ಶಿವಮೊಗ್ಗ : ಕರ್ನಾಟಕದ ಮಧ್ಯ ಭಾಗ ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ವಕೀಲರ ಸಂಘ ಇಂದು ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಜಾಥಾವನ್ನು ಹಮ್ಮಿಕೊಂಡು ಪೀಠ ಸ್ಥಾಪನೆಯ ಗಂಭೀರತೆಯನ್ನು ಪ್ರದರ್ಶಿಸಿತು.

ಕಳೆದ ೧೩ ದಿನಗಳಿಂದ ನ್ಯಾಯಪೀಠಕ್ಕೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಇಂದು ಬೃಹತ್ ಜಾತಾ ಹಮ್ಮಿಕೊಳ್ಳುವುದರ ಮೂಲಕ ಮತ್ತಷ್ಟು ತೀವ್ರತೆಯನ್ನು ಪಡೆದುಕೊಂಡಿತ್ತು. ಜಿಲ್ಲಾ ನ್ಯಾಯಾಲಯದ ಆವರಣದಿಂದ ಹೊರಟ ಸಾವಿರಾರು ಸಂಖ್ಯೆಯಲ್ಲಿ ಇದ್ದ ಹೋರಾಟಗಾರರ ಈ ಪ್ರತಿಭಟನಾ ಜಾಥಾ ನಗರದ ಮಹಾವೀರ ವೃತ್ತ, ಸರ್ ಎಂ.ವಿಶ್ವೇಶ್ವರಯ್ಯ ರಸ್ತೆ, ಬಿ.ಹೆಚ್.ರಸ್ತೆಯ ಮೂಲಕ ಶಿವಪ್ಪನಾಯಕ ವೃತ್ತ, ನೆಹರೂ ರಸ್ತೆ, ಸೀನಪ್ಪಶೆಟ್ಟಿ ವೃತ್ತ (ಗೋಪಿಸರ್ಕಲ್), ಬಾಲರಾಜ್ ಅರಸ್ ರಸ್ತೆ, ಪುನಃ ಮಹಾವೀರ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಎದುರಿನ ರಸ್ತೆಯಲ್ಲಿ ಸಭೆಯಾಗಿ ಮಾರ್ಪಟ್ಟಿತ್ತು.

ಸಭೆಯಲ್ಲಿ ಭಾಗವಹಿಸಿದ ಬೆಕ್ಕಿನಕಲ್ಮಠದ ಶ್ರೀಗಳು, ಬಸವ ಕೇಂದ್ರದ ಶ್ರೀಗಳು, ಜಡೆಮಠದ ಶ್ರೀಗಳು, ಹೈಕೋರ್ಟ್ ಪೀಠ ಸ್ಥಾಪನೆಯ ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆ.ಬಸಪ್ಪಗೌಡ, ಅಶೋಕ್ ಜಿ.ಭಟ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್. ರಾಘವೇಂದ್ರ ಸ್ವಾಮಿ, ರಾಷ್ಟ್ರಭಕ್ತ ಬಳಗದ ಕೆ.ಎಸ್.ಈಶ್ವರಪ್ಪ, ಕೆ.ಈ.ಕಾಂತೇಶ್, ರೈತಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಕೆ.ವಿ.ವಸಂತ್ಕುಮಾರ್, ಡಾ.