ತೀರ್ಥಹಳ್ಳಿ: ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಖಾಸಗಿ ಬಸ್ಸಿನ ಬ್ರೇಕ್ ಏಕಾಏಕಿ ಫೇಲ್ ಆಗಿ ಹಿಮ್ಮುಖವಾಗಿ (ರಿವರ್ಸ್) ಚಲಿಸಿದ ಪರಿಣಾಮ ನಾಲ್ಕು ಕಾರುಗಳು ಹಾಗೂ ಒಂದು ಬೈಕ್ ಜಖಂಗೊಂಡಿರುವ ಘಟನೆ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಬಳಿ ಸೆ.2ರ ಬುಧವಾರ ಸಂಜೆ ಸಂಭವಿಸಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಆಗುಂಬೆ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಖಾಸಗಿ ಬಸ್ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಹಿಂದಕ್ಕೆ ಚಲಿಸಿದೆ. ಈ ವೇಳೆ ಹಿಂಭಾಗದಲ್ಲಿದ್ದ ಕಾರುಗಳಿಗೆ ಬಸ್ ರಭಸವಾಗಿ ಡಿಕ್ಕಿ ಹೊಡೆದಿದ್ದು, ಸರಣಿ ಡಿಕ್ಕಿಯ ರಭಸಕ್ಕೆ 4ಕ್ಕೂ ಹೆಚ್ಚು ಕಾರುಗಳು ನಜ್ಜುಗುಜ್ಜಾಗಿವೆ. 1 ಬೈಕ್ ಜಖಂಗೊಂಡಿದೆ. ಆದರೆ ಘಟನೆ ವೇಳೆ ಕಾರುಗಳಲ್ಲಿದ್ದ ಸಾರ್ವಜನಿಕರು ಹಾಗೂ ರಸ್ತೆಬದಿಯಲ್ಲಿದ್ದ ಜನರು ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ವಾಹನ ಸವಾರರು ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.