ಶಿವಮೊಗ್ಗ : ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವು ಶಾಸಕರಿಂದ ಅಡ್ಡ ಮತದಾನ ನಡೆದಿದ್ದು, ಇದು ತಾಯಿಗೆ ಮಾಡಿದ ದ್ರೋಹವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಕಿಡಿಕಾರಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡ ಮತದಾನಕ್ಕೆ ನನ್ನ ವಿರೋಧವಿದೆ. ಆದರೆ ಕೆಲವು ಶಾಸಕರು ಪಕ್ಷದ ಮತ್ತು ತಮ್ಮ ಆತ್ಮಸಾಕ್ಷಿಯನ್ನು ಮೀರಿ ಮತದಾನ ಮಾಡಿದ್ದಾರೆ ಎಂದರು.
ರಾಜಕಾರಣದಲ್ಲಿ ಪಕ್ಷಗಳು ನಿಂತ ನೀರಲ್ಲ. ಬಿಜೆಪಿ ಪಕ್ಷವೂ ದೇಶದ ೨೧ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿದೆ. ಮುಂದೆ ಕರ್ನಾಟಕದಲ್ಲೂ ಅಧಿಕಾರವನ್ನು ಪಡೆಯುತ್ತೇವೆ. ನಮ್ಮ ಪಕ್ಷದ ನಾಯಕತ್ವವನ್ನು ಒಪ್ಪದ ಶಾಸಕರು ಪಕ್ಷವನ್ನು ಬಿಟ್ಟು ಹೋಗಲಿ. ಇದನ್ನು ನಾನು ಯಾವುದೇ ಅಂಚಿಕೆ ಇಲ್ಲದೆ ಬಹಿರಂಗವಾಗಿ ಹೇಳುತ್ತೇನೆ. ಆದರೆ ಪಕ್ಷದಲ್ಲಿರುವ ಕಾರ್ಯಕರ್ತರನ್ನು ಆಳು ಮಾಡಬೇಡಿ. ನಮಗೆಲ್ಲಾ ಪಕ್ಷವನ್ನು ಕಟ್ಟಿ ಬೆಳೆಸುವ ತಾಕತ್ತು ಇನ್ನೂ ಇದೆ. ಈಗಾಗಲೇ ೧ ಲಕ್ಷ ಕಾರ್ಯಕರ್ತರು ನಮ್ಮ ಸಿದ್ದಾಂತವನ್ನು ಒಪ್ಪಿಕೊಂಡು ಪಕ್ಷಕ್ಕಾಗಿ ದುಡಿಯಲು ಸಿದ್ದರಾಗಿದ್ದಾರೆ. ಆತ್ಮಾವಲೋಕನ ಇಲ್ಲದ ಶಾಸಕರು ನಮಗೆ ಅಗತ್ಯವಿಲ್ಲ ಎಂದು ಕುಟುಕಿದರು.

ಪಕ್ಷದ ರಾಜ್ಯಾಧ್ಯಕ್ಷರನ್ನು ನಮ್ಮ ಹೈಕಮಾಂಡ್ ನೇಮಕ ಮಾಡಿರುವುದು. ಅದರ ಬಗ್ಗೆ ತಕರಾರು ಇದ್ದರೆ ಹೈಕಮಾಂಡ್ಗೆ ತಿಳಿಸಲಿ. ಆದರೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಪಕ್ಷದ ಸಂಘಟನೆಗಾಗಿ ಉತ್ತಮ ಕಾರ್ಯ ಮಾಡುತ್ತಿದ್ದು, ರಾಜ್ಯಗಳನ್ನು ಸುತ್ತಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ನಿಂದ ಹಗಲು ದರೋಡೆ
ರಾಜ್ಯದ ವಿವಿಧೆಡೆ ಕಾಂಗ್ರೆಸ್ ಭವನಗಳ ನಿರ್ಮಾಣಕ್ಕಾಗಿ ನಾಗರೀಕ ಸೌಲಭ್ಯ(ಸಿಎ)ನಿವೇಶನಗಳನ್ನು ನಿಯಮಬಾಹಿರವಾಗಿ ಮಾರುಕಟ್ಟೆ ಹಾಗೂ ಎಸ್ಎ ದರಕ್ಕಿಂತ ಕಡಿಮೆ ದರದಲ್ಲಿ ನಿವೇಶನ ಕೊಂಡು ದುರ್ಬಳಕ್ಕೆ ಮಾಡಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಗಂಭಿರ ಆರೋಪ ಮಾಡಿದ್ದಾರೆ.