ಸತೀಶ್ಕುಮಾರ್ ಶೆಟ್ಟಿ ಮೊದಲಾದವರು ಮಾತನಾಡಿ, ಈಗಾಗಲೇ ಮಂಗಳೂರಿಗೆ ಸಂಚಾರಿ ನ್ಯಾಯಪೀಠ ಮಂಜೂರಾಗಿದ್ದು ಮಧ್ಯ ಕರ್ನಾಟಕದ ದುರಾದೃಷ್ಟ. ಮಂಗಳೂರು ಮತ್ತು ಶಿವಮೊಗ್ಗ ನಡುವೆ ಹೋಲಿಕೆ ಮಾಡಿದರೆ ಶಿವಮೊಗ್ಗವೇ ಹೈಕೋರ್ಟ್ ಪೀಠ ಸ್ಥಾಪನೆಗೆ ಎಲ್ಲಾ ಜನರ ಹಿತದೃಷ್ಟಿಯಿಂದ ಸೂಕ್ತ ಸ್ಥಳವಾಗಿದೆ. ಒಂದು ವೇಳೆ ಶಿವಮೊಗ್ಗಕ್ಕೆ ಹೈಕೋರ್ಟ್ ಪೀಠ ಮಂಜೂರು ಮಾಡದೇ ಹೋದರೆ ಇನ್ನು ಮುಂದೆಯೂ ನಿರಂತರವಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಕೆ.ವಿ.ವಸಂತ್ಕುಮಾರ್ ಮಾತನಾಡಿ, ನಾಗರಿಕ ಹಿತರಕ್ಷಣಾ ವೇದಿಕೆ ಮೊದಲ ದಿನದಿಂದಲೂ ಹೋರಾಟಕ್ಕೆ ಬೆಂಬಲ ನೀಡುತ್ತಾ ಬಂದಿದೆ. ಮಂಗಳೂರು ಪೀಠವನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ರೈತನಾಯಕ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಈ ಹೋರಾಟ ಪಕ್ಷಾತೀತ-ಜಾತ್ಯಾತೀತವಾಗಿ ರೂಪುಗೊಂಡಿದ್ದು, ಎಲ್ಲಾ ಸಂಘಟನೆಗಳು ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದೆ. ಶಿವಮೊಗ್ಗ ಹೋರಾಟದ ಜಿಲ್ಲೆಯಾಗಿದ್ದು, ಬಹುತೇಕ ಚಳುವಳಿಗಳು ಇಲ್ಲಿಂದಲೇ ಪ್ರಾರಂಭವಾಗಿದ್ದವು. ಹೈಕೋರ್ಟ್ ಪೀಠದ ಬೇಡಿಕೆ ಮನ್ನಿಸದಿದ್ದರೆ ಹೋರಾಟ ತೀವ್ರವಾಗಿ ಬೇಡಿಕೆ ಈಡೇರುವವರೆಗೆ ಮುಂದುವರೆಯುತ್ತದೆ.
ಹಿರಿಯ ವಕೀಲರಾದ ಅಶೋಕ್ ಜಿ. ಭಟ್ ಮಾತನಾಡಿ, ಶಿವಮೊಗ್ಗದ ಜನ ಒಗ್ಗಟ್ಟಿನ ಹೋರಾಟ ಮಾಡಿ ಸರ್ಕಾರಕ್ಕೆ ವಾಸ್ತವಾಂಶ ಇಂದು ತೋರಿಸಿದ್ದಾರೆ. ಮಂಗಳೂರಿಗೆ ಸಂಪರ್ಕದ ವ್ಯವಸ್ಥೆ ಸರಿಯಿಲ್ಲ. ಶಿವಮೊಗ್ಗದಲ್ಲಿ ಪೀಠವಾದರೆ ಎಲ್ಲಾ ರೀತಿಯ ಸಂಪರ್ಕ ವ್ಯವಸ್ಥೆ ಇದೆ. ಐದು ಜಿಲ್ಲೆಗಳಿಗೂ ಉತ್ತಮ ಸಂಪರ್ಕ ವ್ಯವಸ್ಥೆ ಇದ್ದು, ಕೇಸುಗಳ ಅಂಕಿಅಂಶದ ದೃಷ್ಟಿಯಿಂದಲೂ ಶಿವಮೊಗ್ಗದಲ್ಲಿ ಪೀಠ ಸ್ಥಾಪನೆ ಆಗಲೇಬೇಕು ಎಂದರು.
