ಕಸಗಳು ಚರಂಡಿಗೆ ಸೇರದಂತೆ ಹಾಗೂ ಪಾದಾಚಾರಿಗಳ ಸುರಕ್ಷತೆಗಾಗಿ ಈ ಛೇಂಬರ್ ಗಳಿಗೆ ಜಾಲರಿ ಇರುವ ಕಬ್ಬಿಣದ ಮುಚ್ಚಳ ಅಳವಡಿಸಲಾಗಿತ್ತು. ಈಗ ಇವುಗಳ ಮೇಲೆ ಕಳ್ಳರ ಕಾಕದೃಷ್ಟಿ ಬಿದ್ದು ಕಳ್ಳತನವಾಗಿ ಸಾರ್ವಜನಿಕರು ಮಳೆಗಾಲದಲ್ಲಿ ನೀರುತುಂಬಿ ಗೋತಾಗದೆ ಗುಂಡಿಗೆ ಬೀಳುವ ಪರಿಸ್ಥಿತಿ ಉಂಟಾಗಿದೆ.
ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಮಳೆಗಾಲದಲ್ಲಿ ರಸ್ತೆಯಲ್ಲಿ ಹರಿಯುವ ನೀರು ಬಾಕ್ಸ್ ಚರಂಡಿ ಸೇರಲು ಅಲ್ಲಲ್ಲಿ ಚಿಕ್ಕ ಚಿಕ್ಕ ಛೇಂಬರ್ ನಿರ್ಮಾಣ ಮಾಡಲಾಗಿತ್ತು. ಈಗ ಈ ಕಬ್ಬಿಣ ಮುಚ್ಚಳದ ಮೇಲೆ ಕಳ್ಳರ ದೃಷ್ಟಿ ಬಿದ್ದಿದೆ. ಅದನ್ನು ಕಿತ್ತು ಗುಜುರಿಗೆ ಸೇರಿಸಿ ಹಣ ಪಡೆಯುವ ಕಾರ್ಯ ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಇಲ್ಲಿ ಸಾರ್ವಜನಿಕ ಸೊತ್ತನ್ನು ಕಳ್ಳತನ ಮಾಡುವುದು ಒಂದು ವಿಷಯವಾದರೆ ರಸ್ತೆಯಂಚಿನಲ್ಲಿ ನೆಲ ಮಟ್ಟದಲ್ಲಿರುವ ಈ ತೆರೆದ ಚೇಂಬರ್ಗಳು ಪ್ರಾಣಾಪಾಯಕಾರಿಯಾಗಿದೆ. ಮಳೆ ಬಂದಾಗಲಂತೂ ಈ ಗುಂಡಿಗಳು ನೀರು ತುಂಬಿ ಕಣ್ಣಿಗೆ ಕಾಣಿಸುವುದಿಲ್ಲ.

ಮಹಾನಗರ ಪಾಲಿಕೆ ಎದುರಿನ ರಸ್ತೆಯಲ್ಲೇ ಸುಮಾರು ೨೦ಕ್ಕೂ ಹೆಚ್ಚು ಈ ರೀತಿಯ ಬಾಯಿ ತೆರೆದು ನಿಂತಿರುವ ಛೇಂಬರ್ ಗಳಿದ್ದು ಇಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚು ಜನ ಸಂಚಾರ ಇರುವ ರಸ್ತೆಯಾಗಿದೆ. ಈ ಬಗ್ಗೆ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇದರ ಜೊತೆಗೆ ಅನೇಕ ಬೀದಿದೀಪ ಕಂಬಗಳ ಕೆಳಭಾಗಗಳಲ್ಲಿರುವ ಮುಚ್ಚಳಗಳೂ ಕಳ್ಳತನವಾಗಿದ್ದು ಅವುಗಳಲ್ಲಿನ ವಿದ್ಯುತ್ ತಂತಿಗಳು ತೆರೆದು ಅಪಾಯವನ್ನು ಅಹ್ವಾನಿಸುತ್ತಿವೆ.

ಆಗ್ರಹ : ಪಾಲಿಕೆ ಸೇರಿದಂತೆ ಸರ್ಕಾರದ ಸ್ವತ್ತುಗಳನ್ನು ಕಳ್ಳತನ ಮಾಡಿದವರಿಗೆ ರೈಲ್ವೇ ಇಲಾಖೆ ಯಲ್ಲಿರುವಂತೆ ಕಠಿಣ ಶಿಕ್ಷೆ ಕಾನೂನು ರೂಪಿಸಬೇಕು. ಚಪ್ಪಲಿ ಕದ್ದವನಿಗೂ ಅದೇ ಶಿಕ್ಷೆ, ಜನರ ಜೀವದ ಜೊತೆ ಚೆಲ್ಲಾಟವಾಡುವ ಕಳ್ಳತನಕ್ಕೂ ಅದೇ ಶಿಕ್ಷೆ ಎನ್ನುವಂತಾಗಬಾರದು. ಚಪ್ಪಲಿ ಕಳ್ಳತನವಾದಾಗ ಪಾಪ ಕಳೆಯಿತು ಎಂದು ಸಮಾಧಾನ ಮಾಡಿಕೊಳ್ಳಬಹುದು. ಆದರೆ ಪ್ರಾಣವೇ ಹೋದರೆ ಏನು ಮಾಡಬೇಕು ಕೂಡಲೇ ಪಾಲಿಕೆ ಸಿಸಿ ಕ್ಯಾಮೇರಾ ಆಧಾರದ ಮೇಲೆ ಇಂತಹ ವ್ಯಕ್ತಿಗಳ ಮೇಲೆ ಕಠಿಣಕ್ರಮಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.