ಶಿವಮೊಗ್ಗ : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಬಗ್ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ರಾಷ್ಟ್ರಭಕ್ತ ಬಳಗವು ತೀವ್ರವಾಗಿ ಖಂಡಿಸಿದೆ. ಕೂಡಲೇ ಬೇಳೂರು ಗೋಪಾಲಕೃಷ್ಣ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಮೋಹನ್ ಜಾಧವ್ ಆಗ್ರಹಿಸಿದರು.
ಇಂದು ರಾಷ್ಟ್ರಭಕ್ತರ ಬಳಗದ ವತಿಯಿಂದ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ದೇಶದಲ್ಲಿನ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಒಂದೇ ಹಂತದಲ್ಲಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಈಶ್ವರಪ್ಪನವರು ಇಂದಿಗೂ ಬಿಜೆಪಿ ಪಕ್ಷದ ನಿಷ್ಠಾವಂತ ನಾಯಕರಾಗಿದ್ದು, ಅವರ ರಾಷ್ಟ್ರಭಕ್ತಿ, ಹಿಂದೂತ್ವ ಮತ್ತು ರಾಜಕೀಯ ಹೋರಾಟದ ಹಾದಿಯ ಬಗ್ಗೆ ಮಾತನಾಡಲು ಬೇಳೂರು ಅರ್ಹರಲ್ಲ ಎಂದು ಕಿಡಿಕಾರಿದರು.

ಈಶ್ವರಪ್ಪನವರ ರಾಜಕೀಯ ಜೀವನವೇ ನೆಲೆಗಟ್ಟಿನಲ್ಲಿ ಬೆಳೆದು ಬಂದಿದೆ. ರಾಷ್ಟ್ರಪ್ರೇಮಿ ಮುಸ್ಲಿಮರನ್ನು ಅವರು ಎಂದಿಗೂ ವಿರೋಧಿಸುವುದಿಲ್ಲ. ಆದರೆ ಧರ್ಮವಿರೋಧಿಗಳು ಯಾರೇ ಆದರೂ ಅವರನ್ನು ವಿರೋಧಿಸದೆ ಬಿಡುವುದಿಲ್ಲ. ಬಹುಶಃ ಹಿಂದೂತ್ವವಾದಿಗಳನ್ನು ಟಾರ್ಗೆಟ್ ಮಾಡಿ ಮಾತನಾಡಿದರೆ ಹಿಂದೂ ವಿರೋಧಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಬಹುದು ಎಂಬ ಕನಸಿನಿಂದ ಬೇಳೂರು ಅವರು ಈಶ್ವರಪ್ಪನವರ ಬಗ್ಗೆ ವೈಯಕ್ತಿಕ ನೆಲೆಯಲ್ಲಿ ಮಾತನಾಡಿರಬಹುದು ಎಂದು ಅವರು ಆರೋಪಿಸಿದರು.
ಈಶ್ವರಪ್ಪನವರು ರಾಜ್ಯದಲ್ಲೇ ಹೆಮ್ಮರವಾಗಿದ್ದು ಅವರ ಕೆಳಗೆ ಸಾವಿರಾರು ಕಾರ್ಯಕರ್ತರನ್ನು ಬೆಳೆಸಿದ್ದಾರೆ. ನಾಯಕರನ್ನಾಗಿ ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯಕರ್ತರಿಗೆ ಟಿಕೇಟ್ ನೀಡಿ ಗೆಲ್ಲಿಸಿದ್ದಾರೆ. ಜಿ.ಪಂ. ಸದಸ್ಯರನ್ನಾಗಿ ಮಾಡಿದ್ದಾರೆ. ಮೇಯರ್, ಉಪ ಮೇಯರ್, ನಿಗಮಗಳ ಅಧ್ಯಕ್ಷರನ್ನಾಗಿ ಮಾಡಿ, ನಿಷ್ಠಾವಂತ ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡಿದ್ದಾರೆ. ಬೇಳೂರು ಯಾರನ್ನು ಬೆಳೆಸಿದ್ದಾರೆ. ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಇದೇ ವೇಳೆ ಶರಾವತಿ ಪಂಪ್ ಹೌಸ್ ಯೋಜನೆಯನ್ನು ಈಶ್ವರಪ್ಪನವರು ಯಾವುದೇ ರಾಜಕೀಯ ಲಾಭಕ್ಕಾಗಿ ವಿರೋಧಿಸಿಲ್ಲ. ಈ ಯೋಜನೆಯಿಂದ ಆಗಬಹುದಾದ ದುಷ್ಪರಿಣಾಮಗಳನ್ನು ಮನಗಂಡು ಹೋರಾಟದ ಹಾದಿ ತುಳಿದಿದ್ದಾರೆ. ಮತ್ತು ಈ ಯೋಜನೆಗೆ ಸಾಗರ ಕ್ಷೇತ್ರದ ಜನತೆಯೂ ಬೆಂಬಲ ನೀಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಮತ್ತೋರ್ವ ಮುಖಂಡ ಈ ವಿಶ್ವಾಸ್ ಮಾತನಾಡಿ, ಗೋಪಾಲಕೃಷ್ಣ ಅವರು ತಮ್ಮ ಕ್ಷೇತ್ರದ ಜನರ ಜೊತೆ ನಿಲ್ಲುತ್ತಾರೋ ಅಥವಾ ಯೋಜನೆಯ ಪರವಾಗಿ ನಿಲ್ಲುತ್ತಾರೋ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಸಾವಿರಾರು ಕೋಟಿ ವೆಚ್ಚದ ಈ ಯೋಜನೆಯಿಂದ ತಮಗೆ ಏನಾದರೂ ಲಾಭದ ನಿರೀಕ್ಷೆ ಇರಬಹುದೇನೋ ಎಂಬ ಅನುಮಾನವನ್ನು ಸಾಗರದ ಜನತೆಯೇ ವ್ಯಕ್ತಪಡಿಸಿದ್ದಾರೆ ಎಂದರು.
