ಶಿವಮೊಗ್ಗ: ಕೊಡಚಾದ್ರಿ ಶಿಖರ ವೀಕ್ಷಣೆಗೆ ಬಂದಿದ್ದ ಬೆಂಗಳೂರಿನ ಯಲಹಂಕ ಮೂಲದ ಯುವಕ ಶ್ರೀಕಾಂತ್ (28) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೇವಲ ಒಂದು ತಿಂಗಳ ಅಂತರದಲ್ಲಿ ಈ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ನಡೆದಿರುವ ಎರಡನೇ ಘಟನೆ ಇದಾಗಿದೆ.
ಜುಲೈ 17ರಂದು ಸ್ನೇಹಿತರೊಂದಿಗೆ ಆಗಮಿಸಿದ್ದ ಶ್ರೀಕಾಂತ್, ಹೊಸನಗರ ತಾಲೂಕಿನ ಸಂಪೆಕಟ್ಟೆ ಸಮೀಪದ ಕಟ್ಟಿನಹೊಳೆಯ ಸ್ನೇಹಿತನ ಮನೆಯಲ್ಲಿ ತಂಗಿದ್ದರು. ಇಂದು ಮುಂಜಾನೆ ಕೊಡಚಾದ್ರಿ ಚಾರಣಕ್ಕೆ ಹೋಗಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ರಾತ್ರಿ ವೇಳೆ ಶ್ರೀಕಾಂತ್ ಅವರಿಗೆ ದಿಢೀರ್ ಆರೋಗ್ಯ ಏರುಪೇರಾಗಿ ಮನೆಯಲ್ಲೇ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಸ್ನೇಹಿತರು ಅವರನ್ನು ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರಾದರೂ, ಶ್ರೀಕಾಂತ್ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ತೀವ್ರ ಹೃದಯಾಘಾತವೇ ಸಾವಿಗೆ ಕಾರಣ ಎನ್ನಲಾಗಿದೆ.
ಸದ್ಯ ಮೃತದೇಹವನ್ನು ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದ್ದು,ಹೊಸನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.