

ಶಿವಮೊಗ್ಗ,ಸೆ.16:
ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ರೈತರು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆಯುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆ.19ರಂದು ತೀರ್ಥಹಳ್ಳಿಗೆ ಭೇಟಿ ನೀಡಲಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.




ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತ ಪದವಿ ಕಾಲೇಜಿನಲ್ಲಿ ರೈತರೊಂದಿಗೆ ಸಂವಾದ ಹಾಗೂ ಅನಂತಮೂರ್ತಿ ಪ್ರೌಢ ಶಾಲೆ ಮೈದಾನದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ವರದಿಯಿಂದ ಮಲೆನಾಡಿನ ರೈತರು, ಕೃಷಿ ಕಾರ್ಮಿಕರು ಹಾಗೂ ಸ್ಥಳೀಯ ಜನರಿಗೆ ಎದುರಾಗಬಹುದಾದ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳು ಮಾಹಿತಿ ಪಡೆಯಲಿದ್ದು, ಬಳಿಕ ಬಾಳೆಹೊನ್ನೂರಿಗೆ ತೆರಳಲಿದ್ದಾರೆ ಎಂದು ತಿಳಿಸಿದರು.


ಸೆ.21ರಿಂದ 23ರವರೆಗೆ ವಿಧಾನಮಂಡಲದ ವಿಶೇಷ ಅಧಿವೇಶನವೂ ನಡೆಯಲಿದೆ. ಕಸ್ತೂರಿ ರಂಗನ್ ವರದಿ ಕುರಿತು ರಾಜ್ಯ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ರೈತರು ಹಾಗೂ ಸಾರ್ವಜನಿಕರ ಅಭಿಪ್ರಾಯ ಆಲಿಸುವ ಪ್ರಕ್ರಿಯೆಯ ಭಾಗವಾಗಿ ಈ ಸಭೆ ನಡೆಯುತ್ತಿದೆ. ಇದು ಸರ್ಕಾರಿ ಕಾರ್ಯಕ್ರಮವಾಗಿದ್ದು, 25,000 ಸಾವಿರ ಜನರು ಭಾಗವಹಿಸುವ ಸಾಧ್ಯತೆ ಇದೆ ಎಂದರು.
ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಪ್ರಮುಖರಾದ ಮುಡುಬ ರಾಘವೇಂದ್ರ, ಆದರ್ಶ ಹುಂಚದಕಟ್ಟೆ, ಸಚೀಂದ್ರ ಹೆಗಡೆ, ಕೆಸ್ತೂರು ಮಂಜುನಾಥ, ಅಮರ ನಾಥ ಶೆಟ್ಟಿ ಇದ್ದರು.


ಪ್ರಚಾರಕ್ಕಾಗಿ ಭಿನ್ನತೆ ಸೃಷ್ಟಿಸುವುದು ಬೇಡ: ಕಿಮ್ಮನೆ ರತ್ನಾಕರ್:
ಬಾವುಟ ಹಾಗೂ ಹಾಡುಗಳು ಜನರನ್ನು ಒಗ್ಗೂಡಿಸುವ ವಿಚಾರಗಳಾಗಬೇಕು. ಭಿನ್ನತೆ ಸೃಷ್ಟಿಸುವ ಮೂಲಕ ದೇಶ ಕಟ್ಟಲು ಸಾಧ್ಯವಿಲ್ಲ. ಬದಲಾಗಿ ದೇಶ ಒಡೆಯಬಹುದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಜಿಲ್ಲಾಡಳಿತದಿಂದ ಆಯೋಜಿಸಿದ್ದ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡಿನ ಎರಡು ಚರಣಗಳನ್ನು ಹಾಡಿದ್ದಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ವಂದೇ ಮಾತರಂ ಹಾಡಿನ ಕುರಿತು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ನಾನು ಸಮರ್ಥಿಸುತ್ತೇನೆ. ಆದರೆ ಹಾಡಿನಿಂದ ಹಸಿವು ನೀಗುವುದಿಲ್ಲ. ಜನರ ಹಸಿವು ನೀಗಿಸುವಂತಹ ವಿಚಾರಗಳ ಕುರಿತು ಹೋರಾಟ ಮಾಡೋಣ. ಪ್ರಚಾರದ ಗೀಳಿಗಾಗಿ ಇಂತಹ ವಿಚಾರಗಳನ್ನು ಬಳಸಿಕೊಳ್ಳುವುದು ಬೇಡ ಎಂದು ಹೇಳಿದರು.