ಶಿವಮೊಗ್ಗ,ಜೂ. 25:
ಇಲ್ಲಿನ ರಾಗಿಗುಡ್ಡ ಚಾನಲ್ ಏರಿ ರಸ್ತೆಯಲ್ಲಿ ಎಂ.ಡಿ.ಎಂ.ಎ. ಎಂಬ ಡ್ರಗ್ಸ್ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ಡ್ರಗ್ಸ್ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಗಿಗುಡ್ಡ ಚಾನಲ್ ಏರಿ ರಸ್ತೆಯಲ್ಲಿರುವ ಖಾಲಿ ಲೇಔಟ್ ಒಂದರ ಬಳಿ ವ್ಯಕ್ತಿಯೊಬ್ಬ ಕಾನೂನು ಬಾಹಿರವಾಗಿ ನಿಷೇಧಿತ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ಇನ್ಸ್ ಸ್ಪೆಕ್ಟರ್ ರಾಘವೇಂದ್ರ ಖಾಂಡ್ಕೆ ನೇತೃತ್ವದ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಡ್ರಗ್ಸ್ ಮಾರಾಟ ಜಾಲದಲ್ಲಿ ತೊಡಗಿದ್ದ ಅಜರುದ್ದೀನ್ ಯಾನೆ ಅಜರ್ (26 ವರ್ಷ) ಎಂಬಾತ ಸಿಕ್ಕಿಬಿದ್ದಿದ್ದು, ಆತನನ್ನು ದಸ್ತಗಿರಿ ಮಾಡಲಾಗಿದೆ. ಬಂಧಿತ ಆರೋಪಿಯಿಂದ ಅಂದಾಜು 1,50,000/- ರೂಪಾಯಿ ಮೌಲ್ಯದ 15 ಗ್ರಾಂ ತೂಕದ ಎಂಡಿಎಂಎ (MDMA) ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ. ಇದರೊಂದಿಗೆ ಕೃತ್ಯಕ್ಕೆ ಬಳಸಿದ್ದ ಒಂದು ಮೊಬೈಲ್ ಫೋನ್ ಹಾಗೂ ಮಾದಕ ವಸ್ತುವಿನ ಮಾರಾಟದಿಂದ ಆತ ಗಳಿಸಿದ್ದ 1,600 ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.