

ಶಿವಮೊಗ್ಗ ಸೆ.16:
ಪ್ರಧಾನಿ ನರೆಂದ್ರ ಮೋದಿ ಅವರ 25 ವರ್ಷಗಳ ಸತತ ಸಾರ್ಥಕ ಜನಸೇವೆ, ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಹಾಗೂ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿ ಒಳಗೊಂಡ ಬಿಜೆಪಿ ಪಕ್ಷದ ‘ಸೇವಾ ಸಂಕಲ್ಪ ಅಭಿಯಾನ’ ಸೆ.17-ಅ.17ರ ವರೆಗೆ ನಡೆಯಲಿದ್ದು ಅದಕ್ಕೆ ನಾಳೆ ಸೆ.17ರಿಂದ ಚಾಲನೆ ನೀಡಲಾಗುವುದು. ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಕಸಿತ ಭಾರತ-2047ಕ್ಕೆ ಶಕ್ತಿ ಕೋರಿ ಜಿಲ್ಲೆಯ ಎಲ್ಲ 1,886 ಬೂತ್ಗಳಲ್ಲೂ ಪ್ರಧಾನಿ ಮೋದಿಯವರ 25 ವರ್ಷಗಳ ಸತತ, ನಿರಂತರ ಜನಪರ ಆಡಳಿತ, ಸಾರ್ಥಕ ಸಾಧನೆಗೆ ಕೃತಜ್ಞತೆಯ ದ್ಯೋತಕವಾಗಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳ ಕಾಲ ನಿರಂತರ ಸೇವೆಯನ್ನು ಪೂರ್ಣಗೊಳಿಸುತ್ತಿರುವ ಭಾರತದ ಏಕೈಕ ಹಾಗೂ ಚಾರಿತ್ರಿಕ ನಾಯಕ ನರೇಂದ್ರ ಮೋದಿ ಆಗಿದ್ದು ಅವರ ಜನ್ಮ ದಿನದ ಸಂಭ್ರಮವನ್ನು ಅರ್ಥಪೂರ್ಣವಾಗಿ, ಜನಸೇವಾ ಚಳವಳಿಯನ್ನಾಗಿ ಆಚರಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಕರೆ ಕೊಟ್ಟ ಹಿನ್ನೆಲೆಯಲ್ಲಿ ದೇಶಾದ್ಯಂತ ಆಚರಿಸುವಂತೆ ನಮ್ಮ ಜಿಲ್ಲೆಯಲ್ಲೂ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.


ಗುಜರಾತ್ ಮುಖ್ಯಮಂತ್ರಿಯಾಗಿ 13 ವರ್ಷ ಹಾಗೂ ಪ್ರಧಾನಿಯಾಗಿ 12 ವರ್ಷಗಳ ಆಡಳಿತ ನೀಡಿ ನೆಹರು ಅವರ ದಾಖಲೆ ಮುರಿದು ಹೊಸ ಇತಿಹಾಸ ಬರೆದಿದ್ದಾರೆ. ಪ್ರಧಾನಿಯಾಗಿಕಳೆದ 12 ವರ್ಷಗಳಲ್ಲಿ 25 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಮೇಲೆತ್ತಲಾಗಿದೆ. ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ 80 ಕೋಟಿ ಜನರಿಗೆ ಉಚಿತ ಪಡಿತರ, 12 ಕೋಟಿ ಶೌಚಾಲಯ ಹಾಗೂ 4 ಕೋಟಿಗೂ ಹೆಚ್ಚು ಬಡವರಿಗೆ ಉಚಿತ ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ದೇಶದ ಆರ್ಥಿಕತೆಯನ್ನು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುವ ಶಕ್ತಿಯಾಗಿ ರೂಪಿಸಿದ್ದಾರೆ ಎಂದು ಸಂಸದ ರಾಘವೇಂದ್ರ ಹೇಳಿದರು.

