ಶಿವಮೊಗ್ಗ, ಸೆ.೨೪: ಪತ್ನಿಯ ಚಾರಿತ್ರ್ಯದ ಬಗ್ಗೆ ಅನುಮಾನಪಟ್ಟು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕು, ಮಚ್ಚು ಹಾಗೂ ಕಲ್ಲಿನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದ ಪತಿಗೆ ಶಿವಮೊಗ್ಗದ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹೨.೧೦ ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.

ಶಿವಮೊಗ್ಗದ ಟಿಪ್ಪುನಗರ ೬ನೇ ಕ್ರಾಸ್ ನಿವಾಸಿ ಅಬ್ದುಲ್ ಶೋಹೇಬ್ ಉರ್ಫ್ ಬಿಡಿ ಶಿಕ್ಷೆಗೆ ಗುರಿಯಾದ ಆರೋಪಿ. ಪ್ರೀತಿಸಿ ವಿವಾಹವಾಗಿದ್ದ ಪತ್ನಿ ಕೌಸರ್ ಫಿಸಾ ಅವರ ಶೀಲದ ಬಗ್ಗೆ ಅನುಮಾನಗೊಂಡಿದ್ದ ಆರೋಪಿ, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಕಾಸ್ತ್ರ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ.

ಈ ಸಂಬಂಧ ಮೃತೆಯ ತಾಯಿ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಅಂದಿನ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಎಂ.ಎಸ್. ದೀಪಕ್ ಹಾಗೂ ಮಂಜುನಾಥ್ ಅವರು ತನಿಖೆ ಪೂರ್ಣಗೊಳಿಸಿ ಆರೋಪಿಯ ವಿರುದ್ಧ IPC ಕಲಂ 498(ಎ) ಮತ್ತು 302ರ ಅಡಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ೨ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೆ.೨೩ರಂದು ತೀರ್ಪು ಪ್ರಕಟಿಸಿದರು. IPC ಕಲಂ 498(ಎ) ಹಾಗೂ 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ₹೨.೧೦ ಲಕ್ಷ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪುಷ್ಪ ಪಿ.ಓ. ವಾದ ಮಂಡಿಸಿದ್ದರು. ತನಿಖೆಗೆ ಸಿ.ಹೆಚ್.ಸಿ. ಕಿರಣ್ಕುಮಾರ್, ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗಳಾದ ಪ್ರಮೀಳಾ ಹಾಗೂ ಭಾಗ್ಯ ಸಹಕರಿಸಿದ್ದರು.