ಶಿವಮೊಗ್ಗ: ಜಿಲ್ಲೆಯಾದ್ಯಂತ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಸಂಭ್ರಮ ಜಿಲ್ಲೆಯಾದ್ಯಂತ ಗರಿಗೆದರಿದ್ದು, ಪೂಜೆಗೆ ಅಗತ್ಯ ಹೂವು-ಹಣ್ಣು, ಬೂದುಗುಂಬಳ ಖರೀದಿಯ ಭರಾಟೆ ಮಾರುಕಟ್ಟೆಯಲ್ಲಿ ಜೋರಾಗಿ ಸಾಗಿದೆ.’

ನವರಾತ್ರಿ ಆಚರಣೆಯ ವೇಳೆ ಪ್ರತಿ ವ? ಹೂವುಗಳ ದರ ಏರಿಕೆ ಆಗುತ್ತದೆ. ಆದರೆ, ಕೆಲ ದಿನಗಳ ಹಿಂದೆ ಹೂವಿನ ದರ ಕುಸಿದಿತ್ತು. ಹಬ್ಬದ ವೇಳೆಗೆ ಮತ್ತೆ ಹೂವಿನ ದರ ಹೆಚ್ಚಾಗಿದೆ. ಎರಡು ವಾರಗಳವರೆಗೆ ಧಾರ್ಮಿಕ ಆಚರಣೆಗಳು ನಡೆಯುವುದರಿಂದ ಈ ಸಮಯದಲ್ಲಿ ಹೂವಿಗೆ ಹೆಚ್ಚಿನ ಬೇಡಿಕೆ ಬಂದಿದೆ.

ದಸರಾ ಹಬ್ಬದಲ್ಲಿ ಚಂಡು ಹೂ, ಸೇವಂತಿಗೆ, ಕನಕಾಂಬರ, ಗುಲಾಬಿ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆಯುಧ ಪೂಜೆ ದಿನ ವಾಹನ, ಕಚೇರಿ, ಮನೆಯಲ್ಲಿರುವ ವಸ್ತುಗಳನ್ನು ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ವಾಹನಗಳ ಅಲಂಕಾರಕ್ಕೆ ಹೂವು ಹೆಚ್ಚಾಗಿ ಮಾರಾಟವಾಗುವುದರಿಂದ ಹೂವಿನ ಬೇಡಿಕೆಯೂ ಹೆಚ್ಚಾಗಿದೆ.

ಪ್ರತಿ ಕೆ.ಜಿ ಕನಕಾಂಬರ ೮೦೦ ರೂ, ಮಲ್ಲಿಗೆ ೮೦೦, ಗುಲಾಬಿ ೪೦೦, ಸೇವಂತಿಗೆ ೪೦೦ ರು.ನಂತೆ ಮಾರಾಟವಾಗುತ್ತಿವೆ. ಆಯುಧ ಪೂಜೆಯ ದಿನ ಬಳಕೆಗೆ ಬೂದುಗುಂಬಳ ಪ್ರತಿ ಕೆ.ಜಿಗೆ ೪೦ರಿಂದ ಆರಂಭಗೊಂಡು ಗಾತ್ರದ ಆಧಾರದ ಮೇಲೆ ಒಂದಕ್ಕೆ ೧೦೦- ೨೦೦ರೂ. ವರೆಗೆ ಮಾರಾಟವಾದವು.

ನಿಂಬೆ ಹಣ್ಣು ಹಾಗೂ ಇತರ ಹೂ, ಹಣ್ಣುಗಳ ಬೆಲೆ ಈ ಬಾರಿ ಹೆಚ್ಚಳವಾಗಿದ್ದು, ಚೆಂಡು ಹೂವಿಗೆ ಮಾರಿಗೆ ೬೦ ರಿಂದ ೧೦೦ ರವರೆಗೆ ಇದೆ. ಇತರ ಸೇವಂತಿಗೆ, ಜಾಜಿ, ಮತ್ತು ಕಾಕಡ ಮಾರಿಗೆ ೧೫೦ ರಿಂದ ೨೫೦ ರವರೆಗೆ ಇದೆ. ಬಿಡಿ ಹೂವುಗಳು ಕೆಜಿ.೪೦೦ ರೂ. ಗಡಿ ದಾಟಿದೆ. ಸೇಬು, ಬಾಳೆಹಣ್ಣು, ಮುಸುಂಬಿ ಎಲ್ಲಾ ರೀತಿಯ ಹಣ್ಣುಗಳು ಕೂಡ ಏರಿಕೆಯಾಗಿವೆ.

ನಗರದ ಗಾಂಧಿ ಬಜಾರ್, ದುರ್ಗಿಗುಡಿ, ನೆಹರು ರಸ್ತೆ, ಬಿ.ಎಚ್. ರಸ್ತೆ, ಪೊಲೀಸ್ ಚೌಕಿ, ಗೋಪಾಳ, ವಿನೋಬನಗರ ಮಾರುಕಟ್ಟೆ ಜನಜಂಗುಳಿಯಿಂದ ಕೂಡಿದ್ದವು. ತರಕಾರಿ, ದಿನಸಿ, ಆಲಂಕಾರಿಕ ವಸ್ತುಗಳು ಮತ್ತು ಪೂಜೆಗೆ ಬೇಕಾಗುವ ಬೂದುಗುಂಬಳ, ಬಾಳೆಕಂದು, ಎಲೆ, ತೆಂಗಿನಕಾಯಿಯ ಖರೀದಿ ಜೋರಾಗಿತ್ತು.