ಶಿವಮೊಗ್ಗ: ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಆಕಾಂಕ್ಷಿಗಳಿಗೆ ಸರ್ಜಿ ಫೌಂಡೇಶನ್ ಮತ್ತು ಜೆ.ಸಿ.ಐ ಶಿವಮೊಗ್ಗ ಮಲ್ನಾಡ್ ವತಿಯಿಂದ ಜು.೧ ರಂದು ಕುವೆಂಪು ರಂಗಮಂದಿರದಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನನ ೨ ಗಂಟೆಯ ವರೆಗೆ ಉಚಿತ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದು ಸರ್ಜಿ ಫೌಂಡೇಶನ್ನ ಮುಖ್ಯಸ್ಥ ಹಾಗೂ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನಡೆಯಲಿರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಜ್ಜಾಗುತ್ತಿರುವ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗುವ ಉದ್ದೇಶದಿಂದ ಆಯೋಜಿಸಲಾಗಿದೆ ಎಂದರು.
ಈ ಕಾರ್ಯಾಗಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತಜ್ಞರಾದ ಸೋಮಪ್ಪ ಡುಂಡಿಗೆರೆ ಮತ್ತು ನಾಗರಾಜ್ ರೆಡ್ಡಿ ಅವರ ನೇತೃತ್ವದಲ್ಲಿ ಇತ್ತೀಚಿನ ಪರೀಕ್ಷಾ ಪದ್ಧತಿ, ಪ್ರಶ್ನೆಪತ್ರಿಕೆ ಮತ್ತು ದೈಹಿಕ ಪರೀಕ್ಷೆ ನಡೆಸುವ ಪದ್ಧತಿ. ಪಠ್ಯಕ್ರಮದ ವಿಶ್ಲೇಣೆ, ಪರೀಕ್ಷೆಗಳನ್ನು ಎದುರಿಸಲು ಅಭ್ಯರ್ಥಿಗಳು ಅನುಸರಿಸಬೇಕಾದ ಸುಲಭ ತಂತ್ರಗಳು, ಪ್ರಸ್ತುತ ಜಾಗತಿಕ ಸ್ಪರ್ಧೆಯ ವಾಸ್ತವತೆಗಳು ಹಾಗೂ ಪರೀಕ್ಷಾ ಪ್ರಕ್ರಿಯೆಯಲ್ಲಿನ ಇತ್ತೀಚಿನ ಬದಲಾವಣೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಸಮಗ್ರ ಮಾಹಿತಿ ನೀಡಲಾಗುವುದು ಎಂದರು.

ಹಾಗೇಯೆ “ಕಾಯಕಸೇತು ಪರೀಕ್ಷಾಪಥ” ಎಂಬ ಶೀರ್ಷಿಕೆಯಡಿ ೩೦ ದಿನಗಳ ಉಚಿತ ಆನ್ಲೈನ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮ ಲೋಕಾರ್ಪಣೆಯಾಗಲಿದ್ದು. ಇದು ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.
೩೦ ದಿನಗಳ ಆನ್ಲೈನ್ ತರಬೇತಿ ಮುಂಬರುವ ಜೂ.೨೯ ಆರಂಭವಾಗಲಿದ್ದು. ಈ ತರಬೇತಿಯಲ್ಲಿ ಪ್ರತಿದಿನ ಬೆಳಿಗ್ಗೆ ೨ ಗಂಟೆ ಮತ್ತು ಸಂಜೆ ೨ ಗಂಟೆಗಳ ಕಾಲ ನುರಿತ ಉಪನ್ಯಾಸಕರಿಂದ ಬೋಧನೆ ನೀಡಲಾಗುವುದು. ವಿದ್ಯಾರ್ಥಿಗಳ ನಿರಂತರ ಮೌಲ್ಯಮಾಪನ ಹಾಗೂ ಸಮಯ ನಿರ್ವಹಣಾ ಕೌಶಲ್ಯ ಹೆಚ್ಚಿಸಲು ಪ್ರತಿದಿನ ಮತ್ತು ವಾರಕ್ಕೊಮ್ಮೆ ಟೆಸ್ಟ್ ಸೀರೀಸ್ ನಡೆಸಲಾಗುತ್ತದೆ. ಜೊತೆಗೆ, ಭಾಗವಹಿಸುವ ಅಭ್ಯರ್ಥಿಗಳಿಗೆ ಸುಲಭವಾಗಿ ಓದಲು ಅನುಕೂಲವಾಗುವಂತೆ ಸಮಗ್ರ ’ಸ್ಟಡಿ ಮೆಟೀರಿಯಲ್’ (ಕ್ಲಾಸ್ ನೋಟ್ಸ್) ಅನ್ನು ಡಿಜಿಟಲ್ ರೂಪದಲ್ಲಿ ಉಚಿತವಾಗಿ ಒದಗಿಸಲಾಗುತ್ತದೆ ಎಂದರು.

