾಗುತ್ತದೆ. ಸ್ಟಾರ್ ಬರುವ ಪ್ರಶ್ನೆಗಳಿಗೆ ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಂಡು, ಅದರ ಸಂಪೂರ್ಣ ಮಾಹಿತಿಯನ್ನು ಪಡೆದು ಸದನದಲ್ಲಿ ಸಮರ್ಥವಾಗಿ ಮಂಡಿಸಲಾಗುತ್ತದೆ.
ಅರ್ಜಿ ಸಮಿತಿ ಮತ್ತು ಭರವಸೆ ಸಮಿತಿಗಳಲ್ಲಿ ಸದಸ್ಯರಾಗಿ ಸಾರ್ವಜನಿಕರ ಅನ್ಯಾಯಗಳ ವಿರುದ್ಧ ಹೋರಾಡಿ, ಅವುಗಳನ್ನು ನ್ಯಾಯಾಲಯದ ರೀತಿಯಲ್ಲಿ ಪರಿಹರಿಸಲು ಪ್ರಯತ್ನಿಸಲಾಗುತ್ತದೆ. ಪ್ರತಿವಾರದ ಸಭೆಗಳಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

ಇಡೀ ಪ್ರಪಂಚದಲ್ಲೇ ಅತ್ಯಂತ ಅದ್ಭುತವಾದ ವಿಧಾನಸೌಧ ನಮ್ಮ ಕರ್ನಾಟಕದಲ್ಲಿದ್ದು ಇದನ್ನು ನೋಡಲು ಮತ್ತು ಅಧ್ಯಯನ ಮಾಡಲು ಸಾವಿರಾರು ಕಿಲೋಮೀಟರ್ ದೂರದಿಂದ ಜನರು ಬರುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ,
ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಅನಲಾ, ಬಿಇಓ ರಮೇಶ್, ರಾಘವೇಂದ್ರ, ರಾಜೇಶ್ವರಿ, ಅಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.
—
ಯುವ ಸಂಸತ್ ಕಲಾಪ :
ಅಣಕು ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳಾದ ಕಬ್ಬು ಬೆಳೆಗಾರರಿಗೆ ವೈಜ್ಞಾನಿಕ ಬೆಂಬಲ ಬೆಲೆ, ಹೆಚ್ಚುತ್ತಿರುವ ಪೋಕ್ಸೋ ಪ್ರಕರಣಗಳು, ಬುಡಕಟ್ಟು ಸಮುದಾಯದ ಅರಣ್ಯ ಹಕ್ಕು ಪತ್ರ, ರಸ್ತೆ ಗುಂಡಿಗಳು, ಶಿವಮೊಗ್ಗ ಸಂಚಾರ ದಟ್ಟಣೆ, ಮಾದಕ ವಸ್ತು ಬಳಕೆ, ಎಲೆಚುಕ್ಕಿ ರೋಗ ಹಾಗೂ ಕೆಪಿಎಸ್ಸಿ ನೇಮಕಾತಿ ರದ್ದತಿ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ತೀವ್ರ ವಾಗ್ವಾದ ಹಾಗೂ ಸುದೀರ್ಘ ಚರ್ಚೆ ನಡೆಯಿತು.
