ಶಿವಮೊಗ್ಗ : ಮಾದಕ ವಸ್ತುಗಳ ಚಟದಿಂದ ದೂರವಿರಿ ಎಂದು ಜಿ.ಪಂ. ಸಿಇಓ ಎನ್.ಹೇಮಂತ್ಕುಮಾರ್ ಹೇಳಿದರು.
ಅವರು ಇಂದು ಕುವೆಂಪು ವಿವಿ, ಜಿಲ್ಲಾ ಪೊಲೀಸ್ ಇಲಾಖೆ, ಪೀಪಲ್ಸ್ ಲಾಯರ್ಸ್ ಗೀಲ್ಡ್, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜ್ ಇವರ ಸಂಯುಕ್ತಾಶ್ರಯದಲ್ಲಿ ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವ ಜನಾಂಗ ಬಹುಬೇಗ ಮಾದಕ ವಸ್ತುಗಳಿಗೆ ದಾಸರಾಗಿಬಿಡುತ್ತಾರೆ. ಮಾದಕ ವಸ್ತು ಸೇವನೆ ತುಂಬಾ ಅಪಾಯಕಾರಿಯಾಗಿದೆ. ಕೇವಲ ಗಾಂಜಾ ಮಾತ್ರವಲ್ಲದೆ, ಸಿಗರೇಟು, ಮದ್ಯ ಇತರೆ ಮಾದಕ ವಸ್ತುಗಳು ಕೂಡ ಇದಕ್ಕೆ ಸೇರ್ಪಡೆಯಾಗುತ್ತವೆ. ಇದಕ್ಕೆ ದಾಸರಾದವರು ಮೆದುಳಿನ ಜೀವಕೋಶಗಳನ್ನೇ ಕಳೆದುಕೊಳ್ಳುತ್ತಾರೆ. ಜ್ಞಾಪಕಶಕ್ತಿ ಕಡಿಮೆಯಾಗುತ್ತದೆ. ಅಂಗಾಂಗಗಳ ಚಲನೆ ಸರಿಯಾಗಿರುವುದಿಲ್ಲ. ಖಿನ್ನತೆಗೆ ಒಳಗಾಗಿ ಓದುವ ಉತ್ಸಾಹವನ್ನೇ ಮರೆಯುತ್ತಾರೆ. ಅಷ್ಟೇ ಅಲ್ಲ, ಊಟ ಕೂಡ ಸೇರದೆ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಂಡು ಜೀವನೋತ್ಸವವನ್ನೇ ಕಳೆದುಕೊಳ್ಳುತ್ತಾರೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು ಇದನ್ನು ತಡೆಗಟ್ಟಲು ಸಾಮೂಹಿಕ ಪ್ರಯತ್ನ ಅಗತ್ಯ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ತಡೆಗೆ ಪೊಲೀಸ್ ಇಲಾಖೆ ಅತ್ಯಂತ ಬಿಗಿಯಾದ ಕ್ರಮವನ್ನು ವಹಿಸುತ್ತಿದೆ. ಪ್ರಮುಖವಾಗಿ ಕಾಲೇಜು ಕ್ಯಾಂಪಸ್ಗಳನ್ನು ಗುರಿಯಾಗಿಟ್ಟುಕೊಂಡು ಅಮಾಯಕ ವಿದ್ಯಾರ್ಥಿಗಳು ಅದಕ್ಕೆ ಬಲಿಯಾಗದಂತೆ ತಡೆಗಟ್ಟಲು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ಈ ಕಾರ್ಯಕ್ರಮಗಳು ವರ್ಷಪೂರ್ತಿ ನಡೆಯುತ್ತವೆ ಎಂದರು.
ಒಮ್ಮೆ ಗಾಂಜಾ ಅಥವಾ ಮಾದಕ ಸೇವನೆಯ ಬಗ್ಗೆ ಪೊಲೀಸ್ ಕೇಸ್ ಆದರೆ ಆ ವಿದ್ಯಾರ್ಥಿಯ ಜೀವನ ಮುಗಿದಂತೆಯೇ ಸರಿ. ಪಾಸ್ಪೋರ್ಟ್ ಕೂಡ ದೊರಕುವುದಿಲ್ಲ. ಉದ್ಯೋಗಕ್ಕೂ ವಂಚಿತರಾಗುತ್ತಾರೆ. ನಮಗೆ ಗೊತ್ತಿಲ್ಲದಂತೆ ಸಹಪಾಠಿಗಳ ಅಥವಾ ಇನ್ಯಾರದೋ ಒತ್ತಡಕ್ಕೆ ಗಾಂಜಾ ಸೇವಿಸಲು ಕಲಿತು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಸುಮಾರು ೯೦೦ ಜನರನ್ನು ಮಾದಕ ಸೇವನೆಯ ಪರೀಕ್ಷೆಗೊಳಪಡಿಸಿದರೆ ೨೦೦ ಯುವಕರು ಸಿಕ್ಕಿಹಾಕಿಕೊಂಡಿದ್ದಾರೆ. ಒಮ್ಮೆ ಕೇಸಾದರೆ ಅದೆಷ್ಟು ಕಷ್ಟವೆಂದು ಇವರಿಗೆ ಅರಿವಿರುವುದಿಲ್ಲ. ಖಾಸಗೀ ಕಂಪನಿಗಳಲ್ಲೂ ಇವರಿಗೆ ಕೆಲಸ ಸಿಗುವುದಿಲ್ಲ. ಹಾಗಾಗಿ ಸಾಧನೆ ಮಾಡಿ. ಗಾಂಜಾ ಅಥವಾ ಮಾದಕ ಸೇವನೆಗೆ ಯಾರಾದರೂ ಒತ್ತಾಯ ಮಾಡಿದರೆ ಖಂಡಿತಾ ‘ನೋ’ ಎಂದು ನಿರಾಕರಿಸಿ. ‘ನೋ’ ಎನ್ನುವುದು ನಿಮ್ಮ ಯಶಸ್ಸಿನ ದಾರಿಯಾಗಲು ಸಾಧ್ಯವಿದೆ. ಆತ್ಮಹತ್ಯೆಯಂತಹ ಘಟನೆಗೆ ಕಾರಣವಾಗುವ ಈ ಮಾದಕ ಸೇವನೆಯಿಂದ ಮುಕ್ತರಾಗಿ ಎಂದು ಸಲಹೆ ನೀಡಿದರು.
