ಶಿವಮೊಗ್ಗ : ಹೈಕೋರ್ಟ್ ಪೀಠದ ಸ್ಥಾಪನೆ ರಾಜಕೀಯ ಬೇಡಿಕೆಯಲ್ಲ, ಅದು ನಮ್ಮ ಹಕ್ಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ ಕಳೆದ ಹಲವು ದಿನಗಳಿಂದ ಶಿವಮೊಗ್ಗ ವಕೀಲರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಲೆನಾಡು ಮತ್ತು ಮಧ್ಯ ಕರ್ನಾಟಕದ ಲಕ್ಷಾಂತರ ಜನರ ನ್ಯಾಯ ಪ್ರಾಪ್ತಿಯ ಹಕ್ಕಿಗಾಗಿ ಪಕ್ಷಾತೀತವಾಗಿ ಒಗ್ಗೂಡಲು ಕರೆ ನೀಡಿದ ಅವರು, ಭೌಗೋಳಿಕ ಸವಾಲುಗಳನ್ನು ಕಡೆಗಣಿಸಿ ಮಂಗಳೂರು ಪೀಠಕ್ಕೆ ಶಿವಮೊಗ್ಗ ಸೇರಿಸುವ ಪ್ರಸ್ತಾವನೆಗೆ ತೀವ್ರ ಅಸಮ್ಮತಿ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎನ್ನುವ ನಮ್ಮ ಆಗ್ರಹ ಕೇವಲ ಒಂದು ಕಚೇರಿಯ ಸ್ಥಾಪನೆಗಾಗಿ ಅಲ್ಲ. ಇದು ನಮ್ಮ ಮಲೆನಾಡು ಮತ್ತು ಸುತ್ತ-ಮುತ್ತಲಿನ ಜಿಲ್ಲೆಗಳ ಜನರ ಸ್ವಾಭಿಮಾನದ ಹಾಗೂ ನ್ಯಾಯದ ಹಕ್ಕಿನ ಹೋರಾಟ. `ನ್ಯಾಯ ಎಲ್ಲರಿಗೂ ಸುಲಭವಾಗಿ ಸಿಗಬೇಕು’ ಎನ್ನುವ ಸಂವಿಧಾನದ ಆಶಯವನ್ನು ಸಾಕಾರಗೊಳಿಸಲು ಶಿವಮೊಗ್ಗದಲ್ಲಿ ಪೀಠ ಸ್ಥಾಪನೆಯಾಗುವುದು ಅತ್ಯಗತ್ಯವಾಗಿದೆ.
ಮಧ್ಯ ಕರ್ನಾಟಕದ ನ್ಯಾಯದ ಆಶಾಕಿರಣ ಶಿವಮೊಗ್ಗ. ಕರ್ನಾಟಕದ ಭೌಗೋಲಿಕ ವಾಸ್ತವವನ್ನು ಉಲ್ಲೇಖಿಸಿ ಮಾತನಾಡಿದ ಸಂಸದರು, ಉತ್ತರ ಕರ್ನಾಟಕದ ಜನರಿಗಾಗಿ ಧಾರವಾಡದಲ್ಲಿ ಮತ್ತು ಕಲ್ಯಾಣ ಕರ್ನಾಟಕಕ್ಕಾಗಿ ಕಲಬುರಗಿಯಲ್ಲಿ ಹೈಕೋರ್ಟ್ ಪೀಠಗಳಿವೆ. ಆದರೆ ಕರ್ನಾಟಕದ ಹೃದಯಭಾಗವಾದ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಸಾರ್ವಜನಿಕರು, ರೈತರು, ಕಾರ್ಮಿಕರು ಹಾಗೂ ತಾಯಂದಿರು ಸಣ್ಣಪುಟ್ಟ ವ್ಯಾಜ್ಯಗಳಿಗೂ 300ಕ್ಕೂ ಹೆಚ್ಚು ಕಿಲೋಮೀಟರ್ ದೂರದ ಬೆಂಗಳೂರಿಗೆ ಅಲೆಯುವ ಪರಿಸ್ಥಿತಿ ಇದೆ. ಶಿವಮೊಗ್ಗವು ಕೇವಲ ಒಂದು ಜಿಲ್ಲೆಯಲ್ಲ; ಇದು ಚಿತ್ರದುರ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಬೆಸೆಯುವ ಮಧ್ಯಬಿಂದು. ಹಾಗಾಗಿ ಈ ಭಾಗದ ಲಕ್ಷಾಂತರ ಜನರ ನ್ಯಾಯದ ಅಹವಾಲು ಸಲ್ಲಿಸಲು ಶಿವಮೊಗ್ಗವೇ ಆಶಾಕಿರಣ ಎಂದರು.