ಕಬ್ಬು ಬೆಳೆಗಾರರ ಸಮಸ್ಯೆ ಮತ್ತು ಎಫ್ಆರ್ಪಿ ಜಟಾಪಟಿ
ಸದನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ಸದಸ್ಯರು, ಡಾ. ಎಂ.ಎಸ್. ಸ್ವಾಮಿನಾಥನ್ ವರದಿಯ ಶಿಫಾರಸಿನಂತೆ ರೈತರ ಉತ್ಪಾದನಾ ವೆಚ್ಚಕ್ಕಿಂತ ಶೇ. 50ರಷ್ಟು ಹೆಚ್ಚುವರಿ ಬೆಲೆ ನೀಡಬೇಕು. ಆದರೆ ಪ್ರಸ್ತುತ ಪ್ರತಿ ಟನ್ ಕಬ್ಬಿಗೆ ಕೇವಲ 3,000 ದಿಂದ 3,300 ರೂಪಾಯಿ ಮಾತ್ರ ಸಿಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಆಡಳಿತ ಪಕ್ಷದ ಸದಸ್ಯರು, ಕೇಂದ್ರ ಸರ್ಕಾರವು 2025-26ನೇ ಹಂಗಾಮಿಗೆ ಶೇ. 10.25ರಷ್ಟು ಮೂಲ ಇಳುವರಿ ಆಧಾರದ ಮೇಲೆ ಪ್ರತಿ ಟನ್ ಕಬ್ಬಿಗೆ 3,550 ರೂಪಾಯಿ ಎಫ್ಆರ್ಪಿ ನಿಗದಿಪಡಿಸಿದೆ ಹಾಗೂ ಕಟಾವು ಮತ್ತು ಸಾಗಣೆ ವೆಚ್ಚ ಸೇರಿದಂತೆ ರೈತರ ಇತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿದೆ ಎಂದರು. ಈ ವೇಳೆ ಎಫ್ಆರ್ಪಿ ಕುರಿತ ವಿಚಾರವಾಗಿ ಉಭಯ ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ಪೋಕ್ಸೋ ಪ್ರಕರಣಗಳು
ಕರ್ನಾಟಕದಲ್ಲಿ 2023ರಲ್ಲಿ ಮಹಿಳೆಯರ ವಿರುದ್ಧ 20,336 ಹಾಗೂ ಮಕ್ಕಳ ವಿರುದ್ಧ 8,929 ಅಪರಾಧ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಪೋಕ್ಸೋ ಪ್ರಕರಣಗಳು ಮತ್ತು 18 ವರ್ಷದೊಳಗಿನ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳ ಪರಿಣಾಮಕಾರಿತ್ವವನ್ನು ವಿಪಕ್ಷ ಸದಸ್ಯರು ಪ್ರಶ್ನಿಸಿದರು. ಶಾಲೆಗಳನ್ನು ಮುಚ್ಚುವ ವಿಚಾರ ಮತ್ತು ಮಹಿಳಾ ತನಿಖಾಧಿಕಾರಿಗಳ ನೇಮಕದ ಕುರಿತು ವಿಪಕ್ಷಗಳು ಆಕ್ಷೇಪ ಎತ್ತಿದ್ದರಿಂದ ಸದನದಲ್ಲಿ ಗದ್ದಲ ಉಂಟಾಗಿ, ಸಭಾಧ್ಯಕ್ಷರು ನಿಯಮಗಳನ್ನು ಪಾಲಿಸುವಂತೆ ಸೂಚಿಸಿದರು.
ಗೃಹ ಸಚಿವರು ಹಾಗೂ ಆಡಳಿತ ಪಕ್ಷದ ಉತ್ತರ: ಪೋಕ್ಸೋ ಕಾಯ್ದೆಯಡಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿದ್ದು, ಸಂತ್ರಸ್ತರಿಗೆ ತ್ವರಿತ ನ್ಯಾಯ ಒದಗಿಸಲಾಗುತ್ತಿದೆ. 1098 ಸಹಾಯವಾಣಿ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ಶಾಲಾ ಮಟ್ಟದಲ್ಲಿ ‘ಗುಡ್ ಟಚ್, ಬ್ಯಾಡ್ ಟಚ್’ ಜಾಗೃತಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಸ್ವಯಂ ರಕ್ಷಣೆ ತರಬೇತಿ ನೀಡಲಾಗುತ್ತಿದೆ. ಅಲ್ಲದೆ, ಶಿವಮೊಗ್ಗ ಜಿಲ್ಲೆಯಲ್ಲಿ ‘ಅಕ್ಕಪಡೆ’ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸುರಕ್ಷಿತವಾಗಿ ಮನೆ ತಲುಪುವವರೆಗೆ ಇದು ರಕ್ಷಣೆ ನೀಡಲಿದೆ ಎಂದು ತಿಳಿಸಿದರು.
