ಬಳ್ಳಾರಿ : ಪ್ರಭುತ್ವವನ್ನು ಪ್ರಶ್ನಿಸುವ ಕಾವ್ಯವನ್ನು ನಿರ್ಧಿಷ್ಟ ಪಂಥ ದ ಗೂಟಕ್ಕೆ ಕಟ್ಟಿ ದಂಡಿಸುವ ಸಾಂಸ್ಕೃತಿಕ ರಾಜಕಾರಣದ ಕಾಲಘಟ್ಟವನ್ನು ಇಂದು ನಾವು ಎದುರುಗೊಳ್ಳಬೇಕಾಗಿದೆ ಎಂದು ಕವಿ, ಪತ್ರಕರ್ತ ಎನ್. ರವಿಕುಮಾರ್ ( ಟೆಲೆಕ್ಸ್) ಹೇಳಿದರು.
ಬಳ್ಳಾರಿಯಲ್ಲಿ ನಡೆದ ಎರಡು ದಿನಗಳ ” ೨೦೨೫ ರ ಸಂಗಂ ಸಾಹಿತ್ಯ ಪ್ರಶಸ್ತಿ ಪುರಸ್ಕಾರ” ಸಮಾರಂಭದ ” ಕನ್ನಡ – ತೆಲುಗು ನುಡಿ ಕಾವ್ಯ ಸಂವಾದ ” ವಿಚಾರ ಸಂಕಿರಣದಲ್ಲಿ ಮಾತಾಡುತ್ತಿದ್ದ ಅವರು, ಇಂದು ಪ್ರಭುತ್ವ ಕವಿತೆಗೆ ಹೆದರಿ ಕವಿಯನ್ನು ಜೈಲಿಗೆ ನೂಕುವ,ಕವಿತೆಯನ್ನು ಕೈದು ಮಾಡುವ ಸಂದರ್ಭವನ್ನು ನೋಡುತ್ತಿದ್ದೇವೆ. ಕವಿತೆ ಅನ್ನೋದು ಕೇವಲ ಮಹಲುಗಳಲ್ಲಿನ ಸಖೀ ಗೀತೆಗಳಲ್ಲ, ಅವು ಸಮಾಜದ ಎಲ್ಲ ಜನರ, ಎಲ್ಲ ಬಗೆಯ ತಲ್ಲಣಗಳನ್ನು, ಅಭಿವ್ಯಕ್ತಿಸುವ ಸಶಕ್ತ ಮಾಧ್ಯಮವಾಗಿದೆ ಎಂದರು.

ಅಧಿಕಾರ ಚುಕ್ಕಾಣಿ ಹಿಡಿದವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಲೇ ಜಾತಿವಾದ, ಮತೀಯವಾದ ಅನುಸರಿಸುತ್ತಾ ಜನರನ್ನು ಬಗೆದು ಬೇರ್ಪಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಸಾಹಿತ್ಯ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಇದೊಂದು ಬಗೆಯ ನಿರ್ಧಿಷ್ಟ ರಾಜಕೀಯ ಧ್ರುವೀಕರಣವಾಗಿದೆ. ಇಂತಹ ಜನವಿರೋಧಿತನಗಳನ್ನು ವಿರೋಧಿಸಿ ಕಾವ್ಯ ಖಡ್ಗದಂತೆ ಬಳಕೆಯಾಗಬೇಕಿದೆ. ಸಾಂಸ್ಕೃತಿಕ ಚಳವಳಿ ಅನಿವಾರ್ಯತೆ ಇದೆ ಎಂದರು.

ಈ ಸಮಾಜದ ನೋವು,ತಲ್ಲಣಗಳನ್ನು ತನ್ನದೇ ಎಂದು ಭಾವಿಸಿ ಬರೆದಾಗ ಕಾವ್ಯ ಸಾರ್ಥಕಗೊಳ್ಳುತ್ತದೆ , ಕವಿತೆ ಬಿಡುಗಡೆಯ ಹಾದಿಯೂ ಆಗಿದೆ ಎಂದ ಕವಿ ಎನ್ ರವಿಕುಮಾರ್, ತಾನು ಬದುಕಿದ ಕಾಲಘಟ್ಟದಲ್ಲಿ ತನ್ನ ಸುತ್ತಲಿನ ಜನಸಮುದಾಯಗಳ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಬದುಕಿನ ಕಷ್ಟ,ಕಳವಳಗಳನ್ನು ಜಗತ್ತಿಗೆ ಸಾರಲು ಕವಿತೆ ಮಹತ್ವದ ಪಾತ್ರ ವಹಿಸಬಲ್ಲದು ಎಂದರು.
ಡಾ ಚಿದಾನಂದ ಸಾಲಿ ಸಂವಾದದ ಸಮನ್ವಯ ನಡೆಸಿದರೆ, ಕನ್ನಡ ಕವಿಗಳಾದ ನಾಗಣ್ಣ ಕೀಲಾರ, ಭುವನ ಹಿರೇಮಠ, ತೆಲುಗು ಕವಿಗಳಾದ ಕಲ್ಯಾಣಿ ಕುಂಜ, ತಗುಲ್ಲ ಗೋಪಾಲ ಭಾಗವಹಿಸಿದ್ದರು.