ಶಿವಮೊಗ್ಗ: ಡಾ.ಕಸ್ತೂರಿ ರಂಗನ್ ವರದಿ ಜಾರಿಯಿಂದಗುವ ದುಷ್ಪರಿಣಾಮಗಳನ್ನು ಚರ್ಚಿಸಿ ಮುಂದಿನ ಯೋರಾಟದ ರೂಪು ರೇಷೆ ರಚಿಸಲು ಸೆ.೨೭ರಂದು ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯಲ್ಲಿ ಪಶ್ಚಿಮ ಘಟ್ಟದ ೬ ರಾಜ್ಯಗಳ ಕಾನೂನು ತಜ್ಞರ ಸಮಿತಿ ರಚಿಸಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಬಂಗಾರಮಕ್ಕಿ ಕ್ಷೇತ್ರದ ಶ್ರೀ ಮಾರುತಿ ಗುರೂಜಿ ಅವರ ಮಾರ್ಗದರ್ಶನದಲ್ಲಿ ಈ ಸಮಿತಿ ರಚನೆಯಾಗಲಿದೆ. ಖ್ಯಾತ ಪರಿಸರ ತಜ್ಞರು, ಮಠಾಧೀಶರು, ಪ್ರಮುಖರು ಇದರಲ್ಲಿ ಭಾಗವಹಿಸಲಿದ್ದಾರೆ. ಇದು ಕೇವಲ ಡಾ.ಕಸ್ತೂರಿ ರಂಗನ್ ವರದಿಯ ಸಾಧಕ ಬಾಧಕ ಕುರಿತು ಚರ್ಚಿಸುವ ಸಭೆಯಾಗಿರದೆ ಪಶ್ಚಿಮ ಘಟ್ಟದ ಸೆರಗಿನಲ್ಲಿ ಸ್ಥಾಪನೆಯಾಗಲಿರುವ ಪರಿಸರ ಮಾರಕ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆಗಳ ಕುರಿತು ಚರ್ಚಿಸಲಾಗುವುದು ಎಂದರು.

ಪಂಪ್ಡ್ ಸ್ಟೊರೇಜ್ ಯೋಜನಾ ಪ್ರದೇಶದಲ್ಲಿ ಪ್ರಭಾವಿಯೊಬ್ಬರು ೨೫ ಎಕರೆ ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅದನ್ನು ರಕ್ಷಿಸಲು ರಾಷ್ಟ್ರಭಕ್ತರ ಬಳಗ ಪರಿಸರ ಉಳಿಸಿ ಹೆಸರಿನಲ್ಲಿ ಹೋರಾಟಕ್ಕೆ ಇಳಿದಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ ಹೇಳಿಕೆ ನೀಡಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಜಾರ್ಜ ಜನರ ದಾರಿ ತಪ್ಪಿಸುತ್ತಿದ್ದಾರೆ. ಟೆಂಡರ್ ಗೂ ಮುಂಚೆ ಗುತ್ತಿಗೆದಾರರಿಗೆ ೨೮೦ ಕೋಟಿ ರೂ. ಹಣ ನೀಡಿದ್ದೀರಿ. ಅದರ ಬಗ್ಗೆ ಸ್ಪಷ್ಟನೆ ನೀಡಿ ಎಂದು ಒತ್ತಾಯಿಸಿದ ಅವರು ರಸ್ತೇಲಿ ಹೋಗೋ ದಾಸ ಮಾತನಾಡಿದ ಹಾಗೆ ಜಾರ್ಜ ಮಾತನಾಡುತ್ತಿದ್ದಾರೆ. ಆ ೨೫ ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿದವರು ಯಾರು? ಅವರನ್ನು ಒದ್ದು ಒಳಗೆ ಹಾಕಿ. ಅಷ್ಟಕ್ಕೂ ಅವರು ಒತ್ತುವರಿ ಮಾಡಿಕೊಳ್ಳುವ ತನಕ ನೀವೇನು ಮಾಡ್ತಿದ್ರಿ ಎಂದು ತಿರುಗೇಟು ನೀಡಿದರು.

ವಂದೇ ಮಾತರಂ ಗೀತೆಗೆ ರಾಜ್ಯ ಸರ್ಕಾರ ಕತ್ತರಿ ಹಾಕಿದ್ದನ್ನು ಪ್ರಸ್ತಾಪಿಸಿದ ಈಶ್ವರಪ್ಪ, ವಂದೇ ಮಾತರಂ ಬಗ್ಗೆ ಚರ್ಚೆ ಆಗ್ತಿರೋದೇ ತಪ್ಪು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಂಕಿಮ್ ಚಂದ್ರ ಚಟರ್ಜಿ ಬರೆದ ಈ ಗೀತೆಗೆ ಮನಸೋತು ಲಕ್ಷಾಂತರ ಯುವಕರು ಈ ಗೀತೆ ಹಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಜೀವ ತೆತ್ತಿದ್ದಾರೆ. ಕಾಂಗ್ರೆಸ್ ತನ್ನ ಅಧಿವೇಶನಗಳಲ್ಲೇ ಇದನ್ನು ಪೂರ್ತಿ ಹಾಡಿದ್ದಿದೆ. ಈಗ ಕಾಂಗ್ರೆಸ್ ಜಾತ್ಯತೀತತೆ ಹೆಸರಿನಲ್ಲಿ ಮುಸಲ್ಮಾನರನ್ನು ಓಲೈಸಲು ವಂದೇ ಮಾತರಂಗೆ ದ್ರೋಹ ಬಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

೨೦೨೦ರ ದೆಹಲಿ ಘಟನೆಯಲ್ಲಿ ಪ್ರಮುಖ ಆರೋಪಿತನಾಗಿ ಜೈಲಿನಲ್ಲಿರುವ ಉಗ್ರ ಉಮರ್ ಖಲಿದ್ ನನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವನೊಬ್ಬ ರಾಷ್ಟ್ರೀಯವಾದಿ ಎಂದು ಬಣ್ಣಿಸಿದ್ದಾರೆ ಎಂಬ ಹೇಳಿಕೆಗೆ, ಉಗ್ರವಾದಿಗೆ ರಾಷ್ಟ್ರಭಕ್ತನ ಪಟ್ಟ ಕಟ್ಟಿದ ಹರಿಪ್ರಸಾದ್ಗೆ ರಾಜ್ಯ ಸರ್ಕಾರವೇ ವಿಶೇಷ ಪ್ರಶಸ್ತಿ ನೀಡಲಿ ಎಂದು ವ್ಯಂಗ್ಯವಾಡಿದರು.