ಶಿವಮೊಗ್ಗ: ನಗರದ ವಿವಿಧೆಡೆ ಉಪವಿಭಾಗಾಧಿಕಾರಿ ಡಾ. ಮೈತ್ರಿ ಹಾಗೂ ತಹಶೀಲ್ದಾರ್ ರಾಜೀವ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಿಢೀರ್ ತಪಾಸಣೆ ನಡೆಸಿತು.

ನಗರದ ಹೋಟೆಲ್ ಹರ್ಷಗೆ ಭೇಟಿ ನೀಡಿದ ಅಧಿಕಾರಿಗಳು ಆಹಾರ ತಯಾರಿಕಾ ಸ್ಥಳ, ಆಹಾರ ಪದಾರ್ಥಗಳ ಗುಣಮಟ್ಟ, ಸಂಗ್ರಹಣೆ ಹಾಗೂ ಹೋಟೆಲ್ನ ಸ್ವಚ್ಛತಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಸಾರ್ವಜನಿಕರಿಗೆ ಗುಣಮಟ್ಟದ ಹಾಗೂ ಸುರಕ್ಷಿತ ಆಹಾರ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಬಳಿಕ ತಾವರೆಕೊಪ್ಪದ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅಲ್ಲಿನ ಸ್ವಚ್ಛತೆ, ನಿರ್ವಹಣಾ ವ್ಯವಸ್ಥೆ ಹಾಗೂ ನಿರಾಶ್ರಿತರಿಗೆ ಒದಗಿಸಲಾಗುತ್ತಿರುವ ಮೂಲಸೌಕರ್ಯ ಮತ್ತು ಅಗತ್ಯ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.

ನಂತರ ವಿನೋಬನಗರದ ಸವಿ ಬೇಕರಿಗೆ ತೆರಳಿದ ಅಧಿಕಾರಿಗಳು ಬೇಕರಿಯಲ್ಲಿ ಆಹಾರ ಪದಾರ್ಥಗಳ ತಯಾರಿಕೆ ನಡೆಯುವ ಸ್ಥಳ, ಸ್ವಚ್ಛತೆ, ಪದಾರ್ಥಗಳ ಗುಣಮಟ್ಟ ಹಾಗೂ ಆಹಾರ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು.

ಹೋಟೆಲ್ಗಳು ಹಾಗೂ ಬೇಕರಿಗಳಲ್ಲಿ ಸ್ವಚ್ಛತೆ ಮತ್ತು ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಸಂಬಂಧಪಟ್ಟವರಿಗೆ ಸೂಚಿಸಿದರು.
ನಗರದ ವಿವಿಧೆಡೆ ಅಧಿಕಾರಿಗಳಿಂದ ನಡೆದ ಈ ಸರಣಿ ತಪಾಸಣೆ ಸಾರ್ವಜನಿಕರ ಆರೋಗ್ಯ ಮತ್ತು ಆಹಾರ ಸುರಕ್ಷತೆಗೆ ಆಡಳಿತ ಕೈಗೊಂಡಿರುವ ಕ್ರಮದ ಭಾಗವಾಗಿದೆ.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮೈತ್ರಿ ,ತಹಶೀಲ್ದಾರ್ ರಾಜೀವ್ ,ಆರ್ಐ ಅ.ಮ ಶಿವಮೂರ್ತಿ ಗ್ರಾಮ ಅಡಳಿತಧಿಕಾರಿ ಮೋಹನ್ ಅಧಿಕಾರಿಗಳು ಇದ್ದರು