ಅಚೀವರ್ಸ್ ಕೋಚಿಂಗ್ ಸೆಂಟರ್ನ ವರುಣ್ ಮಾತನಾಡಿ, ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಕನಸು ಹೊತ್ತ ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ಗ್ರಾಮೀಣ ಅಭ್ಯರ್ಥಿಗಳಿಗೆ ದುಬಾರಿ ಶುಲ್ಕ ಭರಿಸಿ ತರಬೇತಿ ಕೇಂದ್ರಗಳಿಗೆ ಹೋಗುವುದು ಕ?. ಇಂತಹ ಆಕಾಂಕ್ಷಿಗಳಿಗೆ ಸರಿಯಾದ ಸ್ವಯಂ ಮಾರ್ಗದರ್ಶನದ ಕೊರತೆಯೂ ಕಾಡುತ್ತದೆ. ಈ ಸಮಸ್ಯೆಯನ್ನು ನೀಗಿಸಿ, ಜಿಲ್ಲೆಯ ಪದವೀಧರ ಯುವಜನತೆಗೆ ಉನ್ನತ ಮಟ್ಟದ ಶೈಕ್ಷಣಿಕ ನೆರವು ನೀಡುವ ಸದುದ್ದೇಶದಿಂದ ಈ ಎರಡೂ ಕಾರ್ಯಕ್ರಮಗಳನ್ನು (ಮಾರ್ಗದರ್ಶನ ಮತ್ತು ತರಬೇತಿ) ರೂಪಿಸಲಾಗಿದೆ. ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸುವ ದೃಷ್ಟಿಯಿಂದ ೩೦ ದಿನಗಳ ಆನ್ಲೈನ್ ತರಬೇತಿಗೆ ಕೇವಲ ೧,೦೦೦ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು.

ಜೆ.ಸಿ.ಐ ಶಿವಮೊಗ್ಗ ಮಲ್ನಾಡ್ ಅಧ್ಯಕ್ಷರಾದ ಘನಶ್ಯಾಮ್ ಜಿ ಗಿರಿಮಾಜಿ ಮಾತನಾಡಿ, ಕಾರ್ಯಕ್ರಮಗಳ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಕಾಯಕ ಸೇತು ಜಾಬ್ ಪೋರ್ಟಲ್ ಮೂಲಕ ಕಡ್ಡಾಯವಾಗಿ ಆನ್ಲೈನ್ ನೋಂದಣಿ ಮಾಡಿಕೊಳ್ಳಬೇಕು. ನೋಂದಾಯಿಸಿಕೊಂಡ ಅರ್ಹ ಪದವೀಧರ ಅಭ್ಯರ್ಥಿಗಳನ್ನು ಮಾತ್ರ ತರಬೇತಿಗೆ ಪರಿಗಣಿಸಲಾಗುವುದು. ಮಲೆನಾಡು ಭಾಗದ ವಿದ್ಯಾವಂತ ಯುವಜನತೆ ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಜೆ.ಸಿ.ಐ ಶಿವಮೊಗ್ಗ ಮಲ್ನಾಡ್ ಕಾರ್ಯಕ್ರಮ ಕಾರ್ಯಾಧ್ಯಕ್ಷರಾದ ವಿಕಾಸ್ ಹೆಗ್ಡೆ, ಜೆ.ಸಿ.ಐ ಶಿವಮೊಗ್ಗ ಮಲ್ನಾಡ್ ಪೂರ್ವ ವಲಯ ಅಧಿಕಾರಿ ಜೆ.ಸಿ ಕಿರಣ್ ಕುಮಾರ್, ಪ್ರಮುಖರಾದ ಹ? ಕಾಮತ್, ಶಂಕರ್ ಸರ್ಜಿ, ಬಾಳೆಕಾಯಿ ಮೋಹನ್ ಸೇರಿದಂತೆ ಹಲವು ಇದ್ದರು.