ಸೆ. 17 ಪ್ರಧಾನಿ ಮೋದಿಯವರ ಜನ್ಮದಿನವಾಗಿದ್ದು ಅದನ್ನು “ಆಶೀರ್ವಾದದ ದೀಪ” ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಕ್ಷೇತ್ರದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಸಂಜೆ ಪ್ರತಿಯೊಬ್ಬ ಕಾರ್ಯಕರ್ತರು ಮತ್ತು ನಾಗರಿಕರು ತಮ್ಮ ಮನೆಗಳ ಮುಂದೆ ‘ಆಶೀರ್ವಾದದ ದೀಪ’ ಬೆಳಗುವುದು. ಸೆ.18 -24 “ನಮೋ ಸೇವಾ ಗಾಥಾ”- ಮಹಿಳಾ ಮೋರ್ಚಾದಿಂದ ಸ್ವಚ್ಛತಾ ಅಭಿಯಾನ,ಪ.ಜಾ.ಪ.ಪಂ. ಮೋರ್ಚಾದಿಂದ ರಕ್ತದಾನ ಶಿಬಿರ, ರೈತ ಹಾಗೂ ಔಃಅ ಮೋರ್ಚಾದಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ನಾಗರಿಕ ಸೇವಾ ಕಾರ್ಯಾಗಾರಗಳು, ಯುವಮೋರ್ಚಾದಿಂದ ಸೈಕಲ್ ಜಾಥಾ ಹಾಗೂ ಸಾಂಸ್ಕೃತಿಕ ಪ್ರಕೋಷ್ಠದಿಂದ ಬೀದಿ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಸೆ.25 – ಅ. 6 ಪಂ.ದೀನ್ದಯಾಳ್ ಅವರ ಜಯಂತಿ ಹಾಗೂ ಸಂಪರ್ಕ ಕಾರ್ಯಕ್ರಮವಿದ್ದು ಸೆ. 25 ರಂದು ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಜಯಂತಿ ಆಚರಣೆ ಮತ್ತು ಅಂತ್ಯೋದಯ ಉಪನ್ಯಾಸ, ಸೆ. 27 ರಂದು ಬೂತ್ಗಳಲ್ಲಿ ‘ಮನ್ ಕೀ ಬಾತ್’ ವೀಕ್ಷಣೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ ಮತ್ತು ಉಚಿತ ಉಪಕರಣ ವಿತರಣೆ. ಅ. 2- 14 ಗಾಂಧಿ ಜಯಂತಿ ಹಾಗೂ ಸ್ವದೇಶಿ ಸಂತೆ ಇದ್ದು ಅಕ್ಟೋಬರ್ 2 ರ ಗಾಂಧಿ ಜಯಂತಿಯAದು ‘ಲೋಕಲ್ ಫಾರ್ ವೋಕಲ್’ ಉತ್ತೇಜನಕ್ಕೆ ಖಾದಿ ಪ್ರದರ್ಶನ ಮತ್ತು “ಸ್ವದೇಶಿ ಸಂತೆ”, ಅ. 7-14 ರವರೆಗಿನ ಶಾಲಾ ಮಕ್ಕಳಿಗೆ ಚಿತ್ರಕಲಾ ಮತ್ತು ಭಾಷಣ ಸ್ಪರ್ಧೆಗಳು ಏರ್ಪಾಟಾಗಿವೆ ಎಂದು ಮಾಹಿತಿ ನೀಡಿದರು.
ಪ್ರತಿ ಬಾರಿ ಕೇಂದ್ರ ಮಂತ್ರಿ ಮಂಡಳದ ಪುನಾರಚನೆಯಲ್ಲಿ ಶಿವಮೊಗ್ಗಕ್ಕೆ ಪ್ರಾತಿನಿಧ್ಯ ಸಿಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಇದರ ಬಗ್ಗೆ ನನಗೆ ಏನೂ ಮಾಹಿತಿ ಇಲ್ಲ. ಪಕ್ಷದ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ನೋಡೋಣ. ನಾನಂತೂ ಆ ಕುರಿತು ಏನೂ ತಯಾರಿ ಮಾಡಿಕೊಂಡಿಲ್ಲ. ಇನ್ನೂ ಅದೇ ಫುಲ್, ಹಾಫ್ ಶರ್ಟ್ ನಲ್ಲಿಯೇ ಓಡಾಡುತ್ತಿದ್ದೇನೆ. ಆ ಸಂದರ್ಭ ಬರಲಿ ನೋಡೋಣ ಎಂದು ರಾಘವೇಂದ್ರ ನಕ್ಕರು.
