ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರಾಗಿದ್ದ ಎಸ್. ಕೆ. ನಾರಾಯಣ ಸ್ವಾಮಿ ಅವರ ಅಗಲಿಕೆ ಶಿಕ್ಷಣ, ಸಾಹಿತ್ಯ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಸಂತಾಪ ಸೂಚಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಎಸ್. ಕೆ. ನಾರಾಯಣ ಸ್ವಾಮಿ ಅವರ ಅಗಲಿಕೆಯ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಸೇವಾದಳದ ತಾಲ್ಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ನಾರಾಯಣ ಸ್ವಾಮಿ ಅವರು ಶಾಲೆಗೊಂದು ಸೇವಾದಳ ಪರಿಕಲ್ಪನೆಯಡಿ ಮಕ್ಕಳಲ್ಲಿ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಅನೇಕ ಕಮ್ಮಟಗಳನ್ನು ಸಂಘಟಿಸಲು ಪ್ರೇರಣೆ ನೀಡಿದ್ದರು.

ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ, ಅವುಗಳನ್ನು ನಗರದ ವಿವಿಧ ಭಾಗಗಳಿಗೆ ವಿಸ್ತರಿಸುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದರು. ತಾಂತ್ರಿಕ ತಜ್ಞರಾಗಿದ್ದ ಅವರು ಅನೇಕ ಕಟ್ಟಡಗಳ ವಿನ್ಯಾಸ ಕಾರ್ಯವನ್ನೂ ನಿರ್ವಹಿಸಿದ್ದರು. ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಲ್ಲೂ ಸಕ್ರಿಯರಾಗಿದ್ದರು ಎಂದು ವಿವರಿಸಿದರು.

ಸರ್ಕಾರಿ ಶಾಲೆಗಳಲ್ಲಿ ಒಂದು ತರಗತಿಗೆ ಒಬ್ಬ ಶಿಕ್ಷಕರನ್ನು ಒದಗಿಸಲು ಕಷ್ಟವಾಗುತ್ತಿರುವ ಸಂದರ್ಭದಲ್ಲಿ, ನಮ್ಮ ಸಂಸ್ಥೆಗಳಲ್ಲಿ ಪ್ರತಿ ತರಗತಿಗೂ ಇಬ್ಬರು ಶಿಕ್ಷಕರನ್ನು ನೇಮಿಸಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಅವರ ಶಿಕ್ಷಣದ ಬದ್ಧತೆಯನ್ನು ಸ್ಮರಿಸಿದರು.
ಕಸಾಪ ಜಿಲ್ಲಾ ಸಮಿತಿಯ ಪ್ರತಿಮಾ ಡಾಕಪ್ಪಗೌಡ ಮಾತನಾಡಿ, ತಮ್ಮ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದ ಅವರು, ಪೋಷಕರೊಂದಿಗೆ ಸಹ ಆತ್ಮೀಯ ಹಾಗೂ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದರು ಎಂದು ನೆನಪಿಸಿಕೊಂಡರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಮಹಾದೇವಿ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರ ಸಂಸ್ಥೆಗಳಿಗೆ ಭೇಟಿ ನೀಡುವ ಅವಕಾಶ ದೊರೆತಿತ್ತು. ಸಂಸ್ಥೆಯ ಆಡಳಿತದಲ್ಲಿ ಅವರು ಎಲ್ಲರೊಂದಿಗೆ ಸಮಾನತೆಯಿಂದ ನಡೆದುಕೊಳ್ಳುತ್ತಿದ್ದ ರೀತಿಯು ವಿಶೇಷವಾಗಿತ್ತು ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ ಮಾತನಾಡಿ, ಶಿಕ್ಷಣ ಸಂಸ್ಥೆಗಳನ್ನು ನಗರದ ವಿವಿಧ ಬಡಾವಣೆಗಳಿಗೆ ವಿಸ್ತರಿಸುವ ಮೂಲಕ ಶಿಕ್ಷಣವನ್ನು ಜನಸಾಮಾನ್ಯರಿಗೂ ತಲುಪಿಸುವ ಕಾರ್ಯವನ್ನು ಅವರು ಮಾಡಿದರು ಎಂದು ತಿಳಿಸಿದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ಎಂ. ಎಂ. ಸ್ವಾಮಿ ಮಾತನಾಡಿ, ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪ್ರಾರಂಭಿಕ ಹಂತದಲ್ಲೇ ಪರಿಚಯಿಸಿ ಉತ್ತಮ ಫಲಿತಾಂಶಕ್ಕಾಗಿ ಅನೇಕ ಹೊಸ ಪ್ರಯೋಗಗಳನ್ನು ಕೈಗೊಂಡಿದ್ದರು ಎಂದು ಹೇಳಿದರು.
ಸಭೆಯಲ್ಲಿ ಒಂದು ನಿಮಿಷ ಮೌನಾಚರಿಸಿ ಎಸ್. ಕೆ. ನಾರಾಯಣ ಸ್ವಾಮಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಎಂ. ನವೀನ್ ಕುಮಾರ್, ಸೋಮಿನಕಟ್ಟಿ, ರಾಮಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.