ಅರಣ್ಯ ಹಕ್ಕು ಕಾಯ್ದೆ 2006 ಮತ್ತು ಕಸ್ತೂರಿ ರಂಗನ್ ವರದಿ
ಅರಣ್ಯ ಹಕ್ಕು ಕಾಯ್ದೆ 2006ರ ಅಡಿಯಲ್ಲಿ ಬುಡಕಟ್ಟು ಸಮುದಾಯದವರಿಗೆ ಸಾಂಪ್ರದಾಯಿಕ ಆಚರಣೆ ಹಾಗೂ ವಾಸಸ್ಥಳಗಳಿಗೆ ಹಕ್ಕು ಪತ್ರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದರು. ಸಲ್ಲಿಕೆಯಾಗಿದ್ದ ಸುಮಾರು 2,89,230 ಅರ್ಜಿಗಳ ಪೈಕಿ ಕೇವಲ 15,000 ಅರ್ಜಿಗಳನ್ನು ಮಾತ್ರ ಪುರಸ್ಕರಿಸಲಾಗಿದ್ದು, 2,58,109 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಅವರು ದೂರಿದರು.
ಆಡಳಿತ ಪಕ್ಷ: ಒಂದು ಕಡೆ ಕಸ್ತೂರಿ ರಂಗನ್ ವರದಿ ಜಾರಿಯಾಗಬೇಕು ಎನ್ನುವ ವಿಪಕ್ಷಗಳು, ಮತ್ತೊಂದೆಡೆ ಅರಣ್ಯವಾಸಿಗಳಿಗೆ ಹಕ್ಕು ಪತ್ರ ನೀಡುವ ವಿಚಾರದಲ್ಲಿ ದ್ವಂದ್ವ ನಿಲುವು ತಾಳುತ್ತಿವೆ ಎಂದು ಆಡಳಿತ ಪಕ್ಷದವರು ತಿರುಗೇಟು ನೀಡಿದ್ದರಿಂದ ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.
ಕರ್ನಾಟಕದ ಐಟಿ ಮತ್ತು ಬಿಟಿ ಕಂಪನಿಗಳಲ್ಲಿ ಆಡಳಿತಾತ್ಮಕ ಹುದ್ದೆಗಳಿಗೆ ಶೇ. 50ರಷ್ಟು ಹಾಗೂ ಆರೋಗ್ಯ ಹುದ್ದೆಗಳಿಗೆ ಶೇ. 75ರಷ್ಟು ಮೀಸಲಾತಿ ನೀಡಲಾಗಿದೆ. ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸುವ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಯವರ ಮುಖಾಂತರ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬೆಳೆ ವಿಮೆ, ಅಡಿಕೆ ರೋಗ ನಷ್ಟ ಹಾಗೂ ರೈತರ ಆತ್ಮಹತ್ಯೆ : ಹೊಸ ಫಸಲ್ ಬಿಮಾ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಬೆಳೆ ನಾಶವಾದಾಗ ರೈತರು ಅರ್ಜಿ ಸಲ್ಲಿಸಿದರೂ ಚೆಕಿಂಗ್ ಪ್ರಕ್ರಿಯೆ 3-4 ತಿಂಗಳು ತಡವಾಗುತ್ತಿರುವುದರಿಂದ ಸಕಾಲಕ್ಕೆ ವಿಮೆ ಸಿಗುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು. ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ಹಾನಿಯಾದಾಗ ಸರ್ಕಾರ ನೀಡುವ ಪರಿಹಾರವೇ ಬೇರೆ ಮತ್ತು ಬೆಳೆ ವಿಮೆಯೇ ಬೇರೆ ಎಂಬ ಕುರಿತು ಸದನದಲ್ಲಿ ಚರ್ಚೆಯಾಯಿತು. ಜೊತೆಗೆ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ ಎಂಬ ವಿಷಯವೂ ಪ್ರಸ್ತಾಪವಾಯಿತು.
