ಶಿವಮೊಗ್ಗ: ಮೇ 2026 : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರು ಕೈಗೊಂಡ ವಿಶೇಷ ಶ್ರಮದ ಫಲವಾಗಿ, ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆ (NIOS-National Institute Open Schooling) ಅಡಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ಸುಮಾರು 12,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈಗ ಪಠ್ಯಪುಸ್ತಕಗಳು ಹಾಗೂ ಅಧ್ಯಯನ ಸಾಮಗ್ರಿಗಳು ಲಭ್ಯವಾಗಿವೆ. ಈ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಹಿತರಕ್ಷಣೆ ಮಾಡುವಲ್ಲಿ ಸಂಸದರು ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ.
2025ರ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಜೀ ಅವರನ್ನು ಭೇಟಿ ಮಾಡಿ, ಕರ್ನಾಟಕದ NIOS ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯತೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದರು. ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪಠ್ಯಪುಸ್ತಕಗಳನ್ನು ಒದಗಿಸುವುದು ಅವರ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಅತ್ಯಗತ್ಯ ಎಂಬುದನ್ನು ಸಚಿವರ ಗಮನಕ್ಕೆ ತಂದಿದ್ದರು. ಸಂಸದರ ಮನವಿಯನ್ನು ಅತ್ಯಂತ ಸಕಾರಾತ್ಮಕವಾಗಿ ಸ್ವೀಕರಿಸಿದ್ದ ಸಚಿವರು, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ಸಂಸದರ ಕೋರಿಕೆಗೆ ಸ್ಪಂದಿಸಿದ ಕೇಂದ್ರ ಶಿಕ್ಷಣ ಸಚಿವಾಲಯವು ಪ್ರಕ್ರಿಯೆಯನ್ನು ಚುರುಕುಗೊಳಿಸಿತ್ತು. ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವರಾದ ಶ್ರೀ ಜಯಂತ್ ಚೌಧರಿ ಜೀ ಅವರು ಸಂಸದರಿಗೆ ಪತ್ರ ಬರೆದು ಈ ಕುರಿತು ಮಾಹಿತಿ ನೀಡಿದ್ದು, ಫೆಬ್ರವರಿ 13 ರಿಂದ ಮಾರ್ಚ್ 9, 2026ರ ಅವಧಿಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಸ್ಪೀಡ್ ಪೋಸ್ಟ್ ಮೂಲಕ ಪಠ್ಯಪುಸ್ತಕಗಳನ್ನು ಯಶಸ್ವಿಯಾಗಿ ತಲುಪಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಇನ್ನು ಮುಂದೆ ಪಠ್ಯಪುಸ್ತಕಗಳ ವಿತರಣೆಯಲ್ಲಿ ಯಾವುದೇ ವಿಳಂಬವಾಗದಂತೆ ಮುನ್ನೆಚ್ಚರಿಕೆ ವಹಿಸಲು NIOS ಸಂಸ್ಥೆಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಪತ್ರದಲ್ಲಿ ಖಚಿತಪಡಿಸಿದ್ದಾರೆ.
ಪಠ್ಯಪುಸ್ತಕಗಳ ಪೂರೈಕೆಯಿಂದಾಗಿ ರಾಜ್ಯದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಮತ್ತು ದಿವ್ಯಾಂಗ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ಈ ಕ್ರಮವು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ವೃದ್ಧಿಸುವುದಲ್ಲದೆ, ಅವರು ಮುಂಬರುವ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ನೆರವಾಗಲಿದೆ.
ತಮ್ಮ ಮನವಿಗೆ ತಕ್ಷಣ ಸ್ಪಂದಿಸಿ, ಸಾವಿರಾರು ವಿದ್ಯಾರ್ಥಿಗಳ ಹಿತಕಾಯ್ದ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಜೀ ಮತ್ತು ರಾಜ್ಯ ಸಚಿವರಾದ ಶ್ರೀ ಜಯಂತ್ ಚೌಧರಿ ಅವರಿಗೆ ಸಂಸದ ಬಿ.ವೈ. ರಾಘವೇಂದ್ರ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
“ಕೇಂದ್ರ ಸರ್ಕಾರದ “ಸಾರ್ವತ್ರಿಕ ಮತ್ತು ಅಂತರ್ಗತ ಶಿಕ್ಷಣ” (Universal and Inclusive Education) ಎಂಬ ಆಶಯದಂತೆ, ನಮ್ಮ ನಾಡಿನ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಮತ್ತು ಸಂಪನ್ಮೂಲಗಳು ಸಿಗುವಂತಾಗಬೇಕು ಎಂಬುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ತೋರಿರುವ ಕಾಳಜಿ ಶ್ಲಾಘನೀಯ,” ಎಂದು ಸಂಸದರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.