ಶಿವಮೊಗ್ಗ : ಜಿಲ್ಲೆಯ ಇತಿಹಾಸದಲ್ಲೇ ಅಕ್ರಮ ಮರಳು ಅಡ್ಡೆಗಳ ಮೇಲೆ ಅತಿ ದೊಡ್ಡ ಲೋಕಾಯುಕ್ತ ಕಾರ್ಯಾಚರಣೆ ನಡೆದಿದೆ. ಜಿಲ್ಲೆಯ ಶಿವಮೊಗ್ಗ ಭದ್ರಾವತಿ ತೀರ್ಥಹಳ್ಳಿ ಹೊಸನಗರ ಸಾಗರ ತಾಲೂಕುಗಳ ವ್ಯಾಪ್ತಿಯ ೨೫ಕ್ಕೂ ಹೆಚ್ಚು ಅಕ್ರಮ ಮರಳು ಅಡ್ಡಗಳ ಮೇಲೆ ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ೧೨ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ಅಕ್ರಮ ಮರಳು ಗಣಿಗಾರಿಕೆ ಪತ್ತೆ ಹಚ್ಚಿದೆ.

ಎರಡು ದಿನಗಳ ಹಿಂದೆಯಷ್ಟೇ ಗ್ರಾಮಾಂತರ ಶಿವಮೊಗ್ಗದ ಹೊಳಲೂರು ಮತ್ತು ಇತರೆಡೆ ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ್ ನೇತೃತ್ವದಲ್ಲಿ ಗ್ರಾಮದಲ್ಲಿ ವಿವಿದೆಢೆ ಅಕ್ರಮವಾಗಿ ಸಂಗ್ರಹಿಸಿದ್ದ ಎಂಬತ್ತಕ್ಕೂ ಹೆಚ್ಚು ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಯಿತು. ಜಿಲ್ಲೆಯಲ್ಲಿ ಮರಳು ಮತ್ತು ಕಲ್ಲು ಗಣಿಗಾರಿಕೆ ಮಾಫಿಯಾದ ಕಾಣದ ಕೈಗಳು ಅವಿರತವಾಗಿ ಅನಧೀಕೃತವಾಗಿ ನಿರಂತರವಾಗಿ ಲೂಟಿ ಮಾಡುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಮತ್ತು ಭೂವಿಜ್ಞಾನ ಇಲಾಖೆಗೆ ಹಲವು ಭಾರಿ ಸಾಕ್ಷಿಸಮೇತ ದೂರು ನೀಡಿದರೂ ಯಾವುದೇ ಕಟ್ಟುನಿಟ್ಟಿನ ಕ್ರಮವಾಗಿರಲಿಲ್ಲ. ಗಣಿಗಾರಿಕೆ ಮತ್ತು ಅಕ್ರಮ ಮರಳು ಗಣಿಗಾರಿಕೆಗೆ ರಾಜಕೀಯ ಮುಖಂಡರ ಸಹಕಾರ ಕೂಡ ಇದೆ ಎನ್ನಲಾಗಿದ್ದು, ಗಣಿವಿಜ್ಞಾನ ಇಲಾಖೆಯ ಅಧಿಕಾರಿಗಳು ಕೂಡ ರಾಜಕೀಯ ಪುಡಾರಿಗಳೊಂದಿಗೆ ಕೈಜೋಡಿಸಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿತ್ತು.
ಈ ಹಿನ್ನಲೆಯಲ್ಲಿ ಇಂದು ಜಿಲ್ಲೆಯ ವಿವಿದೆಢೆ ಲೋಕಾಯುಕ್ತರ ದೊಡ್ಡ ತಂಡ ಕಾರ್ಯಾಚರಣೆ ನಡೆಸಿದ್ದು ಹಲವು ಮಿಕಗಳಿಗೆ ಬಲೆಬೀಸಿ ಸ್ಪಷ್ಟ ಸಂದೇಶ ನೀಡಿದೆ. ಮತ್ತು ಅಕ್ರಮ ಮರಳನ್ನು ವಶಕ್ಕೆ ಪಡೆದಿದೆ. ವಿಪರ್ಯಾಸವೆಂದರೆ ಜಪ್ತಿಮಾಡಿದ ಮರಳನ್ನು ಜಿಲ್ಲಾಡಳಿತದ, ಕಂದಾಯ ಇಲಾಖೆಯ ಜಾಗದಲ್ಲಿ ಸಂಗ್ರಹಿಸಲು ಕೂಡ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಜನ ಆರೋಪಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಸಾಕ್ಷಿಸಮೇತ ದೂರು ನೀಡಿದಾಗ ಮಾತ್ರ ಕಾಟಾಚಾರಕ್ಕೆ ದಾಳಿಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದು ಕೂಡ ಸಾರ್ವಜನಿಕರ ಆರೋಪವಾಗಿದೆ.