ಶಿವಮೊಗ್ಗದಲ್ಲಿ ಅಡಿಕೆ ಬೆಳೆ ನಷ್ಟ: ಶಿವಮೊಗ್ಗ ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ 2,37,710 ಟನ್ ಅಡಿಕೆ ಬೆಳೆಯಲಾಗುತ್ತಿತ್ತು. ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ, ಎಲೆಚುಕ್ಕಿ ರೋಗದಿಂದ ಒಟ್ಟು 136 ಕೋಟಿ ರೂ. ಹಾಗೂ ಕೊಳೆರೋಗದಿಂದ 166 ಕೋಟಿ ರೂ. ನಷ್ಟವಾಗಿದೆ ಎಂದು ವಿರೋ್ ಪಕ್ಷದವರು ಸದನದ ಗಮನ ಸೆಳೆದರು. ಸಂಬಂಧಿಸಿದ ಸಚಿವರು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿವರಣೆ ನೀಎಇದತು.
ಬೆಂಗಳೂರು ರಸ್ತೆ ಗುಂಡಿಗಳು ಮತ್ತು ಸಾರಿಗೆ ಸಮಸ್ಯೆ
ಬೆಂಗಳೂರಿನ ರಸ್ತೆ ಗುಂಡಿಗಳ ಕುರಿತು ಗಂಭೀರ ಚರ್ಚೆ ನಡೆಯಿತು. 2025ರಲ್ಲಿ 13,000ಕ್ಕೂ ಹೆಚ್ಚು ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, 550 ಕಿ.ಮೀ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲು 1,100 ಕೋಟಿ ರೂ.ಗಳ ಯೋಜನೆಯನ್ನು ಸರ್ಕಾರ ಘೋಷಿಸಿದೆ. ಅಲ್ಲದೆ, ಸಮಗ್ರ ರಸ್ತೆ ಅಭಿವೃದ್ಧಿಗಾಗಿ 750 ಕೋಟಿ ರೂ. ಮೀಸಲಿಡಲಾಗಿದ್ದು, ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ತಿಳಿಸಿದರೂ, ಸದಸ್ಯರು ಮತ್ತು ಸಭಾಧ್ಯಕ್ಷರ ನಡುವೆ ಪರಸ್ಪರ ವಾಗ್ವಾದ ಮುಂದುವರಿಯಿತು.
ಹಲವು ಪ್ರದೇಶಗಳಲ್ಲಿ ಬಸ್ ಸೌಲಭ್ಯವಿಲ್ಲದಿರುವುದು, ಬಸ್ಗಳ ಕೊರತೆ ಹಾಗೂ ಡೀಸೆಲ್ ಕೊರತೆಯ ಬಗ್ಗೆ ಸಾರಿಗೆ ಸಚಿವರ ಗಮನ ಸೆಳೆಯಲಾಯಿತು. ಇದೇ ವೇಳೆ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಘೋಷಿಸಲಾದ ಇವಿ (ಎಲೆಕ್ಟ್ರಿಕ್) ಬಸ್ಗಳು ಮತ್ತು ಸಬ್ಸಿಡಿ ದರದಲ್ಲಿ ಬಸ್ ಒದಗಿಸುವ ಕುರಿತೂ ಚರ್ಚೆ ನಡೆಯಿತು.

