ಶಿವಮೊಗ್ಗ : ರಾಷ್ಟ್ರಭಕ್ತರ ಬಳಗ ಮತ್ತು “ಪರಿಸರಕ್ಕಾಗಿ ನಾವು” ಸಂಘಟನೆಯ ವತಿಯಿಂದ ಪಶ್ಚಿಮ ಘಟ್ಟಗಳಲ್ಲಿ ಪ್ರಸ್ತಾವಿತವಾಗಿರುವ ಬೇಸೂರು ಅಣುವಿದ್ಯುತ್ ಯೋಜನೆಯನ್ನು ವಿರೋಧಿಸಿ ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಪಶ್ಚಿಮ ಘಟ್ಟಗಳು ಈಗಾಗಲೇ ಪರಿಸರದ ದೃಷ್ಟಿಯಿಂದ ಅತೀ ಸೂಕ್ಷ್ಮ ಹಾಗೂ ಅಳಿವಿನಂಚಿನಲ್ಲಿರುವ ಪ್ರದೇಶವಾಗಿದ್ದು, ಇಲ್ಲಿ ಅಣುವಿದ್ಯುತ್ ಯೋಜನೆ ಜಾರಿಗೊಂಡಲ್ಲಿ ಅಪಾರ ಪ್ರಮಾಣದ ಸಸ್ಯ ಸಂಕುಲ, ಪ್ರಾಣಿ ಸಂಕುಲ ಹಾಗೂ ಜಲ ಮೂಲಗಳ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಯುನೆಸ್ಕೋ ಹಾಗೂ ಕಸ್ತೂರಿ ರಂಗನ್ ಮತ್ತು ಮಾಧವ್ ಗಾಡ್ಗಿಲ್ ವರದಿಗಳಲ್ಲಿಯೂ ಪಶ್ಚಿಮ ಘಟ್ಟಗಳಲ್ಲಿ ಹೊಸ ದೊಡ್ಡ ಯೋಜನೆಗಳನ್ನು ಕೈಗೊಳ್ಳುವುದು ಅಪಾಯಕಾರಿಯಾಗಿದೆ ಎಂದು ಉಲ್ಲೇಖಿಸಲಾಗಿದೆ.

ಈಗಾಗಲೇ ಜಲವಿದ್ಯುತ್ ಯೋಜನೆಗಳಿಂದ ಪಶ್ಚಿಮ ಘಟ್ಟಗಳ ಪರಿಸರ ವ್ಯವಸ್ಥೆಗೆ ಹಾನಿಯಾಗಿದ್ದು, ಮತ್ತಷ್ಟು ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಪರಿಸರ ನಾಶವಾದರೆ ದಕ್ಷಿಣ ಭಾರತದ ಕೋಟ್ಯಂತರ ಜನರು ನೀರಿನ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಸಂಘಟನೆಗಳು ಎಚ್ಚರಿಸಿವೆ. ಅಣುವಿದ್ಯುತ್ ಯೋಜನೆಗಳು ಪರಿಸರ ಹಾಗೂ ಮನುಕುಲಕ್ಕೆ ಅಪಾಯಕಾರಿ ಎಂಬುದನ್ನು ವಿಶ್ವದ ಅನೇಕ ರಾಷ್ಟ್ರಗಳು ಮನಗಂಡಿದ್ದು, ಚೆರ್ನೋಬೈಲ್ ದುರಂತದಂತಹ ಘಟನೆಗಳು ಇದಕ್ಕೆ ಸಾಕ್ಷಿಯಾಗಿದೆ.
ಸೌರಶಕ್ತಿ ಹಾಗೂ ಪವನಶಕ್ತಿ ಮೂಲಕ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಿರುವಾಗ ಅತೀ ದುಬಾರಿ ಹಾಗೂ ಅಪಾಯಕಾರಿಯಾದ ಅಣುವಿದ್ಯುತ್ ಯೋಜನೆಯನ್ನು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಜಾರಿಗೆ ತರಲು ಮುಂದಾಗಿರುವುದು ಪ್ರಶ್ನಾರ್ಥಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದೇಶದ ಕೃಷಿ, ಕುಡಿಯುವ ನೀರು ಹಾಗೂ ಆರ್ಥಿಕತೆಗೆ ಜೀವನಾಡಿಯಾಗಿರುವ ಪಶ್ಚಿಮ ಘಟ್ಟಗಳನ್ನು ಉಳಿಸಲು ಸರ್ಕಾರವು ಅಣುವಿದ್ಯುತ್ ಯೋಜನೆ ಕೈಬಿಟ್ಟು ಸೌರ ಹಾಗೂ ಪವನಶಕ್ತಿ ಆಧಾರಿತ ಪರ್ಯಾಯ ವಿದ್ಯುತ್ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಪ್ರಮುಖರಾದ ಕೆ.ಇ. ಕಾಂತೇಶ್, ಶೇಖರ್ ಗೌಳೇರ್, ಈ.ವಿಶ್ವಾಸ್, ಮೋಹನ್ಕುಮಾರ್ ಜಾದವ್, ಕುಬೇರಪ್ಪ, ವಕೀಲರಾದ ವಾಗೀಶ್, ಆ.ಮ.ಪ್ರಕಾಶ್, ಮಾಜಿ ಮೇಯರ್ ಲತಾ ಗಣೇಶ್, ಲಕ್ಷ್ಮೀ ಶಂಕರ್ನಾಯಕ್, ರವಿ, ಎಂ.ಜಿ.ಬಾಲು, ಶ್ರೀಕಾಂತ್, ಸೇರಿದಂತೆ ರಾಷ್ಟ್ರಭಕ್ತರ ಬಳಗದ ಪ್ರಮುಖರು ಪದಾಧಿಕಾರಿಗಳು ಉಪಸ್ಥಿತರಿದ್ದರು.