ಶಿವಮೊಗ್ಗ, ಜು.11:
ನಗರಕ್ಕೆ ಇಂದು ಬೆಳಗ್ಗೆ ಆಗಮಿಸಿದ್ದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಕಾರ್ಯನಿರತ ಪತ್ರಿಕಾ ಸಂಪಾದಕರ ಸಂಘವು ಈಗಾಗಲೇ ಪತ್ರಕರ್ತರಿಗೂ ಆರೋಗ್ಯ ಸಂಜೀವಿನಿ ಯೋಜನೆ ಕೊಡುತ್ತೇವೆ ಎಂದು ಅಧಿಕೃತವಾಗಿ ಘೋಷಿಸಿದ್ದರೂ ಈ ಯೋಜನೆ ಇಲ್ಲಿಯವರೆಗೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಅದನ್ನು ತಾವುಗಳು ಈಗ ಎಲ್ಲಾ ಪತ್ರಕರ್ತರಿಗೆ ದೊರಕುವಂತೆ ಮಾಡುವ ಜೊತೆಗೆ ಪತ್ರಕರ್ತರ ಹಿತ ಕಾಪಾಡುವಂತೆ ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ಸಚಿವರು ಮಾತನಾಡುತ್ತಾ ಈ ಬಗ್ಗೆ ನಾನು ಬಹಳ ಹಿಂದೆಯೇ ಯೋಚಿಸಿದ್ದೆ. ಇದಕ್ಕೆ ಪೂರಕವಾದ ಚರ್ಚೆ ಸಹ ನಡೆಸಲಾಗಿದೆ. ಆದಷ್ಟು ಬೇಗನೆ ಎಲ್ಲ ಪತಕರ್ತರಿಗೆ ಲಭ್ಯವಾಗುವಂತಹ ಆರೋಗ್ಯ ಸಂಜೀವಿನಿ ಯೋಜನೆಯನ್ನು ದೊರಕಿಸಿಕೊಡುವ ಭರವಸೆಯನ್ನು ನೀಡಿದರು.

ಸದಾ ಒತ್ತಡದ ನಡುವೆ ಸಮಾಜದ ಹಿತ ಕಾಪಾಡುವ ಪತ್ರಕರ್ತರ ಹಿತ ಕಾಯಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಅದರ ಸಂಪೂರ್ಣ ಅನುಷ್ಠಾನದ ಕುರಿತು ಸದ್ಯದಲ್ಲೇ ಸಭೆ ನಡೆಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಅದ್ಯಕ್ಷ ಎಸ್.ಕೆ. ಗಜೇಂದ್ರ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ರಾಕೇಶ್ ಡಿಸೋಜಾ, ನಿರ್ದೇಶಕರಾದ ಶಿ.ಜು. ಪಾಶಾ, ಜಿ. ಚಂದ್ರಶೇಖರ್ ಹಾಗೂ ಇತರರು ಉಪಸ್ಥಿತರಿದ್ದರು.