ಶಿವಮೊಗ್ಗ, ಜು.10
ದೇಶದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ಆರೋಗ್ಯ ಉಚಿತವಾಗಿ ಸಿಕ್ಕರೆ ನಾವುಗಳು ಏನನ್ನಾದರೂ ಸಾಧನೆ ಮಾಡಲು ಸಾಧ್ಯ ಎಂದು ಶಾಸಕ ಡಿ.ಎಸ್. ಅರುಣ್ ಹೇಳಿದರು.
ಇಂದು ಶಿವಮೊಗ್ಗದ ತೃಪ್ತಿ ಹೆಲ್ತ್ ಕೇರ್ ಸಂಸ್ಥೆಯಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ, ಆಕೃತಿ ಜನಸೇವಾ ಫೌಂಡೇಷನ್, ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಸಂಸ್ಥೆಗಳ ವತಿಯಿಂದ ಕಿಡ್ನಿ ಮತ್ತು ಮೂತ್ರಕೋಶ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಯೋಚನೆ ಮಾಡುತ್ತಾ ಕೂತರೆ ಸಾಧನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ, ದೇಶದಲ್ಲಿ ಮೊದಲು ಆರೋಗ್ಯ, ಶಿಕ್ಷಣ ಇವೆರೆಡು ಉಚಿತವಾಗಿ ಸಿಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದಿನ ದಿನಗಳಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ಸಿಗುತ್ತಿರಲಿಲ್ಲ. ಪ್ರಸ್ತುತ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕೆನ್ನುವುದು ಪ್ರತಿಯೊಬ್ಬರದು ಆಕಾಂಕ್ಷೆಯಾಗಿದೆ ಎಂದರು.

ನಮ್ಮ ದೇಶದ ಸಂಸ್ಕೃತಿ ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ, ದೇಶವನ್ನು ಹೀಗೆ ಇರ್ಬೇಕು ಅನ್ನೋ ಕಲ್ಪನೆ ಹೊತ್ತ ವೈದ್ಯರಾದ ಚಂದ್ರಶೇಖರ್ ಉಚಿತವಾಗಿ ಆರೋಗ್ಯದ ಕಲ್ಪನೆ ಹೊತ್ತು ಉಚಿತವಾಗಿ ಕಿಡ್ನಿ ತಪಾಸಣೆ ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ಈ ಹಿಂದೆ ಪಕ್ಕದ ಜಿಲ್ಲೆ ದಾವಣಗೆರೆ ಮೆಡಿಕಲ್ ಹಬ್ ಆಗಿತ್ತು. ಆದ್ರೆ ಈಗ ಶಿವಮೊಗ್ಗ ಮೆಡಿಕಲ್ ಹಬ್ ಆಗಿರುವುದರಲ್ಲಿ ಅನುಮಾನವೇ ಇಲ್ಲ. ವೈದ್ಯ ವೃತ್ತಿ, ಆಸ್ಪತ್ರೆಗಳ ಮೇಲೆ ಅನುಮಾನದಿಂದ ನೋಡುವಂತಹ ಇಂತಹ ಸಂದರ್ಭದಲ್ಲಿ ಡಾ. ಚಂದ್ರಶೇಖರ್ ತಮ್ಮ ಕಿಡ್ನಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಮಾಡುತ್ತಿರುವುದು ಆಶ್ಚರ್ಯ ತಂದಿದೆ ಎಂದು ಹೇಳಿದರು.

ಅಲ್ಲದೇ ರಾಜ್ಯದಲ್ಲಿ 22 ಕಡೆ ಅಸಂಘಟಿತ ಕಾರ್ಮಿಕರ ಸಂಘ ರಚಿಸಿರುವುದು ಸಂತಸ ತಂದಿದ್ದು, ಅಸಂಘಟಿತ ಕಾರ್ಮಿಕರಿಗೆ ಉಚಿತವಾಗಿ ಮೂತ್ರಕೋಶ ಮತ್ತು ಮೂತ್ರಪಿಂಡದ ತಪಾಸಣೆ ನಡೆಸುತ್ತಿರುವುದು, ವರ್ಗದ ಜನರಿಗೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ದೇಶದ ಪ್ರಧಾನಿ ಮೋದಿಯವರು ಸಹ ಕಳೆದ 12 ವರ್ಷಗಳಿಂದ ಕಷ್ಟಪಟ್ಟು ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಸಿಗಬೇಕು ಎನ್ನುವ ಪರಿಕಲ್ಪನೆ ಇಟ್ಟುಕೊಂಡಿದ್ದು, ಆಯುಷ್ಮಾನ್ ಯೋಜನೆಯಲ್ಲಿ 5 ಲಕ್ಷ ರೂ. ವಿಮೆ ಸಿಗುತ್ತಿರುವುದು ಬೇರೆ, ಬೇರೆ ದೇಶದಲ್ಲೂ ಶ್ಲಾಘನೆ ಕೇಳಿ ಬರುತ್ತಿದೆ ಎಂದರು. ದಿನಗೂಲಿ ಕೆಲಸ ಮಾಡಿಕೊಂಡು ಹೋಗುವ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಸಿಗಬೇಕೆಂಬ ಕಲ್ಪನೆ ಮೆಚ್ಚುವಂತಹದ್ದು. ಒಬ್ಬರ ಕೈಯಲ್ಲಿ ಉಚಿತ ಶಿಬಿರ ನಡೆದರೆ ಉಪಯೋಗವಿಲ್ಲ. ಪ್ರತಿಯೊಬ್ಬ ವೈದ್ಯರು ಈ ಬಗ್ಗೆ ಯೋಚಿಸಬೇಕಿದೆ. ಆರ್.ಎಸ್.ಎಸ್. ನಲ್ಲಿ ಒಂದುವರೆ ಲಕ್ಷ ಸೇವಾ ಕಾರ್ಯ ನಡೆಯುತ್ತಿದೆ. ಈ ರೀತಿ ಸೇವೆಯನ್ನು ಮಾಡುವ ಮೂಲಕ ತೃಪ್ತಿ ಕಾಣಬಹುದು. ಸೇವಾ ಮನೋಭಾವ ಇದ್ದರೆ ಇದನ್ನು ಮಾಡಬಹುದು ಎಂದರು.

ಶಿಬಿರದಲ್ಲಿ ಡಾ. ಚಂದ್ರಶೇಖರ್ ಇವರು ನೂರಾರು ಜನರಿಗೆ ಉಚಿತವಾಗಿ ಕಿಡ್ನಿ ತಪಾಸಣೆ ನಡೆಸಿದರು.
ಈ ವೇಳೆ ಶಿಬಿರದಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಆಯನೂರು ಕುಪೇಂದ್ರ, ಓಬಿಸಿ ಮೋರ್ಚಾ ಬಿಜೆಪಿ ಅಧ್ಯಕ್ಷ ಪ್ರದೀಪ್ ಹೊನ್ನಪ್ಪ, ಆಕೃತಿ ಜನ ಸೇವಾ ಫೌಂಡೇಶನ್ ಅಧ್ಯಕ್ಷೆ ಮಮತಾ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ತೃಪ್ತಿ ಹೆಲ್ತ್ ಕೇರ್ ನ ತೇಜಸ್ವಿನಿ ಚಂದ್ರಶೇಖರ್, ರೋಟರಿ ಮಲ್ನಾಡ್ ಅಧ್ಯಕ್ಷೆ ರಶ್ಮಿ, ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ರಮೇಶ್ ಮಡಿವಾಳ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.