ಹುಡುಕಾಟದ ವರದಿ: ಸ್ವಾಮಿ
ಶಿವಮೊಗ್ಗ,ಅ.19:
ಪ್ರಸಕ್ತ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯ ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಆನವೇರಿ ಜಿಲ್ಲಾ ಪಂಚಾಯತ್ ಚುನಾವಣೆ ಸಖತ್ ರಂಗೇರಿದೆ.
ಪ್ರಭಾವಿಗಳ ನಾಡು ಎಂದೇ ಕರೆಸಿಕೊಳ್ಳುವ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸರಹದ್ದಿನಲ್ಲಿರುವ ಆನವೇರಿ ಜಿಲ್ಲಾ ಪಂಚಾಯತ್ ಕ್ಷೇತ್ರ ವಿಶಾಲ ಹಾಗೂ ಪ್ರಭಾವಿಗಳ ಕ್ಷೇತ್ರವಾಗಿದೆ.

ಚುನಾವಣೆಯಲ್ಲಿ ಆನವೇರಿ ಕ್ಷೇತ್ರ ಸಾಮಾನ್ಯ ವರ್ಗದ ಅಭ್ಯರ್ಥಿಗೆ ಅವಕಾಶ ನೀಡಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷ ತಯಾರಿ ನಡೆಸಿದೆ. ಈ ನಡುವೆ 1986 ರಿಂದ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿರುವ ಗುಡಮಗಟ್ಟೆಯ ಹೆಚ್.ಜಿ. ಮಲ್ಲಯ್ಯ ಅವರನ್ನು ಪಕ್ಷ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿರುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತವೆ.

ಲಿಂಗಾಯಿತ ವರ್ಗದ ನಾಯಕ ಎಂದೇ ಗುರುತಿಸಿಕೊಂಡಿರುವ ಮಲ್ಲಯ್ಯ ಅವರು ರಾಜಕೀಯ, ಸಾಮಾಜಿಕ, ಪರಿಸರ, ಕ್ರೀಡೆ ಹಾಗೂ ಸಾಹಿತ್ಯಾತ್ಮಕವಾಗಿ ಈ ಭಾಗದ ಎಲ್ಲ ಜನರ ಪ್ರೀತಿ ವಿಶ್ವಾಸ ಪಡೆದಂತಹವರಾಗಿದ್ದಾರೆ.

ಸರಿಸುಮಾರು 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿರುವ ಮಲ್ಲಯ್ಯ ಅವರೆಂದರೆ ಈ ಭಾಗದ ಎಲ್ಲ ವರ್ಗದ ಜನರ ಪ್ರೀತಿಯ ಮೆಚ್ಚಿನ ನಾಯಕ ಎನಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಮಲ್ಲಯ್ಯ ಅವರು ಆತ್ಮೀಯರಾಗಿ ಎಲ್ಲರೊಂದಿಗೆ ಬೆರೆಯುವ ಮನೋಸ್ಥಿತಿಯೇ ಹಾಗೂ ಅವರಲ್ಲಿನ ತಾಳ್ಮೆಯ ಗುಣ ಎಲ್ಲರಿಗೂ ಅಚ್ಚುಮೆಚ್ಚು ಎನ್ನುವುದರಲ್ಲಿ ಎರಡು ಮಾತಿಲ್ಲ.

1991 ರಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಯಾಗುವ ಮೂಲಕ ಪಕ್ಷದ ಚುಕ್ಕಾಣಿ ಹೊತ್ತ ಮಲ್ಲಯ್ಯ ಅವರು ನಂತರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಹಾಗೆಯೇ ಹೊಳೆ ಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಜನ ಮೆಚ್ಚುಗೆಯ ಹಾಗೂ ಎಲ್ಲ ಪಕ್ಷಗಳ ಪ್ರೀತಿಯ ನಾಯಕರಾಗಿ ಬೆಳೆದಂತಹವರು.
ಅವರು
2000ನೇ ಸಾಲಿನಲ್ಲಿ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿದ್ದರು. ಇವರ ಸೇವೆಯನ್ನು ಗಮನಿಸಿದ ಕಾಂಗ್ರೆಸ್ ಸರ್ಕಾರ 2004 ರಲ್ಲಿ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

