ಶಿವಮೊಗ್ಗ: ನಗರವನ್ನು ಹೇಗೆ ಯೋಜನಾಬದ್ಧವಾಗಿ ರೂಪಿಸಬೇಕು ಹಾಗೂ ರಾಜಧಾನಿಯ ಮಾದರಿ ಹೇಗಿರಬೇಕು ಎಂಬ ದೂರದೃಷ್ಟಿಯನ್ನು ಸುಮಾರು 500 ವರ್ಷಗಳ ಹಿಂದೆಯೇ ತೋರಿಸಿದ ಮಹನೀಯ ಕೆಂಪೇಗೌಡರು ವಿಶ್ವಕ್ಕೆ ಮಾದರಿ ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥಗೌಡ ಹೇಳಿದರು.
ನಗರದ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಜಿಲ್ಲಾ ಒಕ್ಕಲಿಗರ ಸಂಘಟನೆಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಶನಿವಾರ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ 517 ನೇ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

ಒಕ್ಕಲಿಗ ಸಮಾಜದ ವಿವಿಧ ಉಪಜಾತಿಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಕಾರ್ಯವನ್ನು ಆದಿಚುಂಚನಗಿರಿ ಮಠ ಕೈಗೊಂಡಿದ್ದು, ಆ ಕಾರ್ಯಕ್ಕೆ ಪ್ರಸನ್ನನಾಥ ಸ್ವಾಮೀಜಿ ಮುಂಚೂಣಿಯ ಸಂಘಟಕರಾಗಿ ಶ್ರಮಿಸುತ್ತಿದ್ದಾರೆ. ಸಮುದಾಯದ ಏಕತೆ ಮತ್ತು ಸಂಘಟನಾ ಬಲವರ್ಧನೆಗೆ ಸಮುದಾಯ ಭವನ ನಿರ್ಮಾಣ ಮಹತ್ವದ್ದಾಗಿದ್ದು, ಅದರ ನಿರ್ಮಾಣ ಕಾರ್ಯಕ್ಕೆ ಸಮುದಾಯದ ಜನರು ಉದಾರವಾಗಿ ಧನಸಹಾಯ ನೀಡಬೇಕು. ಕಸಾಪ ಅಧ್ಯಕ್ಷರಾದ ಡಿ.ಮಂಜುನಾಥ, ತಮ್ಮದೇ ಕ್ರಿಯಾಶೀಲತೆ ಮೂಲಕ ಕನ್ನಡದ ಕೆಲಸವನ್ನು ಮಾಡುತ್ತಿದ್ದಾರೆ. ಸಾಹಿತ್ಯ ಹುಣ್ಣಿಮೆಯಂತಹ ಅದ್ಭುತವಾದ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ. ಅಂತಹ ವ್ಯಕ್ತಿತ್ವಕ್ಕೆ ಕೆಂಪೇಗೌಡ ಪ್ರಶಸ್ತಿ ನೀಡಿರುವುದು ಸಂತಸದ ವಿಷಯ.
ನಮ್ಮದೇ ಸಮುದಾಯದ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ದೇಶವನ್ನು ಎಲ್ಲಿಂದ ನೋಡಬೇಕು ಎಂದರೆ, ಬೆಂಗಳೂರಿನಿಂದ ನೋಡಬೇಕು ಎನ್ನುವಂತಹ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಹೇಳಿದರು.