ವಕೀಲ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರಸ್ವಾಮಿ ಮಾತನಾಡಿ, ಮೊದಲು ಜಿಲ್ಲೆಯ ಎಲ್ಲಾ ತಾಲ್ಲೂಕಿನ ವಕೀಲರ ಸಭೆನಡೆಸಿ, ಈ ಸಮಸ್ಯೆ ಬಗ್ಗೆ ವಿವರಿಸಿದಾಗ ಎಲ್ಲರೂ ಬೆಂಬಲಿಸಿ ಹೋರಾಟಕ್ಕೆ ಸಿದ್ಧರಾದರು. ಹೈಕೋರ್ಟ್ ಪೀಠದ ಅನಿವಾರ್ಯತೆ ಮನಗಂಡ ಎಲ್ಲಾ ಸಂಘ-ಸಂಸ್ಥೆಗಳು ಕೈಜೋಡಿಸಿದವು. ವಕೀಲರು ತಮ್ಮ ದಿನನಿತ್ಯದ ಪ್ರಾಕ್ಟೀಸ್ನಲ್ಲೇ ಬ್ಯೂಸಿಯಾಗಿರುತ್ತಾರೆ. ಆದರೆ ಈಗ ಅನಿವಾರ್ಯತೆಯನ್ನು ಮನಗಂಡು ಹೋರಾಟಕ್ಕೆ ಕೈಜೋಡಿಸಿ ಬೀದಿಗಿಳಿದಿದ್ದಾರೆ. ಫಲ ಸಿಗುವವರೆಗೆ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ೧೩ ದಿನಗಳಿಂದ ನಡೆಯುತ್ತಿರುವ ಹೋರಾಟದ ಸಂಪೂರ್ಣ ಚಿತ್ರಣವನ್ನು ನೀಡಿ ಮನವಿ ಸಲ್ಲಿಸಲಾಯಿತು. ಮತ್ತು ಹೈಕೋರ್ಟ್ ಪೀಠಕ್ಕೆ ಜಿಲ್ಲಾಧಿಕಾರಿಗಳು ಜಾಗವನ್ನು ಗುರುತಿಸಿ ಸರ್ಕಾರಕ್ಕೆ ಸಕಾರಾತ್ಮಕವಾಗಿ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಲಾಯಿತು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳಿಗೆ ಹೋರಾಟದ ಬಗ್ಗೆ ಸರ್ಕಾರಕ್ಕೆ ಅರಿವಿದೆ. ನಿಮ್ಮ ಮನವಿಯನ್ನು ಯಥಾವತ್ತಾಗಿ ಶಿಫಾರಸ್ಸಿನೊಂದಿಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವಕೀಲರಾದ ವಾಸುದೇವಮೂರ್ತಿ, ಕೆ.ಪಿ.ಶ್ರೀಪಾಲ್, ಶ್ವೇತಾ, ಆಯನೂರು ಮಂಜುನಾಥ್ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ದೀಪಕ್ಸಿಂಗ್, ಜಿಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರಾದ ರಮೇಶ್ ಶಂಕರಘಟ್ಟ, ಬಿ.ಎ.ರಮೇಶ್ ಹೆಗ್ಡೆ, ಖಲೀಂಪಾಷಾ, ಶಿವಕುಮಾರ್, ನಾಗರಾಜ್ ಕಂಕಾರಿ, ಪಾಲಾಕ್ಷಿ, ಸೈಯದ್ ವಾಹಿದ್ ಅಡ್ಡು, ಡಿಎಸ್ಎಸ್ ಪ್ರಮುಖರಾದ ಎಂ.ಗುರುಮೂರ್ತಿ, ಜಯ ಕರ್ನಾಟಕ ಜನಪರ ವೇದಿಕೆ ಸುರೇಶ್ ಶೆಟ್ಟಿ, ಸಿಐಟಿಯು ಕಾರ್ಯಕರ್ತರು, ಜಿಲ್ಲಾ ಮಲೆನಾಡು ಮುದ್ರಕರ ಸಂಘದ ಗಣೇಶ್ ಬಿಳಗಿ ಮತ್ತು ಪದಾಧಿಕಾರಿಗಳು, ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಹರ್ಷ ಕಾಮತ್ ಮತ್ತು ಪದಾಧಿಕಾರಿಗಳು, ಜಿಲ್ಲಾ ಛಾಯಾ ಗ್ರಾಹಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಜವಳಿ ವರ್ತಕರ ಸಂಘದ ಪದಾಧಿಕಾರಿಗಳು, ಬೀದಿಬದಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಜೈನ್ ವರ್ತಕರ ಸಂಘ, ಜೆಸಿಐ ಮತ್ತು ರೋಟರಿ ಸಂಘಟನೆಗಳು, ವೀರಶೈವ ಮಹಾಸಭಾ, ಸ್ಮಾರ್ಥ ಬ್ರಾಹ್ಮಣರ ಸಂಘ, ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಟ್ರಸ್, ದ.ಸಂ.ಸ.(ಅಂಬೇಡ್ಕರ್ ವಾದ), ಪೀಸ್ ಆರ್ಗನೈಜೇಷನ್, ಆದಿ ಜಾಂಬವ, ಮಲ್ನಾಡ್ ಕೌಂಟಿ ನಿವಾಸಿಗಳ ಸಂಘ, ದೀವರ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಒಕ್ಕಲಿಗರ ಸಂಘ, ಸೇರಿದಂತೆ ೩೫ಕ್ಕೂ ಹೆಚ್ಚು ಸಂಘಟನೆಗಳು ಜಾಥಾದಲ್ಲಿ ಭಾಗವಹಿಸಿದ್ದವು.