ಅಕ್ಟೋಬರ್ 17 ರಂದು ಬೃಹತ್ ಮಾನವ ರಂಗೋಲಿ ಮತ್ತು ಸೇವಾ ಜ್ಯೋತಿ ಬೆಳಗಿಸುವ ಮೂಲಕ ಒಂದು ತಿಂಗಳ ಸುದೀರ್ಘ ಅಭಿಯಾನಕ್ಕೆ ಅಧಿಕೃತ ತೆರೆ ಬೀಳಲಿದೆ ಎಂದ ಅವರು ಪ್ರಧಾನಿ ನರೇಂದ್ರ ಮೋದಿಯವರು 140 ಕೋಟಿ ಭಾರತೀಯರ ಸೇವೆಯನ್ನೇ ತಮ್ಮ ಧರ್ಮವನ್ನಾಗಿ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಕ್ಷೇತ್ರದ ಸಮಸ್ತ ನಾಗರಿಕರು, ಯುವಜನತೆ ಹಾಗೂ ತಾಯಂದಿರು ಈ ‘ಸೇವಾ ಸಂಕಲ್ಪ ಅಭಿಯಾನ’ದಲ್ಲಿ ರಕ್ತದಾನ, ಶಾಲಾ ಮಕ್ಕಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ವಚ್ಛತೆ ಹಾಗೂ ದೀಪ ಬೆಳಗಿಸುವ ಮೂಲಕ ಸಕ್ರಿಯವಾಗಿ ಭಾಗವಹಿಸಿ ಈ ಸೇವಾ ಯಜ್ಞವನ್ನು ಯಶಸ್ವಿಗೊಳಿಸಬೇಕು ಎಂದು ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಪ್ರಮುಖರಾದ ಶಿವರಾಜ್, ಜ್ಯೋತಿಪ್ರಕಾಶ್, ರಾಜೇಶ್ ಕಾಮತ್, ಮಂಜುನಾಥ್ ಮಂಜುನಾಥ ಎನ್. ಚಂದ್ರಶೇಖರ್ ಮೊದಲಾದವರಿದ್ದರು.
ಸಿಎಂ ಬರ್ತಾರೆ…
ಕಸ್ತೂರಿ ರಂಗನ್ ವರದಿ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೆ.19ರಂದು ತೀರ್ಥಹಳ್ಳಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ಇದೆ. ಅದು ಸರ್ಕಾರಿ ಕಾರ್ಯಕ್ರಮವಾಗಿದ್ದರಿಂದ ಸ್ವಾಭಾವಿಕವಾಗಿಯೇ ನಮಗ ಆಹ್ವಾನ ಇರುತ್ತದೆ. ನಾವೆಲ್ಲರೂ ಹೋಗುತ್ತೇವೆ. ಅಲ್ಲದೆ ಇದರ ಬಗ್ಗೆ ವಿಶೇಷ ಅಧಿವೇಶನವನ್ನೂ ಕರೆದಿದ್ದಾರೆ. ರೈತರ ಪರವಾಗಿ ನಮ್ಮ ಪಕ್ಷ ಸಿಎಂ ಅವರಿಗೆ ಮನವರಿಕೆ ಮಾಡಿಕೊಡುತ್ತದೆ. ಯಾವ ಕಾರಣಕ್ಕೂ ಈ ಭಾಗದ ರೈತರನ್ನು ಈಗಿದ್ದಲ್ಲಿಂದ ಒಕ್ಕಲೆಬ್ಬಿಸಲು ಬಿಡುವುದಿಲ್ಲ.
- ಬಿ.ವೈ.ರಾಘವೇಂದ್ರ, ಸಂಸದ.