ಶಿವಮೊಗ್ಗ : ನಗರದ ನಾಗರೀಕರ ಸಮಸ್ಯೆಗಳು ಬೆಟ್ಟದಷ್ಟಿವೆ. ಅವೆಲ್ಲವನ್ನು ಬಗೆಹರಿಸಲು ಮಹಾನಗರ ಪಾಲಿಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು, ಈಗ ಇದಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕೂಡ ಬೆಂಬಲ ನೀಡಿರುವುದು ಪಾಲಿಕೆಗೆ ಆನೆ ಬಲ ಬಂದಂತಾಗಿದೆ ಎಂದು ಪಾಲಿಕೆ ಉಪ ಆಯುಕ್ತ (ಆಡಳಿತ) ತುಷಾರ್ ಹೊಸೂರು ಹೇಳಿದರು.
ಆಯುಕ್ತರೊಂದಿಗಿನ ಮುಖಾ ಮುಖಿ ಕಾರ್ಯಕ್ರಮಕ್ಕೆ ಸಹಕರಿಸಿದ ಹಿನ್ನೆಲೆಯಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯು ಪಾಲಿಕೆ ವಿಸಿ ಕೊಠಡಿಯಲ್ಲಿ ಪಾಲಿಕೆ ಅಧಿಕಾರಿಗಳಿಗೆ ಆಯೋಜಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮ ದಲ್ಲಿಅವರು ಮಾತನಾಡಿದರು. ಸಮಾಜದ ಅಭಿವೃದ್ಧಿ ಯಲ್ಲಿ ಪತ್ರಿಕಾ ಮಾಧ್ಯಮದ ಪಾತ್ರ ದೊಡ್ಡದು. ಆಡಳಿತ ವ್ಯವಸ್ಥೆಗೆ ಮಾಧ್ಯಮವು ಸಹಕಾರ ನೀಡಿದಾಗ, ಸಮಾಜದ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದ ಅವರು, ಶಿವಮೊಗ್ಗ ನಗರದ ನಾಗರೀಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಪಾಲಿಕೆಯು ಪ್ರತಿ ಎರಡು ತಿಂಗಳಿಗೊಮ್ಮೆ ಜನರೊಂದಿಗೆ ಮುಖಾಮುಖಿ ಕಾರ್ಯಕ್ರಮ ನಡೆಸಲು ಉದ್ದೇಶಿಸಿದೆ. ಈಗ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಅದಕ್ಕೆ ನಾಂದಿ ಹಾಡಿದೆ. ಪಾಲಿಕೆ ನಡೆಸುವ ಮುಂದಿನ ಎಲ್ಲಾ ಕಾರ್ಯಕ್ರಮ ಗಳಿಗೆ ಪತ್ರಕರ್ತರ ಸಂಘದ ಬೆಂಬಲ ಬೇಕಿದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಯು.ಎಚ್. ವೈದ್ಯನಾಥ ಮಾತನಾಡಿ, ಲಾಗಾಯ್ತಿನಿಂದಲೂ ಪಾಲಿಕೆ ಆಡಳಿತ ಮತ್ತು ಪತ್ರಕರ್ತರ ಸಂಘಗಳ ನಡುವೆ ಉತ್ತಮ ಭಾಂದವ್ಯ ಇದೆ. ಸಂಘದ ಅನೇಕ ಚಟುವಟಿಕೆಗಳಿಗೆ ಪಾಲಿಕೆಯೂ ಕೂಡ ಸಹಕಾರ ನೀಡುತ್ತಾ ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪಾಲಿಕೆಗೆ ಅಧಿಕಾರಿಗಳು ಕೂಡ ಹೊಸಬರು ಬಂದಿದ್ದಾರೆ. ಪತ್ರಕರ್ತ ಸಂಘವು ತನ್ನದೇ ಚಟುವಟಿಕೆಗಳಲ್ಲಿ ನಿರತವಾಗಿದೆ. ಮುಂದೆ ಹೀಗಾಗುವುದು ಬೇಡ. ಉತ್ತಮ ಬಾಂಧವ್ಯದ ಜತೆಗೆ ಉತ್ತಮ ಸಮಾಜಕ್ಕೆ ಶ್ರಮಿಸೋಣ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಹಾಲಸ್ವಾಮಿ ಮಾತನಾಡಿ, ಒಳ್ಳೆಯ ಪತ್ರಕರ್ತರ ನಡುವೆ ಕೆಟ್ಟ ಪತ್ರಕರ್ತರೂ ಇದ್ದ ಹಾಗೆಯೇ ಒಳ್ಳೆಯ ಅಧಿಕಾರಿಗಳ ನಡುವೆ ಕೆಟ್ಟ ಅಧಿಕಾರಿಗಳು ಕೂಡ ಇದ್ದಾರೆ. ಇಂತಹ ಕೆಟ್ಟವರ ನಡುವೆ ಒಳ್ಳೆಯ ಪತ್ರಕರ್ತರು ಮತ್ತು ಒಳ್ಳೆಯ ಅಧಿಕಾರಿಗಳು ಕಳೆದು ಹೋಗುವುದು ಬೇಡ. ನಾವೆಲ್ಲ ಸೇರಿಯೇ ಒಳ್ಖೆಯ ಸಮಾಜಕ್ಜೆ ಶ್ರಮಿಸೋಣ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಉಪಾಧ್ಯಕ್ಷ ದೇಶಾದ್ರಿ ಹೊಸ್ಮನೆ ಅವರು ಸಂಘದ ಪದಾಧಿಕಾರಿಗಳು, ಪಾಲಿಕೆ ಅಧಿಕಾರಿಗಳನ್ನು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.
ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್. ಗೋವಿಂದಪ್ಪ, ಹಿರಿಯ ಅಧಿಕಾರಿಗಳಾದ ಹೇಮಂತ್ ಡೊಳ್ಳೆ, ವಿರೇಶ್ ಪೂಜಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರರಾದ ಪುಷ್ಪಾವತಿ, ಲಕ್ಣ್ಮಿ, ಅನುಪಮಾ, ರೇವತಿ, ಜ್ಯೋತಿಅವರೊಂದಿಗೆ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಸತ್ಯನಾರಾಯಣಪ್ಪ, ದೀಪಕ್ ಸಾಗರ್, ಕೆ.ಆರ್.ಸೋಮನಾಥ್, ಆರುಂಡಿ ಶ್ರೀನಿವಾಸ ಮೂರ್ತಿ, ಹಾಲೇಶಪ್ಪ ಇದ್ದರು.