ಶಾಂತಿಗೆ ಹೆಸರಾದ ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಹೋರಾಟದ ಕಿಚ್ಚು ಹೆಚ್ಚಾಗಿ ಶಾಂತಿ ಕದಡಬಾರದು. ನಾವು ಶಾಂತಿಗೂ ಸಿದ್ಧ. ಸಮರಕ್ಕೂ ಬದ್ಧ. ಶಿವಮೊಗ್ಗ ಮಧ್ಯ ಕರ್ನಾಟಕದ ಪ್ರಮುಖ ಸ್ಥಳವಾಗಿದ್ದರಿಂದ ಪ್ರಥಮ ಪ್ರಾಶಸ್ತ್ಯ ನೀಡಿ. ಶಿವಮೊಗ್ಗಕ್ಕೆ ತಕ್ಷಣ ಹೈಕೋರ್ಟ್ ಸಂಚಾರಿಪೀಠ ಮಂಜೂರು ಮಾಡಲು ಸರ್ಕಾರ ಮುಂದಾಗಬೇಕು.
-ಕೆ.ಈ. ಕಾಂತೇಶ್, ರಾಷ್ಟ್ರಭಕ್ತರ ಬಳಗ
ಎಂಚಿನ ಬೊಕ್ಕದಾಲ ಇಜ್ಜಿ ಬೇಡ. ಮಂಗಳೂರು ಪೀಠಕ್ಕೆ ನಮ್ಮನ್ನು ಸೇರಿಸುವುದು ಬೇಡ. ಈಗಾಗಲೇ ಆಸ್ಪತ್ರೆಗೆ ಉಡುಪಿ, ಮಂಗಳೂರಿಗೆ ಕರೆದುಕೊಂಡು ಹೋದಾಗ ಪ್ರಾಣಬಿಟ್ಟ ಅನೇಕ ಉದಾಹರಣೆಗಳು ನಮ್ಮ ಮುಂದಿದೆ. ಮುಂದಿನ ದಿನಗಳಲ್ಲಿ ಅಲ್ಲಿನ ಹೈಕೋರ್ಟ್ ಪೀಠಕ್ಕೆ ಶಿವಮೊಗ್ಗ ಸೇರಿದರೆ ಅಲ್ಲಿ ಹೋಗುವ ಜನರು ಮತ್ತು ವಕೀಲರು ಅನಿವಾರ್ಯವಾಗಿ ತುಳು ಕಲಿಯಬೇಕಾಗುತ್ತದೆ. ಸರಿಯಾದ ಆಹಾರ ವ್ಯವಸ್ಥೆ ಇರುವುದಿಲ್ಲ. ಆರ್ಥಿಕವಾಗಿ ದುಬಾರಿ. ಲಾಡ್ಜ್ಗಳಲ್ಲಿ ದಿನಕ್ಕೆ ೩೦೦೦ ರೂ. ತೆರೆಬೇಕಾಗುತ್ತದೆ. ಉಪ್ಪುನೀರು ಕುಡಿಯಬೇಕಾಗುತ್ತದೆ. ಮಂಗಳೂರಿನ ಸಹವಾಸವೇ ಬೇಡ. ಬಿಸಿಲಿನ ತಾಪಮಾನಕ್ಕೆ ಬಳಲಬೇಕಾಗುತ್ತದೆ. ಹೈಕೋರ್ಟ್ ಪೀಠ ಇಲ್ಲಿಗೇ ಬರಲಿ. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಎಲ್ಲಾ ರೀತಿಯ ನೆರವು ನೀಡಲು ಕೋರಲಾಗುವುದು.