ಪೀಪಲ್ಸ್ ಲಾಯರ್ಸ್ ಗೀಲ್ಡ್ನ ಜಿಲ್ಲಾಧ್ಯಕ್ಷ ಹಾಗೂ ಸಿಂಡಿಕೇಟ್ ಸದಸ್ಯ ಕೆ.ಪಿ.ಶ್ರೀಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಾದಕ ವಸ್ತುಗಳ ಬಳಕೆ ವಿದ್ಯಾರ್ಥಿ ಜೀವನದಲ್ಲಿ ಹೆಚ್ಚಾಗುತ್ತಿರುವುದನ್ನು ಮನಗಂಡು ಇದರ ವಿರುದ್ಧ ಸಮರ ಸಾರುವ ನಿಟ್ಟಿನಲ್ಲಿ ನಮ್ಮ ಪ್ರೆಸ್ಗೀಲ್ಡ್ ಪ್ರಯತ್ನಿಸುತ್ತಿದೆ. ವರ್ಷಪೂರ್ತಿ ಅರಿವು ಮೂಡಿಸುವ ಕಾರ್ಯಕ್ರಮ ಮುಂದುವರೆಯುತ್ತದೆ. ಈಗಾಗಲೇ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ಪ್ರಬಂಧಸ್ಪರ್ಧೆ, ಬೀದಿನಾಟಕ, ಕಿರುಚಿತ್ರಗಳನ್ನು ಮಾಡಲಾಗಿದೆ. ಇದು ಮುಂದುವರೆಯುತ್ತದೆ. ಎಲ್ಲರೂ ಸೇರಿ ವ್ಯಸನಮುಕ್ತ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಕರೆ ನೀಡಿದರು.

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಡಾ.ಅವಿನಾಶ್ ಟಿ., ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾದಕ ವಸ್ತುಗಳ ಸೇವನೆ ಅಪಾಯಕಾರಿ. ಅಮಲು ಬೇಡ ಅರಿವು ಮುಖ್ಯ. ಈ ಅಮಲು ಎನ್ನುವುದು ಕ್ಷಣಿಕವಾದುದು. ಆದರೆ ಅದರ ನಷ್ಟ ಶಾಶ್ವತವಾಗುತ್ತದೆ. ಡ್ರಗ್ಸ್ಬಿಟ್ಟು ಬದುಕನ್ನು ಪ್ರೀತಿಸಿ. ತಂದೆ-ತಾಯಿಗಳ ನಂಬಿಕೆಗಳನ್ನು ಉಳಿಸಿ. ಆರೋಗ್ಯವಂತ ಸಮಾಜಕ್ಕಾಗಿ ಎಲ್ಲಾ ದುಶ್ಚಟಗಳಿಂದ ದೂರವಿರಿ ಎಂದರು.
ಕಾರ್ಯಕ್ರಮದಲ್ಲಿ ವಕೀಲ ವಿಜಯ್ ಟಿ., ಡಾ.ಕೆ.ಎಸ್.ಸರಳ, ಡಾ.ಗಿರಿಧರ್ ಕೆ.ವಿ., ಡಾ.ಪ್ರಕಾಶ್ ಮರಗನಳ್ಳಿ, ಪರುಶುರಾಮ್ ಎಂ., ಡಾ.ಲವ ಜಿ.ಆರ್., ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಪ್ರೊ.ರಾಜೇಶ್ವರಿ ಸೇರಿದಂತೆ ಹಲವರಿದ್ದರು. ಇದೇ ಸಂದರ್ಭದಲ್ಲಿ ಮಾದಕ ವಸ್ತುಗಳ ಅರಿವು ಮೂಡಿಸುವ, ಗೋವರ್ಧನ್, ದೀಕ್ಷಿತ್ ನಿರ್ಮಿಸಿದ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಲಿಖಿತ ಪ್ರಾರ್ಥಿಸಿ, ಸುಶ್ಮಿತ ನಿರೂಪಿಸಿದರು.