ಹಾಗೆಯೇ ಮಾರುತಿ ಗುರೂಜಿಯವರನ್ನು `ಯಾರೋ ಸ್ವಾಮೀಜಿ’ ಎಂದು ಬೇಳೂರು ಕರೆದಿರುವುದನ್ನು ಕೂಡ ನಾವು ಖಂಡಿಸುತ್ತೇವೆ. ಸ್ವಾಮೀಜಿಗಳು ಸಾವಿರಾರು ಭಕ್ತರನ್ನು ಹೊಂದಿದ್ದಾರೆ. ಹೀಗೆ ಗುರೂಜಿಗಳನ್ನು ಕೂಡ ಅವಮಾನಿಸುತ್ತಿರುವುದು ಸರಿಯಲ್ಲ ಎಂದರು.

ಮುಂದೆಯೂ ಈ ರೀತಿಯ ಹೋರಾಟಗಳಿಗೆ ಈಶ್ವರಪ್ಪನವರೇ ಮುಂದಾಗುತ್ತಾರೆ. ಮಾಜಿ ಮುಖ್ಯಮಂತ್ರಿಗಳಾದಂತಹ ನಾಯಕರ ರಾಜಕೀಯ ನೆರಳಿನಲ್ಲಿ ಬೆಳೆದು ಬಂದಿರುವ ಬೇಳೂರು ಅವರು ಇನ್ನು ಮುಂದಾದರೂ ದುರುದ್ದೇಶದಿಂದ ಮಾತನಾಡದೆ ಸಮಚಿತ್ತದಿಂದ ಹೇಳಿಕೆ ನೀಡಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರಾದ, ಲಕ್ಷೀ ಶಂಕರ್ ನಾಯ್ಕ್,ರಾಜು,ಶಂಕರ್ ನಾಯ್ಕ್, ಸೀತಾಲಕ್ಷ್ಮಿ, ಕೆಂಪಮ್ಮ ಸುರೇಶ್ ಪ್ರಮೋದ್, ಮತ್ತು ಇತರರು ಉಪಸ್ಥಿತರಿದ್ದರು.
ಬೇಳೂರು ಮನೆಗೆ ಮಹಿಳೆಯರಿಂದ ಮುತ್ತಿಗೆ
ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಇನ್ನೂ 15 ದಿನಗಳ ಒಳಗೆ ಕ್ಷಮೆ ಕೇಳದಿದ್ದರೆ ರಾಷ್ಟ್ರಭಕ್ತ ಬಳಗದ ಮಹಿಳೆಯರೇ ಅವರ ಮನೆಗೆ ಮುತ್ತಿಗೆ ಹಾಕುತ್ತಾರೆ ಎಂದು ಎಚ್ಚರಿಕೆ ನೀಡಿದ ವಿಶ್ವಾಸ್, ಬಂಗಾರಪ್ಪನವರ ನೆರಳಿನಲ್ಲಿ ಬೆಳೆದುಬಂದ ಬೇಳೂರು ಈ ರೀತಿಯ ರಾಜಕೀಯ ಉದ್ದೇಶದ ಮಾತುಗಳನ್ನು ಆಡಬಾರದು. ಇದು ಮುಂದುವರೆದರೆ ಅವರಿಗೆ ಮಾನಸಿಕ ಚಿಕಿತ್ಸೆಗೆ ಒಳಪಡಿಸಬೇಕಾಗುತ್ತದೆ ಎಂದರು.