ಮಂಗಳೂರು ಪ್ರಸ್ತಾವನೆಗೆ ತಾರ್ಕಿಕ ವಿರೋಧ
ಮಂಗಳೂರು ಹೈಕೋರ್ಟ್ ಪೀಠದ ಪ್ರಸ್ತಾವನೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳನ್ನು ಸೇರಿಸುವ ಆಲೋಚನೆಯನ್ನು ತಾರ್ಕಿಕವಾಗಿ ತಿರಸ್ಕರಿಸಿದ ಸಂಸದ ರಾಘವೇಂದ್ರ, “ನಮಗೆ ಕರಾವಳಿಯ ಸಹೋದರರ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವಿದೆ. ಆದರೆ ಭೌಗೋಳಿಕ ವಾಸ್ತವವನ್ನು ಅರಿಯದವರು ಮಾತ್ರ ಇಂತಹ ಪ್ರಸ್ತಾವನೆ ಮಂಡಿಸಲು ಸಾಧ್ಯ. ಶಿವಮೊಗ್ಗದಿಂದ ಮಂಗಳೂರಿಗೆ ಪಶ್ಚಿಮ ಘಟ್ಟಗಳ ಮೂಲಕ ಕನಿಷ್ಠ 200 ಕಿ.ಮೀ ಪ್ರಯಾಣಿಸಬೇಕು. ಮಳೆಗಾಲದಲ್ಲಿ ಆಗುಂಬೆ, ಹುಲಿಕಲ್, ಶಿರಾಡಿ ಅಥವಾ ಚಾರ್ಮಡಿ ಘಾಟ್ಗಳಲ್ಲಿ ಭೂಕುಸಿತ ಮತ್ತು ರಸ್ತೆ ಮುಳುಗಡೆಯಂತಹ ಪರಿಸ್ಥಿತಿ ಸಾಮಾನ್ಯ. ಇಂತಹ ಜೀವದ ಹಂಗು ತೊರೆದು ಜನ ಸಾಮಾನ್ಯರು ನ್ಯಾಯ ಪಡೆಯಲು ಹೋಗಬೇಕೇ? ಇದೇ ಪೀಠ ಸ್ಥಾಪನೆಯ ಉದ್ದೇಶವೇ?” ಎಂದು ಪ್ರಶ್ನಿಸಿದ ಅವರು, ಇದೇ ಕಾರಣಕ್ಕಾಗಿ ಶಿವಮೊಗ್ಗ, ಹಾಸನ, ಮಡಿಕೇರಿ ಮತ್ತು ಚಿಕ್ಕಮಗಳೂರು ಬಾರ್ ಅಸೋಸಿಯೇಷನ್ಗಳು ಮಂಗಳೂರು ಪ್ರಸ್ತಾವನೆಯನ್ನು ಒಮ್ಮತದಿಂದ ವಿರೋಧಿಸಿ ಮುಖ್ಯ ನ್ಯಾಯಮೂರ್ತಿಗಳಿಗೆ ಈಗಾಗಲೇ ಮನವಿ ಸಲ್ಲಿಸಿರುವುದನ್ನು ಪ್ರಸ್ತಾಪಿಸಿದರು.
ಧಾರವಾಡ ಪೀಠ ಸ್ಥಾಪನೆಯಾದ ನಂತರ ಅಲ್ಲಿನ ದಾವೆಗಳ ಸಂಖ್ಯೆ 21,000 ದಿಂದ 60,000ಕ್ಕೆ ಏರಿಕೆಯಾಗಿರುವುದನ್ನು ಅಂಕಿ-ಅಂಶಗಳ ಸಮೇತ ವಿವರಿಸಿದ ಸಂಸದರು, ಪೀಠದ ಸ್ಥಾಪನೆಯಿಂದ ಜನಸಾಮಾನ್ಯರಲ್ಲಿ ಕಾನೂನು ಹಕ್ಕುಗಳ ಅರಿವು ಮತ್ತು ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಹೆಚ್ಚುತ್ತದೆ ಎಂಬುದನ್ನು ಸಾಬೀತುಪಡಿಸಿದರು. “ಧಾರವಾಡ ಮತ್ತು ಕಲಬುರಗಿಯ ಜನರಿಗೆ ನ್ಯಾಯ ಸಿಕ್ಕಿರುವಾಗ, ಮಲೆನಾಡಿನ ಜನತೆ ಕೇಳಿದರೆ ಸಿಗದೇ ಇರಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಬೇಡಿಕೆ ಭಾವನಾತ್ಮಕವಲ್ಲ, ಇದು ಸಂಪೂರ್ಣ ನ್ಯಾಯಸಮ್ಮತ,” ಎಂದರು.
