‘ಜಮ್ಮು ಕಾಶ್ಮೀರದ ಈ ಅಧ್ಯಯನ ಪ್ರವಾಸದ ಆದ್ಯತೆಯ ಕಾನೂನು ಸುವ್ಯವಸ್ಥೆ, ಧಾರ್ಮಿಕ ಕ್ಷೇತ್ರಗಳ ಸುರಕ್ಷತೆ ಮತ್ತು ವಿಪತ್ತು ನಿರ್ವಹಣೆಯ ಸಿದ್ಧತೆಯ ವಿಷಯಗಳು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೂ ಕೂಡ ಅತ್ಯಂತ ಪ್ರಸ್ತುತವಾಗಿದೆ’ : ಸಂಸದ ಬಿ.ವೈ.ರಾಘವೇಂದ್ರ
ಶ್ರೀನಗರ, 14 ಮೇ 2026: ಗೃಹ ವ್ಯವಹಾರಗಳ ಕುರಿತಾದ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ (DRSC) ಪ್ರಸ್ತುತ ಜಮ್ಮು, ಶ್ರೀನಗರ, ಗುಲ್ಮಾರ್ಗ್, ಸೋನ್ಮಾರ್ಗ್ ಮತ್ತು ಕಾರ್ಗಿಲ್ಗೆ ಮೇ 10 ರಿಂದ 15, 2026 ರವರೆಗೆ ಅಧ್ಯಯನ ಭೇಟಿ ನಡೆಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಆಂತರಿಕ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ವಿಪತ್ತು ನಿರ್ವಹಣಾ ಸಿದ್ಧತೆಯ ಬಗ್ಗೆ ಅಧ್ಯಯನ ನಡೆಸಲು ಸಮಿತಿಯ ಅಧ್ಯಕ್ಷ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ನೇತೃತ್ವದಲ್ಲಿ ಈ ಉನ್ನತ ಮಟ್ಟದ ಸಮಿತಿ ಭೇಟಿ ನೀಡಿದೆ. ಸಮಿತಿಯ ಸದಸ್ಯರಾಗಿರುವ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರೂ ಕೂಡ ಅಧ್ಯಯನ ಪ್ರವಾಸದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಕತ್ರಾದಲ್ಲಿರುವ ಮಾತಾ ವೈಷ್ಣೋದೇವಿ ದೇವಾಲಯ ಸಂಕೀರ್ಣದಲ್ಲಿ ವಿಪತ್ತು ಸನ್ನದ್ಧತೆಯ ಮೌಲ್ಯಮಾಪನ, ಗುಲ್ಮಾರ್ಗ್ ಪ್ರವಾಸಿ ತಾಣದಲ್ಲಿನ ಭದ್ರತಾ ಪರಿಸ್ಥಿತಿಯ ವಿಮರ್ಶೆ ಮತ್ತು ಸೋನ್ಮಾರ್ಗ್ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಚರ್ಚೆಗಳು ಸಮಿತಿಯ ಕಾರ್ಯಸೂಚಿಯ ಭಾಗವಾಗಿದೆ. ಶ್ರೀನಗರದಲ್ಲಿ, ಸಮಿತಿಯು ಗೃಹ ಸಚಿವಾಲಯ ಮತ್ತು ಕೇಂದ್ರಾಡಳಿತದ ಹಿರಿಯ ಪ್ರತಿನಿಧಿಗಳನ್ನು ಭೇಟಿ ಮಾಡಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆಡಳಿತ, ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣದ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿದೆ. ಪ್ರವಾಸದ ಸಂದರ್ಭದಲ್ಲಿ, ಸಂಸದ ರಾಘವೇಂದ್ರ ಸೇರಿದಂತೆ ಸಮಿತಿಯ ಸದಸ್ಯರು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿ ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆ, ವಿಪತ್ತು ನಿರ್ವಹಣೆ ಮತ್ತು ಕಲ್ಯಾಣ ಉಪಕ್ರಮಗಳ ಕುರಿತು ವಿಸ್ತೃತ ಚರ್ಚೆ ನಡೆಸಿದರು. ಈ ಭೇಟಿಯು ಕಾರ್ಗಿಲ್ನಲ್ಲಿ ಕೊನೆಗೊಳ್ಳಲಿದ್ದು, ಅಲ್ಲಿ ಸಮಿತಿಯು ಗಡಿ ಭದ್ರತಾ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದು, ಭಾರತೀಯ ಸೇನೆಯ ಪ್ರತಿನಿಧಿಗಳೊಂದಿಗೆ ನೇರ ಸಂವಾದ ನಡೆಸಲಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, “ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಮತ್ತು ಗೌರವಾನ್ವಿತ ಗೃಹ ಸಚಿವ ಶ್ರೀ ಅಮಿತ್ ಶಾ ಜಿ ಅವರ ನೇತೃತ್ವದಲ್ಲಿ 370ನೇ ವಿಧಿಯನ್ನು ಐತಿಹಾಸಿಕ ರದ್ದತಿ ನಂತರ, ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ, ಪ್ರವಾಸೋದ್ಯಮ, ಸಾರ್ವಜನಿಕ ಕಲ್ಯಾಣ ಮತ್ತು ರಾಷ್ಟ್ರೀಯ ಏಕೀಕರಣದಲ್ಲಿ ಪರಿವರ್ತನೆಯ ಮತ್ತು ಸಕಾರಾತ್ಮಕ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ಈ ಅಧ್ಯಯನ ಭೇಟಿಯು ಮಾತಾ ವೈಷ್ಣೋದೇವಿಯಂತಹ ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಆಂತರಿಕ ಭದ್ರತೆ, ಗಡಿ ನಿರ್ವಹಣೆ ಮತ್ತು ವಿಪತ್ತು ಸನ್ನದ್ಧತೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ನೇರವಾಗಿ ತಿಳಿದುಕೊಳ್ಳುವ ಅವಕಾಶವನ್ನು ನೀಡಿದೆ.”
“ಈ ಭೇಟಿಯ ಸಮಯದಲ್ಲಿ ಮಾತಾ ವೈಷ್ಣೋದೇವಿಯ ದರ್ಶನ ಪಡೆಯುವ ಭಾಗ್ಯ ನಮ್ಮದಾಗಿದೆ. ಭಕ್ತರು, ಪ್ರವಾಸಿಗರು ಮತ್ತು ನಾಗರಿಕರ ಸುರಕ್ಷತೆ ಮತ್ತು ಅನುಕೂಲತೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ. ಈ ಭೇಟಿಯ ಸಮಯದಲ್ಲಿ ಸಂಗ್ರಹಿಸಿದ ವಿಷಯಗಳು ಮತ್ತು ಒಳನೋಟಗಳು ಸಂಸತ್ತಿನ ಮುಂದೆ ಅರ್ಥಪೂರ್ಣ ಶಿಫಾರಸುಗಳನ್ನು ಮಾಡುವಲ್ಲಿ ಸಮಿತಿಗೆ ನೆರವಾಗಲಿದೆ. ಈ ವಿಷಯಗಳು, ಅದರಲ್ಲೂ ವಿಶೇಷವಾಗಿ ವಿಪತ್ತು ನಿರ್ವಹಣೆಯ ಸಿದ್ಧತೆ, ಧಾರ್ಮಿಕ ಪ್ರವಾಸೋದ್ಯಮ ನಿರ್ವಹಣೆ, ಕಾನೂನು ಸುವವಸ್ಥೆ, ನಾಗರಿಕರ ಸುರಕ್ಷತೆ ಮೊದಲಾದವುಗಳು ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ನೆಲೆಯಾಗಿರುವ ಶಿವಮೊಗ್ಗ ಕ್ಷೇತ್ರಕ್ಕೂ ಕೂಡ ತುಂಬಾ ಪ್ರಸ್ತುತವಾಗಿವೆ” ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ.