ಶಿವಮೊಗ್ಗ: ಗಾಜನೂರು ಅಗ್ರಹಾರದ ಶ್ರೀ ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂಘದ ವತಿಯಿಂದ ಮೀನುಗಾರಿಕೆ ವೃತ್ತಿಯನ್ನು ಅವಲಂಬಿಸಿ ಜೀವನ ನಡೆಸುತ್ತಿರುವ ಮೀನುಗಾರರ ಅಭಿವೃದ್ಧಿಗಾಗಿ ತುಂಗಾ ಜಲಾಶಯದ ಅಂಚಿನಲ್ಲಿರುವ 0.20 ಹೆಕ್ಟೇರ್ ಮೀನು ಮರಿ ಪಾಲನಾ ಕೊಳದಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ 10 ಲಕ್ಷ ಕಾಟ್ಲಾ ಹಾಗೂ ರೋಹು ಜಾತಿಯ ಸ್ಪಾನ್

ಮರಿಗಳನ್ನು ಪಾಲನೆ ಮಾಡಲಾಗಿತ್ತು. ಈ ಪೈಕಿ 80ರಿಂದ 100 ಮಿ.ಮೀ. ಗಾತ್ರದ 2.50 ಲಕ್ಷ ಬಲಿತ ಮೀನು ಮರಿಗಳನ್ನು ಆ.24ರಂದು ತುಂಗಾ ಜಲಾಶಯದ ಹುಲಿಹಳ್ಳ ಕ್ರಾಸ್ ಬಳಿಯಲ್ಲಿ ಬಿತ್ತನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯ ಶಿವಮೊಗ್ಗ ವಲಯದ ಜಂಟಿ ನಿರ್ದೇಶಕ ಷಡಕ್ಷರಿ ಜಿ.ಎಸ್., ಶಿವಮೊಗ್ಗ ಜಿಲ್ಲೆ ಮೀನುಗಾರಿಕೆ ಉಪನಿರ್ದೇಶಕ ಶಿವಕುಮಾರ್ ಜಿ.ಎಂ., ಶಿವಮೊಗ್ಗ ತಾಲ್ಲೂಕು ಮೀನುಗಾರಿಕೆ ಸಹಾಯ ನಿರ್ದೇಶಕ ರಾಘವೇಂದ್ರ ಕೆ.ಎಸ್., ಗಾಜನೂರು ಮೀನುಮರಿ ಪಾಲನಾ ಕೇಂದ್ರದ ಡಾ. ವಿನಯ್ ಕುಮಾರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಅರಸಯ್ಯ, ಪದಾಧಿಕಾರಿಗಳಾದ ಮಹೇಶ್ ಎಂ., ಆಕಾಶ್, ಶಿವಕುಮಾರ್, ಗಂಗಾಧರ, ಪ್ರಕಾಶ್ ಹಾಗೂ ಶೇಷಾಚಾರಿ ಅವರು ಮೀನುಮರಿ ಪಾಲನೆ ಮತ್ತು ಬಿತ್ತನೆ ಚಟುವಟಿಕೆಯನ್ನು ಶ್ರಮವಹಿಸಿ ಕಾರ್ಯಗತಗೊಳಿಸಿದರು.