-ಹೆಚ್.ಸಿ.ಯೋಗೀಶ್
ಒಂದು ಕಡೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದರೆ ಇನ್ನೊಂದೆಡೆ ಹೈಕೋರ್ಟ್ ಪೀಠದ ಹೋರಾಟದ ಕಾವು ನಮ್ಮನ್ನು ಸುಡುತ್ತಿದೆ. ಜನಪ್ರತಿನಿಧಿಗಳಾಗಿ ಇಂತಹ ಹೋರಾಟಗಳನ್ನು ಹಮ್ಮಿಕೊಂಡಿರುವುದು ಅಭಿನಂದನೀಯ. ಹೋರಾಟಕ್ಕೆ ಅವಕಾಶ ಕೊಡದೆ ಆದಷ್ಟು ಬೇಗ ಪೀಠ ಸ್ಥಾಪನೆಯ ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸಬೇಕು. ಹೋರಾಟ ಮಾರಕವಾಗುವುದಕ್ಕೂ ಮೊದಲು ಬಹುಬೇಗ ಸಮಸ್ಯೆಗೆ ಸರ್ಕಾರ ಪರಿಹಾರ ನೀಡಬೇಕು. ನೂತನ ಸರ್ಕಾರದ ಹೊಸ ಮುಖ್ಯಮಂತ್ರಿಗಳಿಗೆ ನಾವು ಈ ಮೂಲಕವೇ ಪೀಠ ಸ್ಥಾಪನೆಯ ಪ್ರಸ್ತಾವನೆಯನ್ನು ಸಲ್ಲಿಸುತ್ತಿದ್ದೇವೆ. ಅವರು ಪ್ರಥಮ ಪ್ರಾಶಸ್ತ್ಯದ ಮೇಲೆ ನಮಗೆ ಹೈಕೋರ್ಟ್ ಪೀಠ ಮಂಜೂರು ಮಾಡಲಿ.
-ಬೆಕ್ಕಿನ ಕಲ್ಮಠ ಶ್ರೀಗಳು
ಎಲ್ಲಾ ಭಿನ್ನಾಭಿಪ್ರಾಯ, ಪಕ್ಷಬೇಧಗಳನ್ನು ಮರೆತು ಈ ಹೋರಾಟಕ್ಕೆ ಬೆಂಬಲ ಸಿಗುತ್ತಿದೆ. ಉತ್ತರ ಕನಾಟಕಕ್ಕೆ, ಕಲ್ಯಾಣ ಕರ್ನಾಟಕಕ್ಕೆ ಪೀಠ ಸ್ಥಾಪನೆಮಾಡಿ ಅವರ ಬೇಡಿಕೆ ಈಡೇರಿಸಿದ್ದೀರಿ. ಮಂಗಳೂರಿಗೆ ಪೀಠ ಮಂಜೂರು ಮಾಡಿದ್ದು ಅವೈಜ್ಞಾನಿಕ ಸರ್ಕಾರ ಇನ್ನೊಮ್ಮೆ ಇದನ್ನು ಪರಿಶೀಲಿಸಿ ಶಿವಮೊಗ್ಗಕ್ಕೆ ಸಂಚಾರಿಪೀಠ ಮಂಜೂರು ಮಾಡಬೇಕು. ಈ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತೇವೆ. ಇದರ ಮಧ್ಯದಲ್ಲಿ ನೂತನ ಮುಖ್ಯಮಂತ್ರಿಗಳನ್ನು ಹಾಗೂ ಮುಖ್ಯ ನ್ಯಾಯಾಧೀಶರನ್ನು, ಕೇಂದ್ರದ ಕಾನೂನು ಮಂತ್ರಿಗಳನ್ನು ಭೇಟಿಯಾಗುತ್ತೇವೆ. ಆದರೆ ಪೀಠಕ್ಕಾಗಿ ಹೋರಾಟ ನಿರಸನ ಮುಂದುವರಿಯುತ್ತದೆ. ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲುವುದಿಲ್ಲ.
-ಕೆ.ಬಸಪ್ಪಗೌಡ, ಗೌರವಾಧ್ಯಕ್ಷರು, ಹೈಕೋರ್ಟ್ ಸಂಚಾರಿಪೀಠ ಹೋರಾಟ ಸಮಿತಿ