ಶಿವಮೊಗ್ಗ: ಶಿವಮೊಗ್ಗ ಉಪವಿಭಾಗಾಧಿಕಾರಿ ಹುದ್ದೆಗೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳಿಂದ ಉಂಟಾಗಿದ್ದ ಗೊಂದಲಕ್ಕೆ ಸರ್ಕಾರದ ಆದೇಶದಿಂದ ಅಂತಿಮ ಸ್ಪಷ್ಟತೆ ದೊರೆತಿದೆ. ಡಾ. ಮೈತ್ರಿ ಹೆಚ್.ಪಿ. ಅವರೇ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮುಂದುವರಿಯಲಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಮೈತ್ರಿ ಅವರನ್ನು ಸರ್ಕಾರ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ವರ್ಗಾವಣೆ ಮಾಡಿತ್ತು. ಆದರೆ, ಶಿವಮೊಗ್ಗದ ಹಾಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ ಅವರಿಗೆ ಪರ್ಯಾಯ ಸ್ಥಳ ನಿಯೋಜನೆ ಮಾಡದೆಯೇ ವರ್ಗಾವಣೆ ಆದೇಶ ಹೊರಡಿಸಿರುವುದನ್ನು ಪ್ರಶ್ನಿಸಿ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಕೆಎಟಿ, ವರ್ಗಾವಣೆಗೊಂಡ ಅಧಿಕಾರಿಗೆ ಸೂಕ್ತ ಸ್ಥಳ ನಿಯೋಜನೆ ಮಾಡುವವರೆಗೆ ವರ್ಗಾವಣೆ ಆದೇಶ ಜಾರಿಗೊಳಿಸದಂತೆ ಮಧ್ಯಂತರ ತಡೆ ನೀಡಿತ್ತು. ಇದರಿಂದ ಶಿವಮೊಗ್ಗ ಎಸಿ ಹುದ್ದೆಯಲ್ಲಿ ಯಾರು ಮುಂದುವರಿಯಲಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರು ಹಾಗೂ ಆಡಳಿತ ವಲಯದಲ್ಲಿ ಮೂಡಿತ್ತು.

ಇದೀಗ ಡಾ. ಮೈತ್ರಿ ಹೆಚ್.ಪಿ. ಅವರೇ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮುಂದುವರಿಯುವುದು ಸ್ಪಷ್ಟವಾಗಿದ್ದು, ಕೆಲ ದಿನಗಳಿಂದ ಇದ್ದ ಆಡಳಿತಾತ್ಮಕ ಗೊಂದಲಕ್ಕೆ ತೆರೆ ಬಿದ್ದಿದೆ.
ಎಸಿ ಹುದ್ದೆಯ ವಿಚಾರದಲ್ಲಿ ಉಂಟಾಗಿದ್ದ ಅನಿಶ್ಚಿತತೆ ನಿವಾರಣೆಯಾಗಿರುವುದರಿಂದ ಉಪವಿಭಾಗ ಮಟ್ಟದ ಆಡಳಿತ ಕಾರ್ಯಗಳು ಎಂದಿನಂತೆ ಮುಂದುವರಿಯುವ ನಿರೀಕ್ಷೆ ಇದೆ.