ಶಿವಮೊಗ್ಗ, ನ.04
ಮಕ್ಕಳ ಮಾರಾಟವು ಗಂಭೀರ ಸ್ವರೂಪದ ಅಪರಾಧವಾಗಿದ್ದು, ಯಾವುದೇ ಅನಧಿಕೃತವಾಗಿ ಮಗುವನ್ನು ನೀಡುವುದು ಮತ್ತು ಪಡೆಯುವುದು ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಎಚ್ಚರಿಸಿದೆ.

“ಪೋಷಕರಾಗಲು ಅಡ್ಡದಾರಿಯಿಲ್ಲ – ಕಾನೂನುಬದ್ಧ ದತ್ತು ಸ್ವೀಕಾರವೊಂದೇ ಸರಿಯಾದ ಮಾರ್ಗ” (No Shortcuts Parenthood-Only Legal Adoption) ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಯಿಂದ ಈ ಪ್ರಕಟಣೆ ಹೊರಡಿಸಲಾಗಿದೆ.
ಶಿಕ್ಷೆ ಮತ್ತು ದಂಡನೆ ವಿವರ:

ಬಾಲನ್ಯಾಯ ಕಾಯ್ದೆ-2015 ರ ಸೆಕ್ಷನ್ 81 ರ ಅನ್ವಯ ಮಕ್ಕಳನ್ನು ಮಾರುವವರಿಗೆ ಹಾಗೂ ಕೊಳ್ಳುವವರಿಗೆ 5 ವರ್ಷಗಳವರೆಗೆ ಸೆರೆಮನೆವಾಸದೊಂದಿಗೆ ರೂ. 1.00 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ. ಈ ಅಪರಾಧದಲ್ಲಿ ಆಶ್ರಯ ನೀಡಿದವರು ಶಾಮೀಲಾಗಿದ್ದರೆ, ಶಿಕ್ಷೆಯ ಅವಧಿಯು 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳವರೆಗೆ ವಿಸ್ತರಣೆಗೊಳ್ಳಲಿದೆ.

ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳ ಮಾಹಿತಿ ಕಂಡುಬಂದಲ್ಲಿ ಅಥವಾ ಮಗುವನ್ನು ದತ್ತು ಪಡೆಯಲು ಅಪೇಕ್ಷಿಸುವ ಪೋಷಕರು ಸರ್ಕಾರಿ ವಿಶೇಷ ದತ್ತು ಸಂಸ್ಥೆ, ಸರ್ಕಾರಿ ಬಾಲಕರ ಬಾಲಮಂದಿರ ಆವರಣ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸರ್ಕಾರಿ ವೀಕ್ಷಣಾಲಯ ಕಟ್ಟಡ, 100 ಅಡಿ ರಮ್ಮೆ, ಅಲ್ಕೋಳ, ಶಿವಮೊಗ್ಗ,
ದೂರವಾಣಿ ಸಂಖ್ಯೆ: 08182-295709
ಮಕ್ಕಳ ಸಹಾಯವಾಣಿ: 1098 ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.