ಇಂದು ಅಕ್ರಮ ಮರಳುಗಾರಿಕೆ ಸಂಬಂಧ ಶಿವಮೊಗ್ಗ ಭದ್ರಾವತಿ ತೀರ್ಥಹಳ್ಳಿ ಸಾಗರ ತುಂಗಾ, ಭದ್ರಾ, ಶರಾವತಿ, ನದಿ ತೀರ ಹಲವಾರು ಕಡೆ ಲೋಕಾಯುಕ್ತ ಅಧಿಕಾರಿಗಳು ಬೇರೆ ಬೇರೆ ಹಾವೇರಿ ಇನ್ನಿತರೆ ಜಿಲ್ಲೆಯ ಅಧಿಕಾರಿಗಳು ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಹಾಗೂ ಗಣಿ ಮತ್ತು ಭೂ ವಿಜ್ಞಾನಿ ಅಧಿಕಾರಿ ಪಿ ಕೆ ನಾಯ್ಕ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ . ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲ್ ಅವರು ಅಕ್ರಮ ಮರಳು ಮಾಫಿಯಾದ ವಿರುದ್ಧ ಸರ್ಚ್ ವಾರೆಂಟ್ ಜಾರಿ ಮಾಡಿದ್ದಾರೆ.

ಈ ನೆಲೆಯಲ್ಲಿ ಭದ್ರಾವತಿ ತಾಲೂಕಿನ ಸನ್ಯಾಸಿ ಕೋಡ ಮಗ್ಗಿ ನಿಂಬೆಗೊಂದಿ ಮಂಗೋಟೆ ಮೊದಲಾದ ಕಡೆ ಶಿವಮೊಗ್ಗ ತಾಲೂಕಿನ ಕೂಡಲಿ ಹಾಡೋನಹಳ್ಳಿ, ತೀರ್ಥಹಳ್ಳಿ ತಾಲೂಕಿನ ಮುಂಡಳ್ಳಿ ತೂದೂರು ದಬ್ಬಣಗದ್ದೆ ಮೊದಲಾದ ಕಡೆ ಹೊಸನಗರ ತಾಲೂಕಿನ ಸುತ್ತಾ, ಹರಿದ್ರಾವತಿ, ಸಂಪೆಕಟ್ಟೆ ಮೊದಲಾದ ಕಡೆ, ಸಾಗರ ತಾಲೂಕಿನ ಆವಿನ ಹಳ್ಳಿ ಮೊದಲಾದ ಕಡೆ ಅಕ್ರಮ ಮರಳು ಸಂಗ್ರಹ ಮತ್ತು ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಜೆಸಿಬಿ ಟ್ಯಾಕ್ಟರ್ ಲಾರಿ ಸೇರಿದಂತೆ ೫೦ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದು ನೂರಾರು ಮೆಟ್ರಿಕ್ ಟನ್ ಮರಳು ಸಂಗ್ರಹ ಜಪ್ತಿ ಮಾಡಲಾಗಿದೆ. ಗಣಿ ವಿಜ್ಞಾನಿ ಪಿಕೆ ನಾಯ್ಕ್ ಅವರು ಇತ್ತೀಚಿಗೆ ಒಂದುವರೆ ಕೋಟಿ ದಂಡ ವಿಧಿಸಿದ್ದರು ಯಾವುದೇ ರೀತಿ ಹಣ ಕಟ್ಟಿಸಿಕೊಳ್ಳಲಿಲ್ಲ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅವರ ಕಚೇರಿಯಲ್ಲಿ ಪರಿಶೀಲನೆ ಮುಂದುವರೆದಿದೆ. ಬೆಳಗ್ಗೆಯಿಂದಲೇ ಆರಂಭಿಸಿರುವ ದಾಳಿ ಸಂಜೆವರೆಗೂ ಮುಂದುವರೆಯುವ ಸಾಧ್ಯತೆ ಇದೆ.
