ಶಿವಮೊಗ್ಗ : ಹಿಜಾಬ್ಗೆ ಅವಕಾಶ ಕೊಟ್ಟು, ಕೇಸರಿ ಶಾಲು ಧರಿಸುವುದಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲದೆ, ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲ ಇಡೀ ರಾಜ್ಯವೇ ಮುಂದೆ ಕೇಸರಿಮಯವಾಗಿ ಕಾಂಗ್ರೆಸ್ ನಿರ್ನಾಮವಾಗುವುದು ಖಚಿತ ಎಂದು ಎಚ್ಚರಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಇದು ಕಾಂಗ್ರೆಸ್ ಸರ್ಕಾರದ ಕೊನೆಯ ಆದೇಶವಾಗಲಿದೆ. ಮುಸ್ಲಿಂರನ್ನು ಒಲೈಸುವುದಕ್ಕೆ ಕೋರ್ಟ್ ತೀರ್ಪನ್ನೇ ಉಲ್ಲಂಘಿಸಲಾಗಿದೆ. ಇದಕ್ಕೆ ತಕ್ಕ ಪಾಠವಾಗಲಿದೆ ಎಂದು ವಾಗ್ದಾಳಿ ನಡೆಸಿದರು.
ಸನಾತನ ಹಿಂದೂ ಧರ್ಮದ ಕುರಿತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಸ್ಟ್ಯಾಲಿನ್ ಪುತ್ರ ಉದಯಾನಿಧಿ ಸ್ಟ್ಯಾಲಿನ್ ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಕೆ.ಎಸ್.ಈಶ್ವರಪ್ಪ, ಮೂರ್ಖನ ಮಾತಿಗೆ ಯಾವುದೇ ಬೆಲೆ ಇಲ್ಲ ಎಂದು ಕಿಡಿಕಾರಿದರು.
ಸನಾತನ ಹಿಂದೂ ಧರ್ಮವನ್ನು ನಿರ್ನಾಮ ಮಾಡಬೇಕೆಂದು ಹೇಳಿರುವ ಉದಯಾನಿಧಿ ಸ್ಟ್ಯಾಲಿನ್, ಮೊದಲು ತಮ್ಮಮನೆಯ ಅಡುಗೆ ಮನೆಯಿಂದಲೇ ಅದನ್ನು ಶುರು ಮಾಡಲಿ ಎಂದು ಸವಾಲು ಹಾಕಿದರು.

ವಿಶ್ವದಲ್ಲಿ ಆದಿಯೂ ಇಲ್ಲದ ಮತ್ತು ಅಂತ್ಯವೂ ಇಲ್ಲದ ಧರ್ಮವೆಂದರೆ ಅದು ಸನಾತನ ಹಿಂದೂ ಧರ್ಮ. ಅದನ್ನು ನಾಶ ಮಾಡುವುದು ಯಾರಿಂದಲೂ ಸಾಧ್ಯವಿಲ್ಲ. ದೇಶಕ್ಕೆ ದಂಡೆತ್ತಿ ಬಂದು ೮೦೦ ವರ್ಷಕ್ಕೂ ಹೆಚ್ಚು ಕಾಲ ಭಾರತವನ್ನಾಳಿದ ಮೊಹ್ಮದ್ ಘಜ್ನಿ, ಘೋರಿ, ಬಾಬರ್, ಔರಂಗಜೇಬ್ನಂತವರಿಯಲೇ ಹಿಂದೂ ಧರ್ಮವನ್ನು ಏನೂ ಮಾಡಲಾಗಿಲ್ಲ. ಇನ್ನು ಈ ಉದಯನಿಧಿ ಸ್ಟಾಲಿನ್ನಿಂದ ಹಿಂದೂ ಧರ್ಮವನ್ನು ನಾಶ ಮಾಡಲು ಸಾಧ್ಯವೇ ? ಇದೇ ಕಾರಣಕ್ಕಾಗಿಯೇ ತಮಿಳುನಾಡಿನಲ್ಲಿ ಇವರ ಸರ್ಕಾರ ಪತನಗೊಂಡು ಮುಖ್ಯಮಂತ್ರಿ ಸ್ಥಾನ, ಮಂತ್ರಿ ಸ್ಥಾನವನ್ನು ಕಳೆದುಕೊಂಡಿರುವುದು ಎಂದು ಅಕ್ರೋಶ ವ್ಯಕ್ತಪಡಿಸಿದರು.

ಅವರ ಈ ಸಂಕಷ್ಟದಿಂದ ಕುಟುಂಬವನ್ನು ಕಾಪಾಡಲಿ ಎಂದು ಉದಯಾನಿಧಿ ಅವರ ತಾಯಿ ಶ್ರೀಮತಿ ದುರ್ಗಾ ಅವರು ಕೊಲ್ಲೂರು ಶ್ರೀ ಮೂಕಾಂಬಿಕೆಯಲ್ಲಿ ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಕ್ಷುಲಕ ರಾಜಕೀಯ ಕಾರಣಕ್ಕಾಗಿ ಇವರು ಏನೇ ಹೇಳಿಕೆ ಕೊಡಲಿ, ಆದರೆ ಆ ತಾಯಿ ಹಿಂದೂ ಧರ್ಮದ ಮೇಲೆ ತನ್ನ ಅಪಾರ ನಿಷ್ಠ ಹೊಂದಿರುವುದೇ ಸನಾತನ ಹಿಂದೂ ಧರ್ಮದ ಶಕ್ತಿಯನ್ನು ತೋರಿಸುತ್ತದೆ ಮತ್ತು ಮತಾಂತರವಾದ ಎಲ್ಲರ ಮನದಲ್ಲೂ ಸನಾತನ ಹಿಂದೂ ಸಂಸ್ಕೃತಿ, ಆಚರಣೆಗಳು, ವಿಚಾರಗಳು ಇನ್ನೂ ಹಾಗೆಯೇ ಉಳಿದಿವೆ ಎಂದು ತಿರುಗೇಟು ನೀಡಿದರು.