ಶಿವಮೊಗ್ಗ,ಆ.26: ಆತ್ಮಹತ್ಯೆಗಾಗಿ ತುಂಗಾ ನದಿಗೆ ಹಾರಿ ಅದೃಷ್ಟವಶಾತ್ ಬದುಕುಳಿದ ತಾಯಿ ಈಗ ತನ್ನ ಇಬ್ಬರು ಮಕ್ಕಳಿಗಾಗಿ ಪರಿತಪಿಸುತ್ತಿದ್ದಾಳೆ.

ಆಗಸ್ಟ್ ೨೪ ರ ಸಂಜೆ ಚಿತ್ರದುರ್ಗ ಮೂಲದ ಮಹಿಳೆಯೋರ್ವರು ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಮೂವರು ಮಕ್ಕಳೊಂದಿಗೆ ಶಿವಮೊಗ್ಗದ ಹೊಳೆ ಬಸ್ ನಿಲ್ದಾಣ ಸಮೀಪದ ಚಿಕ್ಕಲ್ ರಸ್ತೆಯ ಅರಕೇಶ್ವರ ದೇವಾಲಯ ಬಳಿಯ ರೈಲ್ವೆ ಹಳಿಯ ಮೇಲಿಂದ ನದಿಗೆ ಹಾರಿದ್ದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಯುವಕರು ಮಹಿಳೆ ಹಾಗೂ ೧೧ ತಿಂಗಳ ಗಂಡು ಮಗುವನ್ನು ರಕ್ಷಿಸಿದ್ದರು. ಮಹಿಳೆ ಹಾಗೂ ಮಗುವನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ೬ ವರ್ಷ ಹಾಗೂ ೪ ವರ್ಷದ ಇಬ್ಬರು ಹೆಣ್ಣು ಮಕ್ಕಳ ಸುಳಿವು ಲಭ್ಯವಾಗಿರಲಿಲ್ಲ.

ಕಣ್ಮರೆಯಾಗಿರುವ ಇಬ್ಬರು ಹೆಣ್ಣು ಮಕ್ಕಳ ಶೋಧ ಕಾರ್ಯಾಚರಣೆಯನ್ನು ಅಗ್ನಿಶಾಮಕ ದಳ ತಂಡ ಬುಧವಾರವೂ ಕೂಡ ಬೋಟ್ ಮೂಲಕ ಶೋಧ ನಡೆಸುತ್ತಿದ್ದು, ಮೂರನೇ ದಿನಕ್ಕೆ ಕಾಲಿಟ್ಟಿದೆ. ಸುಮಾರು ಐದಾರು ಕಿ.ಮೀ. ದೂರದವರೆಗೆ ತಂಡ ಶೋಧ ನಡೆಸಿದರೂ ಇಬ್ಬರು ಮಕ್ಕಳ ಸುಳಿವು ಲಭ್ಯವಾಗಿಲ್ಲ.
ಅಗ್ನಿಶಾಮಕ ದಳದ ಠಾಣಾಧಿಕಾರಿ ಹುಸೇನ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಲ್ ಎಫ್ ಸುನೀಲ್, ಗಣೇಶ್, ಮಾರುತಿ, ಸಂತೋಷ್, ನಿಹಾರ್, ಸತೀಶ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.