ಶಿವಮೊಗ್ಗ: ವಿನೋಬನಗರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೊಮಿನಕೊಪ್ಪದಲ್ಲಿ ಇಂದು ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ‘ನಶಾಮುಕ್ತ ಭಾರತ’ ಹಾಗೂ ‘ಬೇಡ ಬ್ರೋ, ಗಾಂಜಾ ಬೇಡ ಬ್ರೋ’ ಎಂಬ ಸಂದೇಶದೊಂದಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಯುವಜನರು ಮಾದಕ ವ್ಯಸನಗಳಿಂದ ದೂರವಿದ್ದು, ಆರೋಗ್ಯಕರ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಸಂದೇಶವನ್ನು ಮೆರವಣಿಗೆಯ ಸಂದರ್ಭದಲ್ಲಿ ನೀಡಲಾಯಿತು. ಮಾದಕ ವಸ್ತುಗಳ ಸೇವನೆ ಹಾಗೂ ಅಕ್ರಮ ಚಟುವಟಿಕೆಗಳಿಂದಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ನಗರ ಬಿ ವಿಭಾಗದ ಡಿವೈಎಸ್ಪಿ ಸಂಜೀವ್ ಕುಮಾರ್ ಹಾಗೂ ವಿನೋಬನಗರ ಪೊಲೀಸ್ ಠಾಣೆಯ ಪಿಐ ಸಂತೋಷ್ ಕುಮಾರ್ ಡಿ.ಕೆ. ಅವರ ನೇತೃತ್ವದಲ್ಲಿ ಈ ಜಾಗೃತಿ ಕಾರ್ಯಕ್ರಮ ನಡೆಯಿತು.

ಪೊಲೀಸರ ಈ ಜಾಗೃತಿ ಅಭಿಯಾನಕ್ಕೆ ಸಾರ್ವಜನಿಕರು ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರು ಉತ್ತಮ ಸ್ಪಂದನೆ ನೀಡಿದರು. ‘ಗಾಂಜಾ ಬೇಡ, ಭವಿಷ್ಯ ಬೇಕು’ ಎಂಬ ಸಂದೇಶದ ಮೂಲಕ ಮಾದಕ ಮುಕ್ತ ಸಮಾಜ ನಿರ್ಮಾಣಕ್ಕೆ ಕರೆ ನೀಡಲಾಯಿತು.