2010ರಲ್ಲಿ ಮತ್ತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅವರು 2013ರಲ್ಲಿ ಜಿಲ್ಲಾ ಕೆಡಿಪಿ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಲ್ಲದೆ, 2016ರಲ್ಲಿ ಬಗರ್ ಹುಕುಂ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸಕ್ತ 2020 ರಿಂದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಮಲ್ಲಯ್ಯ ಅವರು ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿ ಎಂಬುದನ್ನು ಇಡೀ ಪಕ್ಷದ ಎಲ್ಲಾ ಮುಖಂಡರು ಒಪ್ಪಿಕೊಳ್ಳುತ್ತಾರೆ ಹಾಗೂ ಅವರ ಗುಣಗಾನ ಮಾಡುತ್ತಾರೆ.

ಪ್ರಸ್ತುತ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು, ಇದರ ಶಿವಮೊಗ್ಗ ಜಿಲ್ಲಾ ಕೃಷಿ ಘಟಕದ ಅಧ್ಯಕ್ಷರಾಗಿದ್ದಾರೆ.
ಆನವೇರಿ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕನಾಗಿ ಆಯ್ಕೆಯಾಗಿದ್ದು, ಭದ್ರಾವತಿ ತಾಲ್ಲೂಕು ಕೃಷಿಕ ಸಮಾಜದ ನಿರ್ದೇಶಕರಾಗಿದ್ದಾರೆ. ಎಡೇಹಳ್ಳಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ನಿರ್ದೇಶಕರೂ ಆಗಿದ್ದಾರೆ

ಶಿವ ಪತ್ತಿನ ಸಹಕಾರ ಸಂಘ, ತರಳಬಾಳು ಯುವ ವೇದಿಕೆ, ನೀರು ಬಳಕೆದಾರರ ಸಂಘ, ಹಾಲು ಉತ್ಪಾದಕರ ಸಂಘ ಹಾಗೂ ವೀರಶೈವ ಸಮಾಜದ ಪ್ರಮುಖರಾಗಿ ಗುರುತಿಸಿಕೊಂಡಿರುವ ಮಲ್ಲಯ್ಯ ಅವರು ಈ ಬಾರಿ ಆನವೇರಿ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಸ್ಪರ್ಧಿಸಲು ಸಕಲ ತಯಾರಿ ನಡೆಸಿದ್ದಾರೆ.

ಹೆಚ್. ಜಿ. ಮಲ್ಲಯ್ಯ ಎಂಬ ಹೆಸರಿನ ಜೊತೆ “ಹಂಗುಮ” ಎಂದು ಜೊತೆಗೆ ಕರೆಸಿಕೊಳ್ಳುತ್ತಾರೆ. ಅಂದರೆ ಹಂಚಿನಮನೆ ಗುಡಮಗಟ್ಟೆ ಗುಡದಪ್ಪ ಮಲ್ಲಯ್ಯ ಎಂಬ ಹೆಸರನ್ನು ಶಾರ್ಟ್ ಅಂಡ್ ಸ್ವೀಟ್ ಆಗಿ ಕರೆಸಿಕೊಳ್ಳುವ ಮಲ್ಲಯ್ಯ ಅವರ ಚುನಾವಣೆ ಸ್ಪರ್ಧೆಗೆ ಕಾಂಗ್ರೆಸ್ ಪಕ್ಷದ ಎಲ್ಲಾ ಪ್ರಮುಖರು ಜೈ ಎಂದಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
ಪ್ರಭಾವಿಗಳ ಕ್ಷೇತ್ರದ ಈ ಚುನಾವಣೆಯಲ್ಲಿ ಮಲ್ಲಯ್ಯ ಅವರ ಸ್ಪರ್ಧೆ ಕಾಂಗ್ರೆಸ್ ಪಕ್ಷದಲ್ಲಿ ಹೊಸತನವನ್ನು ಮೂಡಿಸಿದೆ.