ಶಿವಮೊಗ್ಗ, ಮೇ.೨೫:
ಡಿವಿಎಸ್ ಶಿಕ್ಷಣ ಸಂಸ್ಥೆಯಲ್ಲಿ ೨೦೨೫-೨೬ನೇ ಶೈಕ್ಷಣಿಕ ಸಾಲಿನಲ್ಲಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜುಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸಮಿತಿಯ ಅಧ್ಯಕ್ಷ ಕೆ.ಬಸಪ್ಪಗೌಡ ಅಭಿನಂದಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ೮೩ ವಸಂತಗಳನ್ನು ಪೂರ್ಣಗೊಳಿಸಿದ ತಮ್ಮ ಸಂಸ್ಥೆ ನಿರಂತರವಾಗಿ ಉತ್ತಮ ಫಲಿತಾಂಶವನ್ನು ನೀಡಿ ರಾಜ್ಯದಲ್ಲೇ ನಮ್ಮ ಸಂಸ್ಥೆ ಪ್ರಸಿದ್ದಿಯಾಗಿದೆ ಈ ಸಂಸ್ಥೆಯಲ್ಲಿ ಅಭ್ಯಾಸ ಮಾಡಿ ರಾಜ್ಯ, ರಾಷ್ಟ್ರ ಮತ್ತು ಪ್ರಪಂಚದ ವಿವಿಧ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬೇರೆ ಬೇರೆ ರಂಗಗಳಲ್ಲಿ ಖ್ಯಾತಿ ಪಡೆದಿರುವ ಅನೇಕ ಸುಸಂಸ್ಕೃತ ವ್ಯಕ್ತಿಗಳು ಹಾಗೂ ಮಹಾನ್ ಪ್ರತಿಭೆಗಳನ್ನು ಸಮಾಜಕ್ಕೆ ಕೊಟ್ಟ ಹೆಮ್ಮೆಯ ಸಂಸ್ಥೆ ಇದಾಗಿದೆ ಎಂದರು.
ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಕೀರ್ತಿ ಸಂಸ್ಥೆಯದ್ದಾಗಿದೆ. ಸಂಸ್ಥೆಯ ವಿವಿಧ ಅಂಗಸಂಸ್ಥೆಗಳಲ್ಲಿ ಸುಮಾರು ೬ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಡಿವಿಎಸ್ ಸಂಯುಕ್ತಾ ಪದವಿಪೂರ್ವ ಕಾಲೇಜಿನ ಪ್ರೌಢ ವಿಭಾಗದ ಎಸ್ಎಸ್ಎಲ್ಸಿಯಲ್ಲಿ ಶಾಂಭವಿ ಕೆ.ಪಿ ವಿದ್ಯಾರ್ಥಿನಿ ೬೨೫ಕ್ಕೆ ೬೨೧ ಅಂಕಗಳಿಸಿ ರಾಜ್ಯ ಮಟ್ಟದಲ್ಲಿ ೫ನೇ ರ್ಯಾಂಕ್ ಗಳಿಸಿದ್ದು, ಲಕ್ಷ್ಮೀ ಪಿ.ಎ.ವಿದ್ಯಾರ್ಥಿನಿ ೬೨೫ಕ್ಕೆ ೬೦೨ ಅಂಕವನ್ನು ಪಡೆದಿದ್ದಾರೆ. ಹಾಗೇಯೆ ಹೆಚ್ಚಿನ ವಿದ್ಯಾರ್ಥಿಗಳು ಹೆಚ್ಚು ಅಂಕವನ್ನು ಪಡೆಯುವುದರ ಮೂಲಕ ಶೇ.೯೫.೪೫ ರಷ್ಟು ಫಲಿತಾಂಶ ಬಂದಿದೆ ಎಂದರು.
ವಿನೋಬನಗರದ ಡಿವಿಎಸ್ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.೧೦೦ ರಷ್ಟು ಫಲಿತಾಂಶ ಬಂದಿದೆ. ಡಿವಿಎಸ್ ಪದವಿಪೂರ್ವ ಸ್ವತಂತ್ರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ಐದು, ವಿಜ್ಞಾನ ವಿಭಾಗದಲ್ಲಿ ಒಂದು ಹಾಗೂ ಕಲಾ ವಿಭಾಗದಲ್ಲಿ ಎರಡು ರ್ಯಾಂಕ್ ಬಂದಿದ್ದು, ಒಟ್ಟು ಎಂಟು ರ್ಯಾಂಕ್ ಪಡೆದ ಜಿಲ್ಲೆಯ ಏಕೈಕ ಪದವಿ ಪೂರ್ವ ಕಾಲೇಜು ಆಗಿದೆ ಎಂದರು.
ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಬಂದಿದೆ. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದು ಶಾಲೆಗೂ ಹಾಗೂ ಸಂಸ್ಥೆಗೂ ಕೀರ್ತಿ ತಂದ ವಿದ್ಯಾರ್ಥಿಗಳಿಗೆ, ಶಾಲಾ ಮತ್ತು ಕಾಲೇಜು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಅಭಿನಂದನೆ ತಿಳಿಸಿದರು.
ಸಮಿತಿಯ ಕಾರ್ಯದರ್ಶಿ ಎಸ್.ಪಿ.ದಿನೇಶ್ ಮಾತನಾಡಿ, ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ೨೦೨೪-೨೫ ನೇ ಸಾಲಿನ ಪದವಿಯ ಪರೀಕ್ಷೆಯಲ್ಲಿ ಪೂಜಾ ಎಸ್.ಜಿ ಬಿಎ ಯಲ್ಲಿ ೨ ನೇ ರ್ಯಾಂಕ್, ಗುಣಶ್ರೀ ಹೆಚ್.ಎಂ ಬಿಎಸ್ಸಿಯಲ್ಲಿ ೫ ನೇ ರ್ಯಾಂಕ್. ಸಂಜನಾ.ಆರ್ ಬಿಸಿಎಯಲ್ಲಿ ೫ನೇ ರ್ಯಾಂಕ್, ಯಶಸ್ವಿನಿ.ಜಿ ಬಿಎಸ್ಸಿಯಲ್ಲಿ ೭ ನೇ ರ್ಯಾಂಕ್, ಬಿಂದುಶ್ರೀ. ಆರ್ ಬಿಎಸ್ಸಿಯಲ್ಲಿ ೮ನೇ ರ್ಯಾಂಕ್, ಪುನೀತ್, ಡಿ.ಯು ಬಿಸಿಎಯಲ್ಲಿ ೯ನೇ ರ್ಯಾಂಕ್ ಒಟ್ಟು ಆರು ರ್ಯಾಂಕ್ಗಳನ್ನು ಹಾಗೂ ಮೂರು ಚಿನ್ನ ಪದಕಗಳನ್ನು ಕುವೆಂಪು ವಿವಿ ವ್ಯಾಪ್ತಿಯಲ್ಲಿ ಪಡೆದು ಕಾಲೇಜಿಗೂ ಹಾಗೂ ಸಂಸ್ಥೆಗೂ ಕೀರ್ತಿ ತಂದಿದ್ದಾರೆ. ಇವರೆಲ್ಲರೂ ಅಭಿನಂದನೆ ಸಲ್ಲಿಸಿದರು.
ಹೀಗೆ ಪ್ರತಿವರ್ಷವೂ ಪ್ರೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ತರುತ್ತಿದ್ದು, ಸಮತಿಯು ಅಭಿವೃದ್ದಿ ಪಥದತ್ತ ಸಾಗುತ್ತಿದೆ. ಈ ಸಾಧನೆಗೆ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಪರಿಶ್ರಮವೇ ಕಾರಣ ಎಂದು ಶ್ಲಾಘಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಸತೀಶ್ ಕುಮಾರ್ ಶೆಟ್ಟಿ, ಎನ್.ಆರ್.ನಿತಿನ್, ಡಾ.ಎಂ.ವೆಂಕಟೇಶ್, ಜಿ.ಮಧುಸೂದನ್, ಸಿ.ಕೆ.ಶ್ರೀಧರ್ ಡಾ.ಸವಿತಾ ಎನ್.ರಾವ್, ಉಮೇಶ್, ಡಾ.ಕೆ.ಎಸ್. ಪವಿತ್ರ, ಬಿ.ಗೋಪಿನಾಥ್ ಇನ್ನಿತರರು ಹಾಜರಿದ್ದರು.