ಶಿವಮೊಗ್ಗ: ಕೌಟುಂಬಿಕ ಕಲಹದಿಂದ ಮನೊಂದ ಮಹಿಳೆಯೊಬ್ಬರು 30ಕ್ಕೂ ಹೆಚ್ಚು ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ. ಸಾರ್ವಜನಿಕರು ನೀಡಿದ ತುರ್ತು ಮಾಹಿತಿ ಮತ್ತು ಪೊಲೀಸರ ಕ್ಷಿಪ್ರ ಸ್ಪಂದನೆಯಿಂದ ಮಹಿಳೆಯ ಪ್ರಾಣ ಉಳಿಸಲಾಗಿದೆ.

ಘಟನೆಯ ವಿವರ: ಕೌಟುಂಬಿಕ ಸಮಸ್ಯೆಯಿಂದ ನೊಂದಿದ್ದ ಮಹಿಳೆಯೊಬ್ಬರು ಹೆಚ್ಚಿನ ಪ್ರಮಾಣದಲ್ಲಿ ಮಾತ್ರೆಗಳನ್ನು ಸೇವಿಸಿರುವ ಕುರಿತು ERSS 112 ತುರ್ತು ಸಹಾಯವಾಣಿಗೆ ಕರೆ ಬಂದಿತ್ತು. ಕರೆ ಸ್ವೀಕರಿಸಿದ ಕೂಡಲೇ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ERV – Emergency Response Vehicle ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.

ಸ್ಥಳಕ್ಕೆ ತೆರಳಿದ CHC ವೀರೇಶಯ್ಯ ಬಿ.ಎಂ. ಹಾಗೂ DAR ಶಿವಮೊಗ್ಗದ AHC ಸುರೇಶ್ ನಾಯ್ಕ ಅವರು ಪರಿಸ್ಥಿತಿ ಪರಿಶೀಲಿಸಿದರು. ಮಹಿಳೆ 30ಕ್ಕೂ ಹೆಚ್ಚು ಮಾತ್ರೆಗಳನ್ನು ಸೇವಿಸಿದ್ದು, ತಕ್ಷಣ ಚಿಕಿತ್ಸೆ ಅಗತ್ಯವಿರುವುದನ್ನು ಗುರುತಿಸಿದ ಸಿಬ್ಬಂದಿ ವಿಳಂಬ ಮಾಡದೆ ERSS ವಾಹನದಲ್ಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರು.

ಈಗ ಮಹಿಳೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯರ ಪ್ರಕಾರ ಮಹಿಳೆಯ ಆರೋಗ್ಯ ಸ್ಥಿರವಾಗಿದೆ.
ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಈ ಪ್ರಕರಣದಲ್ಲಿ ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಜೀವ ಉಳಿಸಿದ ERSS 112 ಸಿಬ್ಬಂದಿಯ ಕಾರ್ಯವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಶ್ಲಾಘಿಸಿದೆ. ಕರ್ತವ್ಯನಿಷ್ಠೆ ಮತ್ತು ತ್ವರಿತ ಸ್ಪಂದನೆ ತೋರಿದ CHC ವೀರೇಶಯ್ಯ ಬಿ.ಎಂ. ಮತ್ತು AHC ಸುರೇಶ್ ನಾಯ್ಕ ಅವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ.