ಶಿವಮೊಗ್ಗ, ಮೇ.18:
ಕಳೆದ ಮೂರು ತಿಂಗಳಿನಿಂದ ಅಂದಾಜು ಲೆಕ್ಕಾಚಾರ ಎಂಬಂತೆ ಶಿವಮೊಗ್ಗ ನಗರದ ತುಂಬೆಲ್ಲಾ ಆಯಾ ಕಾರ್ಯಕ್ರಮಗಳಿಗೆ ಅದರಲ್ಲೂ ಹುಟ್ಟಿದ ಹಬ್ಬ, ಮತ್ತಿತರ ನೆಪದಲ್ಲಿ ಪ್ಲೆಕ್ಸಿಗಳ ಹಾವಳಿ ಮಿತಿಮೀರಿದೆ.


ಈ ಪ್ಲೆಕ್ಸಿಗಳ ಹಾಕಲು ಪಾಲಿಕೆ ಅವಕಾಶ ನೀಡಿದ್ದು ಸರಿಯಷ್ಟೇ. ಆದರೆ ಅದಕ್ಕೆ ಪೂರಕವಾದಂತೆ ಪಾಲಿಕೆಯ ಆರೋಗ್ಯ ಇಲಾಖೆ ಅದರ ದಾಖಲೆಗಳನ್ನು ಸಂಗ್ರಹಿಸಿ ಅವರಿಗೆ ಅನುಮತಿ ನೀಡಲು ತೆರಿಗೆಯನ್ನು ಕಟ್ಟಿಸಿಕೊಳ್ಳಬೇಕು. ಹೀಗೆ ತೆರಿಗೆ ಕಟ್ಟಿಸಿಕೊಂಡ ಪ್ಲೆಕ್ಸಿಗಳ ಮೇಲೆ ಪಾಲಿಕೆಯ ಹೆಸರು ಹಾಗೂ ನಂಬರ್ ಹಾಕುತ್ತಾರೆ.

ಆದರೆ ಈಗ ಹಾಕಿರುವ ಪ್ಲೆಕ್ಸಿಗಳಲ್ಲಿ ಯಾವುದೇ ನಂಬರ್ ಇಲ್ಲ, ದುರಂತವೆಂದರೆ ಪ್ಲೆಕ್ಸಿ ಹಾಕಿದವರು ಯಾರು ಎಂಬುದು ನಗರ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ಲ ಎಂಬಂತೆ ನಾಟಕ ಮಾಡುತ್ತಿದ್ದಾರೆ.

ಆರೋಗ್ಯ ಇಲಾಖೆ ಅಥವಾ ನಗರಪಾಲಿಕೆ ಜೀವಂತವಾಗಿದೆಯೇ ಅಥವಾ ಮಲಗಿಕೊಂಡಿದೆಯೇ ಎಂಬುದು ಸಾರ್ವಜನಿಕರ ಪ್ರಶ್ನೆ. ಊರ ತುಂಬಾ ಪ್ಲೆಕ್ಸಿಗಳನ್ಹಾಕಿಕೊಂಡು ಪ್ರಚಾರ ಪಡೆಯುವುದು ಸಾರ್ವಜನಿಕರ ವೈಯಕ್ತಿಕ ವಿಚಾರ ಎಂಬುದೇನೋ ಸತ್ಯ. ಆದರೆ ಅದರ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಾದ ಪಾಲಿಕೆಯ ಆದಾಯ ಸೃಷ್ಟಿಯ ಇಂತಹ ವಿಷಯದಲ್ಲಿ ಅತ್ಯಂತ ನಿರ್ಲಕ್ಷ ವಹಿಸಿರುವ ಸಂಗತಿ ಆದರೂ ಏಕೆ?
ಎಲ್ಲಿ ನೋಡಿದರಲ್ಲಿ ಫ್ಲೆಕ್ಸಿಗಳ ಹಾವಳಿ. ದುರಂತವೆಂದರೆ ಹೇಳುವ ವಿಷಯ ಹಾಗೂ ಗೌರವಿಸುವ ವ್ಯಕ್ತಿಯನ್ನು ಈ ಫ್ಲೆಕ್ಸಿಗಳಲ್ಲಿ ಮರೆತು ಅವರನ್ನು ಸಣ್ಣದಾಗಿ ತೋರಿಸಿ ಪ್ಲೆಕ್ಸಿ ಹಣ ನೀಡಿದವರ ಫೋಟೋಗಳನ್ನು ದೊಡ್ಡದಾಗಿ ಕೆಲವೆಡೆ ಲಕ್ಷಣ ಎನ್ನುವಂತೆ ಮಾಡುವ ಫೋಟೋಗಳನ್ನು ಹಾಕಿಕೊಂಡು ಬರುವ ಮಹಾನಗರ ಪಾಲಿಕೆ ಚುನಾವಣೆಯ ತಯಾರಿ ನಡೆಸುತ್ತಿದ್ದಾರೆಯೇ ಎಂಬ ಅನುಮಾನ ಕಂಡುಬರುತ್ತದೆ. ಈ ಚಿತ್ರ ನೋಡಿ ಜನ ಓಟಾಕುತ್ತಾರೆ ಎಂದುಕೊಂಡಿರುವುದು ದುರಂತದ ಸಂಗತಿ.

ಶಿವಮೊಗ್ಗ ನಗರದಲ್ಲಿ ಯಾವುದೇ ಸಂಧಿ ಗೊಂದಿಗಳನ್ನು ಬಿಡದೆ ವಿಶೇಷವಾಗಿ ಸರ್ಕಲ್ ಗಳಲ್ಲಿ ಈ ರೀತಿ ಫ್ಲೆಕ್ಷಿಗಳನ್ನು ಹಾಕುವುದು ವಾಹನ ಸಂಚಾರ ಮಾಡುವ ವ್ಯಕ್ತಿಗಳಿಗೆ ತೊಂದರೆ ನೀಡುವುದಿಲ್ಲವೇ? ಎರಡು ರಸ್ತೆಗಳ ಮಧ್ಯೆದ ಡಿವೈಡರ್ ಗಳ ನಡುವೆ ನೆಟ್ಟಿರುವ ವಿದ್ಯುತ್ ಕಂಬಗಳು ಫ್ಲೆಕ್ಸಿ ಹಾಕಲೆಂದೇ ಮಾಡಿರುವ ಸಾಧನವೇ ಎಂಬುದು ಪ್ರಶ್ನೆ.
ಪಾಲಿಕೆಯ ಅಧಿಕಾರಿಗಳು ಈಗಲಾದರೂ ತಮ್ಮಲ್ಲಿ ಲಭ್ಯವಿರುವ ಮೂಲಕ ಕನಿಷ್ಠ ಮೂರು ತಿಂಗಳ ಅವಧಿಯಲ್ಲಿ ಅನುಮತಿ ರಹಿತವಾಗಿ ಪ್ಲೆಕ್ಸಿ ಹಾಕಿರುವವರ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಅದರಲ್ಲಿರುವ ಮುಖ್ಯ ವ್ಯಕ್ತಿಗೆ ಅಥವಾ ಪ್ಲೆಕ್ಸಿಗಳ ಹಾಕಿಸಿಕೊಂಡವರಿಗೆ ನೋಟಿಸ್ ನೀಡಿ ತೆರಿಗೆ ಹಣವನ್ನು ವಸೂಲಿ ಮಾಡಬೇಕು ಎಂಬುದು ಪಕ್ಷಾತೀತವಾಗಿ ಎಲ್ಲರ ಒತ್ತಾಯ.