ಸೊರಬ: ಪುರಸಭೆ ವ್ಯಾಪ್ತಿಯ ಜೇಡಗೇರಿ ಗ್ರಾಮದ ಬೀರನಕೆರೆಯಲ್ಲಿ ಕೆರೆಬೇಟೆ ಮಂಗಳವಾರ ಭರ್ಜರಿಯಾಗಿ ನಡೆಯಿತು.
ಮಲೆನಾಡಿನ ಅಪ್ಪಟ ಗ್ರಾಮೀಣ ಕ್ರೀಡೆಯಾಗಿರುವ ಕೆರೆಬೇಟೆಯಲ್ಲಿ ಪಾಲ್ಗೊಳ್ಳುವವರು ಏಕ ಕಾಲದಲ್ಲಿ ಕೆರೆಗೆ ಇಳಿದು ಮೀನುಗಳನ್ನು ಹಿಡಿಯುತ್ತಾರೆ. ಇದನ್ನು ನೋಡಲು ಅಕ್ಕಪಕ್ಕದ ಊರುಗಳಿಂದ ನೂರಾರು ಜನ ಆಗಮಿಸಿದ್ದರು. ಮಳೆಗಾಲದ ಸಂದರ್ಭದಲ್ಲಿ ಕೆರೆಗಳಿಗೆ ಮೀನಿನ ಮರಿಗಳನ್ನು ಬಿಡಲಾಗುತ್ತದೆ. ನಂತರ ಬೇಸಿಗೆಯಲ್ಲಿ ಕೆರೆಗಳು ಬತ್ತಿದಾಗ ಕೆರೆಬೇಟೆ ಸಾರಲಾಗುತ್ತದೆ. ಈ ಬಾರಿ ಗ್ರಾಮದ ಮಾರಿಕಾಂಬ ದೇವಸ್ಥಾನ ಕಟ್ಟಡ ಸಹಾಯಾರ್ಥ ಒಂದು ಕೂಣಿಗೆ ೬೦೦ರೂ., ನಿಗದಿ ಮಾಡಲಾಗಿತ್ತು.


ಗ್ರಾಮದಲ್ಲಿ ನಡೆದ ಕೆರೆಬೇಟೆಯಲ್ಲಿ ಕೂಣಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಗ್ರಾಮಸ್ಥರು ಮಾತ್ರವಲ್ಲದೇ ಸುತ್ತಲಿನ ಗ್ರಾಮದವರು ಜಾತಿ, ಮತ ಭೇದವಿಲ್ಲದೆ, ಹಿರಿಯರು, ಕಿರಿಯರೆನ್ನದೆ ಪಾಲ್ಗೊಂಡಿದ್ದರು.
ಕೆಲವರಿಗೆ ಅಂದಾಜು ಐದಾರು ಕೆ.ಜಿ ವರೆಗೆ ಮೀನುಗಳು ಸಿಕ್ಕವು. ಕೂಣಿ ಹಿಡಿದು ಕೆರೆಗೆ ಇಳಿದವರು ಸಂತಸದಿಂದಲೇ ಕೆರೆಬೇಟೆ ಮಾಡಿ ತೆರಳಿದರು. ಬಿದರಿನ ಕೂಣಿಯ ಬದಲಿಗೆ ಕಬ್ಬಿಣದ ಕೂಣಿಗಳನ್ನೂ ಸಹ ಬಳಸಲಾಯಿತು. ಗ್ರಾಮ ಸಮಿತಿಯವರು ಯಾವುದೇ ಗಲಾಟೆ ಮತ್ತು ಗೊಂದಲಗಳಿಗೆ ಅವಕಾಶ ನೀಡದಂತೆ ಅಚ್ಚುಕಟ್ಟಾಗಿ ನಿರ್ವಹಿಸಿದರು.