ಶಿವಮೊಗ್ಗ: ವಾಲ್ಮೀಕಿ ನಿಗಮದ ಚಂದ್ರಶೇಖರ್ ಅವರ ಶವದ ಮೇಲೆ ಕಾಂಗ್ರೆಸ್ ರಾಜ್ಯಭಾರ ಮಾಡುತ್ತಿದೆ. ಆ. 13ರಿಂದ ಆರಂಭವಾಗುವ ವಿಧಾನ ಮಂಡಲದ ಅಧಿವೇಶನದಲ್ಲಿ ಈಗಾಗಲೇ ಇಡಿ ತನಿಖೆ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರ ಪದಚ್ಯುತಿಯ ಬಗ್ಗೆ ಬಿಜೆಪಿ -ಮಿತ್ರಪಕ್ಷಗಳು ಪ್ರಬಲ ಹೋರಾಟ ಮಾಡಲಿವೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಆ. 13ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಅದರಲ್ಲಿ ಅಧಿವೇಶನದ ಸಂದರ್ಭದಲ್ಲಿ ಚರ್ಚಿಸುವ ಮತ್ತು ಹೋರಾಟ ಮಾಡುವ ವಿಷಯಗಳ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಲಿದೆ.

ಈ ಹಿಂದೆ ವಾಲ್ಮೀಕಿ ಹಗರಣ ಬೆಳಕಿಗೆ ಬಂದಾಗ ಕಾಂಗ್ರೆಸ್ ‘ಸುಫಾರಿ ಕಿಲ್ಲರ್ ಸರ್ಕಾರ’ ಎಂದು ನಾನು ಹೇಳಿದ್ದೆ. ಅದು ಬಳಿಕ ರುಜುವಾತಾಗಿದೆ. ವಾಲ್ಮೀಕಿ ಹಗರಣದಲ್ಲಿ ಭಾಗಿಯಾಗಿರುವ

ಬಿ. ನಾಗೇಂದ್ರ ಅವರನ್ನು ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಮತ್ತೆ ಸಚಿವರನ್ನಾಗಿ ನೇಮಕ ಮಾಡಿಕೊಂಡಿದ್ದು, ರಾಜ್ಯದ ಜನತೆಗೆ ಯಾವ ಸಂದೇಶವನ್ನು ಕೊಡಲು ಹೊರಟಿದೆ ಎಂದು ಪ್ರಶ್ನಿಸಿದ ಅವರು ವಾಲ್ಮೀಕಿ ಹಗರಣವ್ನು ಮುಚ್ಚಿ ಹಾಕಲೆಂದೇ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.