ರಾಜಕೀಯ ಪಕ್ಷಗಳಿಗೆ ನಿವೇಶನವನ್ನು ನೀಡವಂತಿಲ್ಲ ಎಂಬ ನಿಯಮಗಳು ಇದ್ದರು ಕೂಡ ಆ ನಿಯಮವನ್ನು ಗಾಳಿಗೆ ತೂರಲಾಗಿದೆ. ಅಲ್ಲಿ ನಿವೇಶನ ಪಡೆಯುವ ಸಂಘ ಸಂಸ್ಥೆಗಳು ಶಿಕ್ಷಣ, ಆರೋಗ್ಯ, ಸಾಮಾಜಿಕ ಸೇವಾ ಕೆಲಸಗಳನ್ನು ಮಾಡಬೇಕಾಗುತ್ತದೆ. ಆದರೆ ಕಾಂಗ್ರೆಸ್ ಭವನ ಹೆಸರಿನಲ್ಲಿ ಇವರು ಪಕ್ಷದ ಕಚೇರಿಯನ್ನ ಸ್ಥಾಪಿಸಲು ಹೊರಟಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪವು ಸೇರಿದಂತೆ ರಾಜ್ಯದ ಸುಮಾರು ೨೩ ಕಡೆಗಳಲ್ಲಿ ಈ ರೀತಿಯ ನಿವೇಶನನ ಪಡೆಯಲಾಗುತ್ತಿದೆ. ತುಮಕೂರಿನಲ್ಲಿ ಕೇವಲ ಶೇ. ೫ ರಷ್ಟು ಶುಲ್ಕ ನೀಡಿ ನಿವೇಶನ ಪಡೆದು ಕಾಂಗ್ರೆಸ್ ಭವನ ನಿರ್ಮಾಣ ಮಾಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿಯೇ ಇದನ್ನು ತೀರ್ಮಾನ ಮಾಡಲಾಗಿದೆ. ವಿಧಾನ ಮಂಡಲದ ಅಧಿವೇಶನದಲ್ಲಿ ಈ ಬಗ್ಗೆ ನಾನು ಪ್ರಶ್ನೆ ಮಾಡಿದಾರೆ ನಗಾರಭಿವೃದ್ದಿ ಸಚಿವ ಹಾರಿಕೆ ಉತ್ತರ ನೀಡಿದ್ದರು. ಸುಮಾರು ಸಾವಿರ ಕೋಟಿ ಮೌಲ್ಯದ ನಿವೇಶನಕ್ಕೆ ಕೇವಲ ೫೦ ಕೋಟಿಯನ್ನು ನೀಡಿ ಇವರು ಒಂದು ರೀತಿಯಲ್ಲಿ ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಆಡಳಿತ ಬಂದು ೧೫ ದಿನಗಳಾದರು ಇನ್ನೂ ಸಂಪುಟ ವಿಸ್ತರಣೆಯ ಗೊಂದಲದಲ್ಲೆ ಮುಳುಗಿದ್ದಾರೆ. ಮುಖ್ಯವಾಗಿ ಶೈಕ್ಷಣಿಕ ಇಲಾಖೆ ಸೊರಗಿದೆ. ಇನ್ನೇನು ಶೈಕ್ಷಣಿಕ ವರ್ಷ ಆರಂಭವಾಗಿದೆ . ಶಿಕ್ಷರ ಕೊರತೆ ಇದೆ. ರಾಶಿ ರಾಶಿ ಸಮಸ್ಯೆಗಳಿಗೆ ಮಧು ಬಂಗಾರಪ್ಪ ಮೂವತ್ತು ಸಾವಿರ ಶಿಕ್ಷಕರನ್ನು ಭರ್ತಿ ಮಾಡುತ್ತೇವೆಂದು ಮೂಗಿಗೆ ತುಪ್ಪ ಸವರಿ ಹೋಗಿದ್ದಾರೆ. ಶಿಕ್ಷಕರು ಇಲ್ಲ. ಸಮಸ್ಯೆಗಳು ಬೇಕಾದಷ್ಟಿವೆ. ಸರ್ಕಾರ ಎಲ್ಲವನ್ನೂ ಮರೆತು ಗೊಂದಲದಲ್ಲಿ ಮುಳುಗಿದೆ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಲತೇಶ್, ಎಸ್.ಚಂದ್ರಶೇಖರ್, ಮಂಜುನಾಥ್, ಶರತ್ ಕಲ್ಯಾಣಿ ಇದ್ದರು.