ಶಿವಮೊಗ್ಗ ಸಂಚಾರ ದಟ್ಟಣೆ ನಿವಾರಣೆಗೆ ಸರ್ಕಾರದ ಕ್ರಮ:
ಶಿವಮೊಗ್ಗ ಜಿಲ್ಲೆಯಲ್ಲಿ ವಿಪರೀತವಾಗಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರವೇನು ಎಂದು ವಿರೋಧ ಪಕ್ಷದ ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸರ್ಕಾರ, ರಾಷ್ಟ್ರೀಯ ಹೆದ್ದಾರಿ-69ರಲ್ಲಿ ಬಾಕಿ ಉಳಿದಿದ್ದ 4.74 ಕಿ.ಮೀ ಉದ್ದದ ರಸ್ತೆಯನ್ನು ಚತುಷ್ಪಥ (ನಾಲ್ಕು ಪಥ) ರಸ್ತೆಯನ್ನಾಗಿ ನಿರ್ಮಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಅನುದಾನ ಮಂಜೂರಾಗಿದ್ದು, ಹೊರಭಾಗದ ವಾಹನಗಳು ನಗರ ಪ್ರವೇಶಿಸದೆ ಬೈಪಾಸ್ ಮೂಲಕ ಸುಗಮವಾಗಿ ಸಂಚರಿಸಲು ಅನುಕೂಲವಾಗಿದೆ.ನಗರದ ಪ್ರಮುಖ ರಸ್ತೆಗಳನ್ನು ಅಗಲೀಕರಣಗೊಳಿಸಿ ಚತುಷ್ಪಥ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ಗಳನ್ನು (ಕೆಂಪು, ಹಳದಿ, ಹಸಿರು ದೀಪಗಳು) ಅಳವಡಿಸಲಾಗಿದ್ದು, ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗುತ್ತಿದೆ. ಸಚಿವರು ನೀಡಿದ ಈ ಸಮಗ್ರ ಉತ್ತರಕ್ಕೆ ವಿರೋಧ ಪಕ್ಷದ ಸದಸ್ಯರು ಸಮ್ಮತಿ ಸೂಚಿಸಿ, ಸದನಕ್ಕೆ ಸಮರ್ಪಕ ಉತ್ತರ ದೊರೆತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಪಿಎಸ್ ಸಿ 362 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ ರದ್ದತಿ ಚರ್ಚೆ:
2011ರ ಕೆಪಿಎಸ್ಸಿ ನೇಮಕಾತಿ ಪ್ರಾಧಿಕಾರದ ಮೂಲಕ ನೇಮಕವಾಗಿದ್ದ 362 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವ ವಿಚಾರ ಸದನದಲ್ಲಿ ಪ್ರತಿಧ್ವನಿಸಿತು. ನೇಮಕಾತಿ ರದ್ದಾಗಿರುವುದರಿಂದ ಆ ಅಧಿಕಾರಿಗಳ ಮುಂದಿನ ಭವಿಷ್ಯ ಹಾಗೂ ಕೆಪಿಎಸ್ಸಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂದು ಸದಸ್ಯರು ಗಂಭೀರವಾಗಿ ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕೇವಲ ಶೇಕಡಾ 17ರಷ್ಟು ಇಂಜಿನಿಯರಿಂಗ್ ಪದವೀಧರರಿಗೆ ಮಾತ್ರ ಉದ್ಯೋಗ ಸಿಕ್ಕಿದ್ದು, ಉಳಿದ ಶೇಕಡಾ 83ರಷ್ಟು ಪದವೀಧರರಿಗೆ ಉದ್ಯೋಗ ಸಿಗಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬ ಪ್ರಶ್ನೆಯನ್ನು ವಿರೋಧ ಪಕ್ಷದ ಸದಸ್ಯರು ಕೇಳಿದರು.
ಇದಕ್ಕೆ ಉತ್ತರಿಸಿದ ಸರ್ಕಾರ, ಪದವೀಧರರಿಗೆ ಉದ್ಯೋಗ ಒದಗಿಸಲು ಮತ್ತು ಅವರ ಕೌಶಲ ವೃದ್ಧಿಸಲು ಹಲವು ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಿದೆ.
ಯುವನಿಧಿ ಯೋಜನೆ: ಈ ಯೋಜನೆಯ ಮೂಲಕ ಡಿಪ್ಲೊಮಾ ಮತ್ತು ಪದವೀಧರರಿಗೆ ಅವರು ಉದ್ಯೋಗ ಪಡೆಯುವವರೆಗೆ ಮಾಸಿಕವಾಗಿ ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಈ ಯೋಜನೆಯ ಮೂಲಕ ಅರ್ಹ ಪದವೀಧರರು ಮತ್ತು ಪೋಸ್ಟ್ ಗ್ರಾಜ್ಯುವೇಟ್ಗಳಿಗೆ ಉಚಿತ ಉನ್ನತ ತರಬೇತಿ ಹಾಗೂ ಕೌಶಲವನ್ನು ನೀಡಿ, ಆ ಮೂಲಕ ಅವರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ಕೌಶಲ್ಯ ಕರ್ನಾಟಕ ಕಾರ್ಯಕ್ರಮ ದಡಿ ತರಬೇತಿ, ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಉತ್ತರಿಸಿದರು.
