ಶಿವಮೊಗ್ಗ: ಕ್ರೀಡೆಯಿಂದ ಶಿಸ್ತು, ಧೈರ್ಯ, ಆರೋಗ್ಯ, ಆತ್ಮವಿಶ್ವಾಸ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹಿರಿಯ ಕ್ರೀಡಾಪಟು ಹಾಗೂ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸಂತೋಷ್ ಹೊಳಲೂರು ಅಭಿಪ್ರಾಯಪಟ್ಟರು.
ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಶಿವಮೊಗ್ಗ ತಾಲ್ಲೂಕು ಹೊಳಲೂರು-ಎ ವಲಯ ಮಟ್ಟದ ಸರ್ಕಾರಿ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಗಳು ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ. ಆದರೆ ಇಂದಿನ ಯುವ ಪೀಳಿಗೆ ಕ್ರೀಡೆಯಿಂದ ವಿಮುಖರಾಗಿ ಕೇವಲ ಮೊಬೈಲ್, ಇನ್ನಿತರೇ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಪೋಷಕರು ಹಾಗೂ ಶಿಕ್ಷಕರು ಈ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಇತ್ತೀಚೆಗೆ ದೇಶದಲ್ಲಿ ಕ್ರೀಡೆಗೆ ಸಾಕಷ್ಟು ಉತ್ತೇಜನ ನೀಡಲಾಗುತ್ತಿದೆ. ಕ್ರೀಡಾಪಟುಗಳನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿಯೇ ಕಾಮನ್ವೆಲ್ತ್ ಸೇರಿದಂತೆ ಒಲಂಪಿಕ್ ಕ್ರೀಡೆಯಲ್ಲಿ ಆಯೋಜಿಸುವ ಕುರಿತು ಚಿಂತನೆ ನಡೆಯುತ್ತಿದ್ದು, ಇದಕ್ಕಾಗಿ ಖೇಲೋ ಇಂಡಿಯಾದ ಮೂಲಕ ಗ್ರಾಮೀಣ ಕ್ರೀಡಾಪಟುಗಳನ್ನು ಉತ್ತೇಜಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

ಇನ್ನೂ ಸ್ಮಾರ್ಟ್ಸಿಟಿ ಯೋಜನೆಯಡಿ ನಗರದ ನೆಹರು ಕ್ರೀಡಾಂಗಣವನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ಅಭಿವೃದ್ಧಿ ಪಡಿಸಿದ್ದು, ಶಿವಮೊಗ್ಗ ತಾಲ್ಲೂಕಿನ ಎಲ್ಲಾ ನಗರ ಮತ್ತು ಗ್ರಾಮೀಣ ಕ್ರೀಡಾಪಟುಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಎಸ್ಡಿಎಂಸಿ ಅಧ್ಯಕ್ಷ ಓಂಕಾರಪ್ಪ ಹೊಳಲೂರು ಸೇರಿದಂತೆ ಅನೇಕರಿದ್ದರು.