ದೆಹಲಿ ಮಟ್ಟದಲ್ಲಿ ಧ್ವನಿಯಾಗುವ ಸಂಕಲ್ಪ
ರಾಜ್ಯ ಸರ್ಕಾರಕ್ಕೆ ಒತ್ತಾಯ : ಜಿಲ್ಲೆಯ ಸಂಸದನಾಗಿ ಕೇಂದ್ರ ಕಾನೂನು ಸಚಿವರೊಂದಿಗೆ ಹಾಗೂ ಭಾರತ ಸರ್ಕಾರದ `ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್’ಮಟ್ಟದಲ್ಲಿ ಈ ಪ್ರಸ್ತಾವನೆಗೆ ಬಲವಾದ ಧ್ವನಿಯಾಗುವ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ ಶಿವಮೊಗ್ಗದಿಂದ ವಕೀಲರ ಮತ್ತು ಪ್ರಮುಖರ ನಿಯೋಗ ದೆಹಲಿಗೆ ಬಂದರೆ ಸಂಬಂಧಪಟ್ಟ ಸಚಿವರ ಭೇಟಿಮಾಡಿಸಲು ಮತ್ತು ಮನವಿ ನೀಡಿ ಕೇಂದ್ರದ ಗಮನಕ್ಕೆ ತರಲು ಬದ್ಧನಾಗಿದ್ದೇನೆ. ಮುಂಚೂಣಿಯಲ್ಲಿ ನಿಂತು ನಿಮ್ಮ ಜೊತೆ ಹೋರಾಟಕ್ಕೆ ಪೂರಕವಾಗಿ ಕೆಲಸ ಮಾಡುತ್ತೇನೆ. ಈ ಹೋರಾಟದಲ್ಲಿ ಸಾರ್ವಜನಿಕರು ಮತ್ತು ವಕೀಲರ ಎಲ್ಲಾ ಹಂತದ ಪ್ರಯತ್ನಗಳಿಗೂ ನನ್ನ ಸಂಪೂರ್ಣ ಬೆಂಬಲವಿದೆ. ನಾವೆಲ್ಲರೂ ಪಕ್ಷಾತೀತವಾಗಿ, ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳಿಲ್ಲದೆ ಒಂದಾಗಿ ಶಿವಮೊಗ್ಗ ಹೈಕೋರ್ಟ್ ಪೀಠ ಸ್ಥಾಪನೆಯಾಗುವವರೆಗೂ ಮುನ್ನಡೆಯೋಣ ಎಂದರು.
ಶಾಸಕ ಡಿ.ಎಸ್.ಅರುಣ್ ಮಾತನಾಡಿ, ಶಿವಮೊಗ್ಗದಲ್ಲಾದ ಬದಲಾವಣೆಗಳು ಅಭಿವೃದ್ಧಿಗಳು ಹಾಗೂ ಸಂಪರ್ಕ ವ್ಯವಸ್ಥೆಗಳು ಎಲ್ಲರಿಗೂ ಗೊತ್ತಿದೆ. ಮಧ್ಯ ಕರ್ನಾಟಕದ ಕೇಂದ್ರಬಿಂದು ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠವಾದರೆ 100 ಕಿ.ಮೀ. ವ್ಯಾಪಿಯಲ್ಲೇ ನಾಲ್ಕೂ ಜಿಲ್ಲೆಗಳು ಬರುವುದರಿಂದ ಮತ್ತು ಇಲ್ಲಿ ಮಾನದಂಡಕ್ಕೆ ಅನುಗುಣವಾಗಿ ಕೇಸುಗಳ ಸಂಖ್ಯೆ ಇರುವುದರಿಂದ ಹೈಕೋರ್ಟ್ಪೀಠ ಇಲ್ಲಿ ಆಗುವುದೇ ಸೂಕ್ತ ಎಂದರು.
ಸಂಸದರ ನೇತೃತ್ವದಲ್ಲಿ ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗೋಣ ಎಂದರು. ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆ.ಬಸಪ್ಪಗೌಡ, ಹೋರಾಟದ ಸಂಪೂರ್ಣ ಚಿತ್ರಣ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ||ಧನಂಜಯ ಸರ್ಜಿ, ಪರಿಷತ್ ಮಾಜಿ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಮಾಲತೇಶ್, ಸಂತೋಷ್ ಬಳ್ಳೇಕೆರೆ, ದಿವಾಕರ್ ಶೆಟ್ಟಿ, ರಾಜೇಶ್ ಕಾಮತ್, ವೀರಭದ್ರಪ್ಪ ಪೂಜಾರಿ, ಸುರೇಖಾ ಮುರಳೀಧರ್, ವಿಶ್ವನಾಥ್, ಮಂಜುನಾಥ್, ವಕೀಲರಾದ ಶ್ರೀಪಾಲ್, ಲಕ್ಷ್ಮೀಕಾಂತ್ ಚಿಮಣೂರು, ವಕೀಲರ ಸಂಘದ ಪದಾಧಿಕಾರಿಗಳು ಸೇರಿದಂತೆ ಮತ್ತಿತರರಿದ್ದರು.