—-_——-
ಶಾಸಕ ಎಸ್.ಎನ್. ಚನ್ನಬಸಪ್ಪ ಅವರ ಮಾತು:
ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು, ಆಡಳಿತ ಮತ್ತು ವಿರೋಧ ಪಕ್ಷಗಳು ದೇಶದ ನಾಗರಿಕರು, ರೈತರು, ಕೂಲಿ ಕಾರ್ಮಿಕರು ಹಾಗೂ ಬಡವರ ಬಗ್ಗೆ ಸಮಗ್ರವಾಗಿ ಆಲೋಚಿಸಬೇಕು. ರೈತರಿಗೆ ಪರಿಹಾರ ನೀಡುವಾಗ ಯಾರಿಂದ ತಪ್ಪಾಗಿದೆ ಎಂಬುದನ್ನು ಗಮನಿಸಿ, ರಾಜ್ಯ ಸರ್ಕಾರದ ಬೊಕ್ಕಸದಿಂದ ಅಗತ್ಯ ಸೌಲಭ್ಯ ಒದಗಿಸಬೇಕು ಎಂದರು.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಪೆಟ್ರೋಲ್ ಬೆಲೆ 1 ರೂ. ಹೆಚ್ಚಿಸಿ, ಆ ಹಣವನ್ನು ದೇಶದ ಅಭಿವೃದ್ಧಿ ಮತ್ತು ರಸ್ತೆ ಸಂಪರ್ಕಕ್ಕೆ ಬಳಸಿಕೊಂಡರು. ಯುದ್ಧದ ಸಮಯದಲ್ಲಿ ಪಕ್ಷಭೇದ ಮರೆತು ವಿರೋಧ ಪಕ್ಷವು ಆಡಳಿತ ಪಕ್ಷಕ್ಕೆ ಸಹಕಾರ ನೀಡಿತ್ತು. ವಾಜಪೇಯಿ ಅವರು ಇಂದಿರಾ ಗಾಂಧಿಯವರನ್ನು’ದೇಶ ರಕ್ಷಿಸಿದ ದುರ್ಗಿ’ ಎಂದು ಕರೆದಿದ್ದರು. ಪಕ್ಷಕ್ಕಿಂತ ದೇಶ ಮಿಗಿಲು. ಸದನದಲ್ಲಿ ಕೇವಲ ಪ್ರಶ್ನೋತ್ತರಗಳಾಗದೆ, ಸಮಗ್ರ ಅಧ್ಯಯನ ನಡೆಸಬೇಕು.ಜನರ ಹಿತಕ್ಕಾಗಿ ನಿರ್ಧಾರಗಳನ್ನು ಕೈಗೊಳ್ಳಬೇಕು. ಸಂಸತ್ತಿನ ಗ್ರಂಥಾಲಯಕ್ಕೆ ಭೇಟಿ ನೀಡಿ ಹಿಂದಿನ ದನ್ನು ತಿಳಿದುಕೊಳ್ಳಬೇಕು. ಪರಿಹಾರಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ರೈತರ ಹಿತಾಸಕ್ತಿ ಕಾಪಾಡಬೇಕು. ವಿರೋಧ ಪಕ್ಷದವರು ಪರಿಹಾರ ಹುಡುಕುವ ಮತ್ತು ಆಡಳಿತ ಪಕ್ಷದವರು ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.
ಮುಖ್ಯಮಂತ್ರಿಯಾಗಿ ಅಂಶಕ್, ವಿರೋಧ ಪಕ್ಷದ ನಾಯಕರಾಗಿ ಹಾಲಸ್ವಾಮಿ ಮತ್ತು ಸಭಾಪತಿಯಾಗಿ ದೀಕ್ಷಿತಾ ಸಿ ಅವರು ಯುವ ಸಂಸತ್ ನ ಹುದ್ದೆಗಳನ್ನು ನಿರ್ವಹಿಸಿದರು.