ಕೆಂಪೇಗೌಡ ಪ್ರಶಸ್ತಿ ಸ್ವೀಕರಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿ, ಸಾಹಿತ್ಯ ಹುಣ್ಣಿಮೆಯಂತಹ ಕಾರ್ಯಕ್ರಮಗಳನ್ನು ಸಂಘಟಿಸುವಾಗ ಅನೇಕ ಕುಹುಕದ ಮಾತುಗಳನ್ನು ಕೇಳಿದ್ದೇವೆ. ಅಂತಹ ಅವಮಾನದ ಮಾತುಗಳು ನಮ್ಮಲ್ಲಿ ಮತ್ತಷ್ಟು ಸೃಜನಶೀಲ ಸಂಘಟನೆಯನ್ನು ರೂಪಿಸಲು ಪ್ರೇರಣೆ ನೀಡಿದವು. ಸಹನೆ, ಶ್ರದ್ಧೆ ಮತ್ತು ಬದ್ದತೆ ಎಂದಿಗೂ ನಮ್ಮನ್ನು ಕಾಪಾಡಲಿದೆ ಎಂಬುದು ಸದಾ ನಮ್ಮ ಅನುಭವಕ್ಕೆ ಬರುತ್ತಲಿದೆ
ಅಭಿವೃದ್ಧಿ ಎಂದರೇ ಕೇವಲ ಕಟ್ಟಡ, ರಸ್ತೆ, ಸೇತುವೆ ನಿರ್ಮಾಣ ಮಾತ್ರವಲ್ಲ. ಸಾಧಕರಾಗಿ ಹೊರಹೊಮ್ಮುವ ಮಕ್ಕಳು ಕೂಡ ಈ ದೇಶದ ಅಭಿವೃದ್ಧಿಯ ಭಾಗವೆ ಆಗಿದ್ದಾರೆ. ಮಕ್ಕಳಿಗೆ ನಮ್ಮ ತಾಯಿ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸುವಲ್ಲಿ ಹಿಂದುಳಿಯುತ್ತಿದ್ದೇವೆ. ಮಾತೃಭಾಷೆಯನ್ನು ಉಪೇಕ್ಷೆ ಮಾಡಿದ ಪರಿಣಾಮವಾಗಿ ಮಕ್ಕಳಲ್ಲಿ ಸೃಜನಶೀಲ ಚಿಂತನೆಗಳು ಕುಂಠಿತಗೊಳ್ಳುತ್ತಿದೆ. ಕನ್ನಡಕ್ಕಾಗಿ ಕೈಎತ್ತು ನಿನ್ನ ಕೈ ಕಲ್ಪವೃಕ್ಷ ಆಗಲಿದೆ ಎಂಬ ಮಾತನ್ನು ಅನುಷ್ಟಾನಗೊಳಿಸುವತ್ತ ಕಂಕಣಬದ್ದರಾಗ ಬೇಕಿದೆ. ಕಸಾಪಕ್ಕೆ ಎರಡು ವರ್ಷಗಳಿಂದ ಅನುದಾನವಿಲ್ಲ. ಆದರೂ ಜಿಲ್ಲೆಯ ಸಾಹಿತ್ಯಾಸಕ್ತರ ಸಹಕಾರದಿಂದ ಕನ್ನಡ ಪರ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ರಮೇಶ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನ ಬದ್ದವಾದ ನಗರದ ಭದ್ರಬುನಾದಿ ಹಾಕಿದ ಕೆಂಪೇಗೌಡರ ಕೊಡುಗೆ ಸ್ಮರಣೀಯ. ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ನಗರ ಯೋಜನೆಗೆ ಅವರು ಪ್ರೇರಣೆಯಾಗಿದ್ದಾರೆ. ಅವರು ಕಟ್ಟಿಸಿದ ಕೆರೆ ಕಟ್ಟಿಗಳ ಪರಿಸ್ಥಿತಿ ಆಧುನಿಕ ಕಾಲಮಾನದಲ್ಲಿ ಏನಾಗಿದೆ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇಂದು ಬರದಿಂದ ನಾವೆಲ್ಲ ತತ್ತರಿಸುತ್ತಿದ್ದೇವೆ. ಇಂತಹ ಪರಿಸ್ಥಿತಿ ಎದುರಾಗಬಾರದು ಎಂಬ ದೂರದೃಷ್ಟಿಯಿಂದಲೇ ಅಂದಿನ ಕಾಲದಲ್ಲೆ ಕೆರೆ ಕಟ್ಟೆಗಳಿಗೆ ಆದ್ಯತೆ ನೀಡಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ ದಿವ್ಯಸಾನಿದ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಚೇತನ್ ಗೌಡ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ||ಅಂಶುಮಂತ್, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿರಿಬೈಲ್ ಧರ್ಮೇಶ್, ಸೂಡಾ ಅಧ್ಯಕ್ಷರಾದ ಎಚ್.ಎಸ್.ಸುಂದರೇಶ್, ಪ್ರಗತಿಪರ ಕೃಷಿಕರಾದ ಆಶಾ ಶೇಷಾದ್ರಿ, ಮಲೆನಾಡು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷರಾದ ಕೆ.ಎನ್.ರಾಮಕೃಷ್ಣ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಎ.ಬಿ.ಸಂಜಯ್, ಆಹಾರ ಇಲಾಖೆ ಉಪ ನಿರ್ದೇಶಕ ಸತೀಶ್.ಡಿ, ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ, ಶಶಾಂಕ್ ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಒಕ್ಕಲಿಗ ಸಮಾಜದ ವಿವಿಧ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.