ಮುಖಪುಟದಲ್ಲಿ ಸಾಂದರ್ಬಿಕ ಚಿತ್ರ
ಶಿವಮೊಗ್ಗ ,ಏ.13:
ನಿಗಧಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಸಭೆಗೆ ಆಗಮಿಸಿದ ಮೆಸ್ಕಾಂ ಅಧಿಕಾರಿಗಳನ್ನು ಶಾಸಕ ಎಸ್.ಎನ್. ಚೆನ್ನಬಸಪ್ಪ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಘಟನೆ ನಡೆಯಿತು.

ಅವರು ಇಂದು ತಮ್ಮ ಕಛೇರಿಯಲ್ಲಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ಒಕ್ಕೂಟದ ವೇದಿಕೆ ಆಯೋಜಿಸಿದ್ದ ನಗರದ ಕುಂದುಕೊರತೆ ಕುರಿತ ಚರ್ಚಾಸಭೆಯಲ್ಲಿ ಮಾತನಾಡಿ, ಇಂದಿನ ಸಭೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಬಾರದೇ ಇದ್ದಿದ್ದರಿಂದ ಏಪ್ರಿಲ್ 17ರಂದು ಬೆಳಿಗ್ಗೆ 9.30ಕ್ಕೆ ಮತ್ತೊಮ್ಮೆ ಸಭೆ ಕರೆಯಲಾಗುವುದು. ಸಭೆಗೆ ಮೆಸ್ಕಾಂ ಅಧಿಕಾರಿಗಳು, ಪಾಲಿಕೆಯ ಕುಡಿಯುವ ನೀರು ಹಾಗೂ ಒಳಚರಂಡಿ ವಿಭಾಗದ ಅಧಿಕಾರಿಗಳನ್ನು ಈ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ ಮೆಸ್ಕಾಂ ಅಧಿಕರಿಗಳು ಒಂದು ಗಂಟೆಗೆ ತಡವಾಗಿ ಆಗಮಿಸಿದ್ದು ಇದು ಶಾಸಕರನ್ನು ತೀವ್ರವಾಗಿ ಕೆರಳಿಸಿತ್ತು. ಅದರ ಪರಿಣಾಮ ಆ ಅಧಿಕಾರಿಗಳು ಶಾಸಕರಿಂದ ತರಾಟೆಗೆ ಒಳಗಾದರು.

ನಾಗರೀಕ ಹಿತರಕ್ಷಣಾ ವೇದಿಕೆ ಒಕ್ಕೂಟದ ಪ್ರಮುಖರಾದ ಕೆ.ವಿ. ವಸಂತಕುಮಾರ್ ಮಾತನಾಡಿ, ಸ್ಮಾರ್ಟ್ಸಿಟಿ ಯೋಜನೆಯಡಿಯಲ್ಲಿ ಆಗಬೇಕಾಗಿದ್ದ ಯು.ಜಿ. ಕೇಬಲ್ ಕಾಮಗಾರಿ ಬಗ್ಗೆ ಕಳೆದ ನವೆಂಬರ್ನಲ್ಲೇ ಸಭೆ ಕರೆಯುವುದಾಗಿ ತಿಳಿಸಿದ್ದೀರಿ. ಆದರೆ ಈಗ ಏಪ್ರಿಲ್ ಕಳೆಯುತಾ ಬಂದರೂ ಸಭೆ ಕರೆಯಲಿಲ್ಲ. ಸಭೆ ಕರೆದರೂ ಅಧಿಕಾರಿಗಳು ಬರುತ್ತಿಲ್ಲ. ನಾವು ಕೊಟ್ಟ ಮನವಿಗೂ ಮೆಸ್ಕಾಂ ಕವಡೆಕಾಸಿನ ಕಿಮ್ಮತ್ತನ್ನು ಕೊಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಅಭಿವೃದ್ಧಿಪಡಿಸಿದ ಆರು ಲೇಔಟ್ಗಳಲ್ಲಿ ಯುಜಿ ಕೇಬಲ್ ಕಾಮಗಾರಿ ಬಾಕಿಯಿದೆ. ಭದ್ರಾವತಿಗೆ ಹೋಗುವ ಹೆದ್ದಾರಿಯಲ್ಲಿ ಕಳೆದ 2ವರ್ಷಗಳ ಹಿಂದೆಯೇ ವಿದ್ಯುತ್ದೀಪ ಅಳವಡಿಸಲು ಕೋರಲಾಗಿತ್ತು. ಆದರೆ ಇನ್ನೂ ಕಾರ್ಯರೂಪಕ್ಕೆ ಬರಲಿಲ್ಲ. ಸುಬ್ಬಯ್ಯ ಆಸ್ಪತ್ರೆ ರಸ್ತೆಗೆ ದೀಪ ಹಾಕುತ್ತೀರಿ ಇಲ್ಲಿ ಏಕೆ ಹಾಕಲಾಗುತ್ತಿಲ್ಲ ಎಂದು ಕಾರವಾಗಿ ಪ್ರಶ್ನಿಸಿದ ಅವರು, ನಗರದ ಕನ್ಸರ್ವೆನ್ಸಿಗಳನ್ನು ಪಾಕಿಂಗ್ ವ್ಯವಸ್ಥೆಗೆ ಉಪಯೋಗಿಸಿಕೊಳ್ಳಬೇಕು. ಸ್ಮಾರ್ಟ್ಸಿಟಿ ಶೌಚಾಲಯಗಳನ್ನು ಉತ್ತಮಪಡಿಸಬೇಕು. ಹೈದಾರಾಬಾದಿನಲ್ಲಿರುವಂತೆ ಶಿವಮೊಗ್ಗ ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಉಚಿತ ಶೌಚಾಲಯದ ವ್ಯವಸ್ಥೆ ಜಾರಿಗೆ ಬರಬೇಕು. ಸ್ಮಾರ್ಟ್ಸಿಟಿ, ಫುಟ್ಪಾಥ್ಗಳೆಲ್ಲಾ ಕಿತ್ತು ಹೋಗುತ್ತಿವೆ.

