ಶಿವಮೊಗ್ಗ : ಶಿವಮೊಗ್ಗ ಪ್ರೆಸ್ಟ್ರಸ್ಟ್ವತಿಯಿಂದ ಏ.೧೪ರ ಬೆಳಿಗ್ಗೆ ೧೦.೩೦ಕ್ಕೆ ಆರ್ಟಿಓ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ೨೦೨೬ನೇ ಸಾಲಿನ ಪಿ. ಲಂಕೇಶ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈ ಬಾರಿಯ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಡಿ.ಮಹಾದೇವಪ್ಪ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಹೇಳಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮವನ್ನು ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಬಿ.ವೆಂಕಟಸಿಂಗ್ ಉದ್ಘಾಟಿಸಲಿದ್ದಾರೆ. ಚಿಂತಕರಾದ ಪ್ರೊ.ರಾಜೇಂದ್ರಚೆನ್ನಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಪ್ರೆಸ್ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ವಹಿಸಲಿದ್ದು, ಜಿಲ್ಲಾ ಕಾರ್ಯನಿರತ ಪತ್ರರ್ಕರ ಸಂಘದ ಅಧ್ಯಕ್ಷ ವೈದ್ಯನಾಥ್ ಯು.ಹೆಚ್. ಉಪಸ್ಥಿತಿ ಇರುತ್ತದೆ ಎಂದರು.

ಹಿರಿಯ ಪತ್ರಕರ್ತ ಡಿ.ಮಹಾದೇವಪ್ಪ ಅವರು ಮೈಸೂರಿನ ಕೃಷ್ಣರಾಜ ನಗರ ತಾಲ್ಲೂಕಿನ ಸೌತನಹಳ್ಳಿಯಲ್ಲಿ ಹುಟ್ಟಿದ್ದು, ದಿ. ಪಟೇಲ್ ದೇವಪ್ಪ ಮತ್ತು ದಿ. ಶಿವಲಿಂಗಮ್ಮನವರ ಪುತ್ರರಾಗಿದ್ದಾರೆ. ೧೯೭೩ರಲ್ಲಿ ಮೈಸೂರು ವಿವಿಯಿಂದ ಪತ್ರಿಕೋದ್ಯಮ ವಿಷಯದಲ್ಲಿ ಎಂಎ ಪದವಿ ಪಡೆದಿದ್ದು, ಫಲಿತಾಂಶ ಬರುವುದಕ್ಕೆ ಮುಂಚಿತವಾಗಿಯೇ ಪತ್ರಕರ್ತ ವೃತ್ತಿಯನ್ನು ಬೆಂಗಳೂರಿನಲ್ಲಿ ಆರಂಭಿಸಿ, ಲೋಕವಾಣಿ, ವಿಶಾಲ ಕರ್ನಾಟಕ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸಮಾಡಿ ನಾಡಿನ ಪ್ರತಿಷ್ಠಿತ ದಿನಪತ್ರಿಕೆ ಕನ್ನಡಪ್ರಭದಲ್ಲಿ ೨ವರೆ ದಶಕಗಳಿಗೆ ಹೆಚ್ಚು ಕಾಲ ಪತ್ರಿಕಾ ವೃತ್ತಿನಲ್ಲಿ ಅನುಭವ ಪಡೆದ ಅಲ್ಲದೆ ವಿಜಯ ಕರ್ನಾಟಕ ಪತ್ರಿಕೆಯ ಬ್ಯೂರೋಚೀಫ್ ಆಗಿ ಕಾರ್ಯನಿರ್ವಹಿಸಿ ಆ ಪತ್ರಿಕೆಯ ಪ್ರದಾನ ಸಂಪಾದಕರಾಗಿದ್ದ ಪತ್ರಿಕೋದ್ಯಮದ ದಿಗ್ಗಜರಾಗಿದ್ದ ಕೆ.ಶ್ಯಾಮ್ರಾವ್, ಖಾದ್ರಿಶಾಮಣ್ಣ, ರಾಮಕೃಷ್ಣಮೂರ್ತಿ, ವೈಎನ್ಕೆ ಮೊದಲಾದವರ ನಿಕಟವರ್ತಿಗಳಾಗಿದ್ದ ಕನ್ನಡಿಗರ ಪ್ರಜಾನುಡಿ ಪ್ರಾದೇಶಿಕ ದಿನಪತ್ರಿಕೆಯ ಪ್ರದಾನ ಸಂಪಾದಕರಾಗಿದ್ದರು ಎಂದು ಮಾಹಿತಿ ನೀಡಿದರು.
ಈ ಪ್ರಶಸ್ತಿ ೨೫ ಸಾವಿರ ರೂ.ಗಳ ನಗದು ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿರುತ್ತದೆ. ಅಂದು ನಾಡಿನ ಅನೇಕ ಹಿರಿಯ ಪತ್ರಕರ್ತರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಡಿ.ಮಹಾದೇವಪ್ಪ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ, ಬೆಂಗಳೂರು ವರದಿಗಾರರ ಕೂಟ ಪ್ರಶಸ್ತಿ, ರಾಮಕೃಷ್ಣ ರಾಷ್ಟ್ರೀಯ ಚಿಂತನಾವೇದಿಕೆ ಪ್ರಶಸ್ತಿ, ಮುಖ್ಯಪ್ರಾಣ ವಾಯು ಸಾಂಸ್ಕೃತಿಕ ಅಕಾಡೆಮಿ ಚಿತ್ರೋದ್ಯಮ ಪ್ರಶಸ್ತಿ, ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಟ್ರಸ್ಟ್ನ ಹೆಚ್.ಕೆ.ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ, ಶಿವರಾತ್ರೇಶ್ವರ ಮಾಧ್ಯಮ ಪ್ರಶಸ್ತಿ, ಪತ್ರಿಕಾರಂಗದ ಹರಿಕಾರ ಟಿಎಸ್ಆರ್ ಪ್ರಶಸ್ತಿ ಲಭಿಸಿದೆ ಎಂದರು.
ಎಲ್ಲಾ ಪತ್ರಿಕಾ ಮಿತ್ರರು ಕುಟುಂಬ ಸಮೇತರಾಗಿ ಈ ಸಮಾರಂಭದಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ನ ಕಾರ್ಯದರ್ಶಿ ನಾಗರಾಜ್ ನೇರಿಗೆ, ಉಪಾಧ್ಯಕ್ಷ ಹೊನ್ನಾಳಿ ಚಂದ್ರಶೇಖರ್, ಖಜಾಂಚಿ ಹುಲಿಮನೆ ತಿಮ್ಮಪ್ಪ, ಸಹಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಟ್ರಸ್ಟಿಗಳಾದ ಗೋಪಾಲ್ ಯಡಗೆರೆ, ಜಿ.ಪದ್ಮನಾಭ್, ಗಜೇಂದ್ರಸ್ವಾಮಿ, ಗೋವಾ ಮೋಹನ್ ಇದ್ದರು.