ಶಿವಮೊಗ್ಗ: ಕಾಲಾತೀತ ದೃಷ್ಟಿಕೋನದಿಂದ ಬದುಕನ್ನು ಅವಲೋಕಿಸಿ, ಪ್ರತಿಯೊಂದು ವಿಚಾರವನ್ನೂ ವಿವೇಕದ ತಕ್ಕಡಿಯಲ್ಲಿ ತೂಗಿ ಪ್ರಶ್ನಿಸುವ ಮನೋಭಾವವೇ ಕುವೆಂಪು ಅವರ ಚಿಂತನೆಯ ಸಾರವಾಗಿದ್ದು, ಅದನ್ನು ಯುವ ಸಮೂಹ ಅಳವಡಿಸಿಕೊಳ್ಳಬೇಕು ಎಂದು ಲೇಖಕ ಬಿದರಗೋಡು ನಾಗೇಶ್ ಹೇಳಿದರು.
ನಗರದ ಎಚ್.ಎಸ್ ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ದಿ. ಡಿ.ಆರ್. ರತ್ನಾಕರ ಸ್ಮಾರಕ ದತ್ತಿ ದಾನಿಗಳಾದ ಅಮರೇಂದ್ರ ಕಿರೀಟಿ ಅವರ ಆಶಯದಂತೆ “ಯುವಜನತೆಗೆ ವೈಚಾರಿಕ ಜಾಗೃತಿಗಾಗಿ ಕುವೆಂಪು ಕರೆ” ವಿಷಯದ ಕುರಿತು ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು.

ಕುವೆಂಪು ಅವರು ಯುವಜನತೆಗೆ ನೀಡಿದ ‘ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ’ ಎಂಬ ಕರೆ ಕೇವಲ ಘೋಷವಾಕ್ಯವಲ್ಲ, ಅದು ಸ್ವತಂತ್ರ ಚಿಂತನೆಯ ಬದುಕಿನ ದಿಕ್ಸೂಚಿ. ನಮ್ಮ ಬುದ್ಧಿಗೆ ಕಟ್ಟಿಹಾಕಿರುವ ಮಿತಿಗಳನ್ನು ಮೀರಿ ಯೋಚಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಅವಿವೇಕ ಮತ್ತು ಮೌಢ್ಯಗಳಿಂದ ಆವರಿಸಿರುವ ಮನಸ್ಥಿತಿಯಿಂದ ಸಮಾಜ ಹೊರಬರಬೇಕಾದ ಕಾಲ ಇದು.
ಧಾರ್ಮಿಕ ಆಚರಣೆಗಳು ಮಾನವನ ಬದುಕಿನಲ್ಲಿ ಸಂಭ್ರಮ ಮತ್ತು ಸಹಬಾಳ್ವೆಯ ಸಂಕೇತವಾಗಬೇಕು. ಕಾಲಾತೀತ ದೃಷ್ಟಿಯಿಂದ ಯೋಚಿಸುವ, ಪ್ರತಿಯೊಂದು ವಿಚಾರವನ್ನೂ ಪ್ರಶ್ನಿಸುವ ಮನೋವೃತ್ತಿಯೇ ಕುವೆಂಪು ಅವರ ಚಿಂತನೆಯ ಸಾರ ಎಂದು ಹೇಳಿದರು.

ಶ್ರೀ ಆನಂದಪುರ ಜಗದ್ಗುರು ಗುರುಬಸವ ಮಹಾಸ್ವಾಮಿಗಳ ಸ್ಮಾರಕ ದತ್ತಿಯ ಆಶಯದಂತೆ “ಕೆಳದಿ ಸಂಸ್ಥಾನದ ಧರ್ಮ ಸಮನ್ವಯತೆ” ಕುರಿತು ಇತಿಹಾಸ ಸಂಶೋಧಕರಾದ ಡಾ. ಕೆಳದಿ ವೆಂಕಟೇಶ್ ಜೋಯ್ಸ್ ಮಾತನಾಡಿ, 1499 ರಿಂದ 1763ರವರೆಗೆ ಹದಿನೇಳು ರಾಜರು ಹಾಗೂ ಇಬ್ಬರು ರಾಣಿಯರು ಕೆಳದಿ ಸಾಮ್ರಾಜ್ಯವನ್ನು ಸಮರ್ಥವಾಗಿ ಆಳಿದ ಇತಿಹಾಸವನ್ನು ವಿವರಿಸಿದರು.
ಕೆಳದಿ ಶಿವಪ್ಪ ನಾಯಕರು, ಶಿವಮೊಗ್ಗದ ಇತಿಹಾಸದ ಹೆಮ್ಮೆಯ ಪ್ರತೀಕ. ಹಿಂದೂ, ಇಸ್ಲಾಂ, ಕ್ರೈಸ್ತ ಹಾಗೂ ಜೈನ ಧರ್ಮಗಳ ನಡುವೆ ಸಮನ್ವಯತೆ ಮತ್ತು ಪರಸ್ಪರ ಗೌರವವನ್ನು ಬೆಳೆಸಿದ ಆಡಳಿತ ಕೆಳದಿ ಅರಸರ ವೈಶಿಷ್ಟ್ಯವಾಗಿತ್ತು. ಮತೀಯ ಪ್ರಚೋದನೆಗೆ ಅವಕಾಶ ನೀಡದೆ ಸರ್ವಧರ್ಮ ಸಮಭಾವವನ್ನು ಉಳಿಸಿಕೊಂಡ ಆಡಳಿತ ಇಂದಿನ ಸಮಾಜಕ್ಕೂ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ನೀವು ವಿದ್ಯಾಭ್ಯಾಸ ಮಾಡುತ್ತಿರುವ ಎನ್ಇಎಸ್ ಶಿಕ್ಷಣ ಸಂಸ್ಥೆ ಸ್ವಾತಂತ್ರ್ಯ ಹೋರಾಟಗಾರರ ಕನಸಿನ ಫಲ. ಶಿಕ್ಷಣವೆಂದರೆ ಕೇವಲ ಪದವಿ ಪಡೆಯುವುದಲ್ಲ. ಅದು ವ್ಯಕ್ತಿತ್ವ ರೂಪಿಸುವ ಪ್ರಕ್ರಿಯೆ. ನಿಮ್ಮ ನಡೆ-ನುಡಿ, ಸಂಸ್ಕಾರ ಮತ್ತು ಜ್ಞಾನ ಸಮಾಜಕ್ಕೆ ಮಾದರಿಯಾಗುವಂತಿರಬೇಕು. ಆಗಲೇ ಶಿಕ್ಷಣಕ್ಕೂ, ಶಿಕ್ಷಣ ಪಡೆದ ಪ್ರಮಾಣಪತ್ರಕ್ಕೂ ನಿಜವಾದ ಗೌರವ ದೊರೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಆರ್. ಆದಿತ್ಯ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಕಾರ್ಯದರ್ಶಿ ಡಿ. ಗಣೇಶ್ ಸ್ವಾಗತಿಸಿ, ಉಪನ್ಯಾಸಕ ರವಿ ವಂದಿಸಿದರು.