ಇಂಜಿನಿಯರ್ಗಳನ್ನು ಆಕಡೆ ತಲೆ ಹಾಕುತ್ತಿಲ್ಲ. ಸೂಡಾ ಕಛೇರಿಯ ಸಮೀಪವಿರುವ ಅನಧೀಕೃತ ಶೆಡ್ ಇನ್ನೂ ತೆರವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋಪಾಳಗೌಡ ಬಡಾವಣೆಯ `ಸಿ’ಬ್ಲಾಕ್ನಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ, ಒಂದು ಮಳೆ ಬಂದರೆ 85-90 ಮನೆಗಳಿಗೆ ನೀರು ನುಗ್ಗುತ್ತದೆ ಅದನ್ನು ಸರಿಪಡಿಸಬೇಕು. ಜೈಲ್ರಸ್ತೆ, ರಾಜಾ ಕಾಲುವೆಯಲ್ಲಿಯೂ ಸಮಸ್ಯೆಯಿದೆ. ಮೀನಾಕ್ಷಿ ಭವನದ ಎದುರು ಸರ್ಕಾರಿ ಕಾಲೇಜು ಇರುವುದರಿಂದ ಆ ರಸ್ತೆಯ ಎರಡೂ ಕಡೆ ವಿದ್ಯಾರ್ಥಿಗಳ, ಸಾರ್ವಜನಿಕರ ಅನುಕೂಲಕ್ಕಾಗಿ ಫುಟ್ಪಾತ್ ನಿರ್ಮಾಣ ಮಾಡಬೇಕು. ಎಂಆರ್ಎಸ್ ವೃತ್ತದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಶೆಲ್ಟರ್ ನಿರ್ಮಾಣ ಮಾಡಬೇಕು. ನಿಮ್ಮ ಅವಧಿಯಲ್ಲಾದರೂ ನಗರದಲ್ಲಿ ಮೂಲಸೌಲಭ್ಯ ಅಭಿವೃದ್ದಿಪಡಿಸಲು ಒಂದು ಮಾಸ್ಟರ್ಪ್ಲಾನ್ ಆದರೂ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಕೇಳಿದ ಮಾಹಿತಿಗೆ ಉತ್ತರ ಕೊಡುವ ಜ್ಞಾನಬೇಕು ತಾನೆ. ಇವರೇನು ದಿಲ್ಲಿಯಲ್ಲಿದ್ದಾರಾ ? ಕಾರ್ಪೋರೇಷನ್ನವರಿಗೆ ಪುರುಸೊತ್ತಿಲ್ಲ. ನಿಮಗೂ ಪುರುಸೊತ್ತಿಲ್ವೆ ? ಹುಡುಗಾಟ ಮಾಡ್ತಾ ಕೂತಿದ್ದೀರಲ್ಲಾ ನಿಮಗೆ ಜವಾಬ್ದಾರಿ ಇಲ್ವಾ ? 11ಗಂಟೆಗೆ ಸಭೆ ಕರೆದಿದ್ದೆ ನೀವು ನೋಡಿದರೆ 12 ಗಂಟೆಗೆ ಬಂದಿದ್ದೀರಲ್ಲಾ ? ನೀವು ಸಭೆಯಲ್ಲಿ ಉಪಸ್ಥಿತರಿರುವರು ಅವಶ್ಯಕತೆಯಿಲ್ಲ. ನೀವು ಹೋಗಬಹುದು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಮೆಸ್ಕಾಂ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಸಭೆಯಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ಅಧ್ಯಕ್ಷ ಗೋಪಾಲ್, ನಾಗರಾಜ್ ಶೆಟ್ಟರ್, ರಘುಪತಿ, ಸೋಮಶೇಖರ್, ಜನಮೇಜಿರಾವ್ ಮೆಸ್ಕಾಂ ಎಇಇ ಸುರೇಶ್ ಮೊದಲಾದವರಿದ್ದರು.
ಮೊನ್ನೆ ಸುರಿ ಭಾರೀ ಮಳೆಗೆ ಪಾಲಿಕೆ ಕುಡಿಯುವ ನೀರು ಸರಬರಾಜು ಇಲಾಖೆಯಿಂದ ಕಲುಷಿತ ನೀರು ಸರಬರಾಜು ಆಗಿದ್ದು ನಿಜ. ನಮ್ಮ ಸಿಬ್ಬಂದಿಗಳು ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ನದಿ ನೀರಿನ ಪಂಪನ್ನು ಚಾಲನೆ ಮಾಡಿದ್ದೇ ಇದಕ್ಕೆ ಕಾರಣ. ನಮ್ಮಿಂದ ತಪ್ಪಾಗಿದೆ. ಹೊಸ ಪಂಪ್ಹೌಸ್ ನಿರ್ಮಾಣಕ್ಕೆ ಪ್ರಸ್ತಾವನೆ ಮಾಡುತ್ತಿದ್ದೇವೆ ಎಂದು ತಮ್ಮಿಂದಾದ ತಪ್ಪನ್ನು ಇಲಾಖೆಯ ಸಹಾಯಕ ಕಾರ್ಯಪಾಲ ಅಭಿಯಂತರ ಜೀವನ್ ಒಪ್ಪಿಕೊಂಡರು.