ಶಿವಮೊಗ್ಗ : ಪೇಸ್ ಯು.ಎಂ.ಪಿ.ಯು. ಕಾಲೇಜಿನಲ್ಲಿ ಈ ಬಾರಿ ೨೦೨೫-೨೬ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ೯೯.೪೨ ಆಗಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲೇ ೪ನೇ ಸ್ಥಾನ ಪಡೆದಿದೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆಯಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಪೋಷಕರ ಪ್ರಯತ್ನದಿಂದ ಉತ್ತಮ ಫಲಿತಾಂಶ ಬಂದಿದೆ. ಹೆಚ್ಚಿನ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಅವರು ಸಲ್ಲಿಸಿದರು.
ಸಂಸ್ಥೆಯ ಖಜಾಂಚಿ ಕೆ.ಈ. ಕಾಂತೇಶ್ ಮಾತನಾಡಿ, ಒಟ್ಟಿಗೆ ೬೯೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೬೯೩ ವಿದ್ಯಾರ್ಥಿಗಳು ಪಾಸಾಗಿದ್ದು, ಅದರಲ್ಲಿ ಅತ್ಯುತ್ತಮ ಶ್ರೇಣಿ ೪೭೯, ಪ್ರಥಮ ದರ್ಜೆ ೨೧೦, ದ್ವಿತೀಯ ದರ್ಜೆ ೪ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಹಿಂದಿ-೨, ಸಂಸ್ಕೃತ-೫೦, ಭೌತಶಾಸ್ತ್ರ-೧೨, ರಾಸಾಯನ ಶಾಸ್ತ್ರ-೦೧, ಗಣಿತಶಾಸ್ತ್ರ-೪೦, ಜೀವಶಾಸ್ತ್ರ-೫, ಕಂಪ್ಯೂಟರ್ ಸೈನ್ಸ್ನಲ್ಲಿ-೩೭ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಅಂಕಗಳನ್ನು ಗಳಿಸಿದ್ದಾರೆ. ನಮ್ಮ ಈ ಸಾಧನೆಯ ವಿಶೇಷವೇನೆಂದರೆ ನಮ್ಮ ಕಾಲೇಜಿನ ಮಕ್ಕಳಿಗೆ ಟ್ಯೂಷನ್ಗೆ ಹೋಗುವ ಅಗತ್ಯವೇ ಇರುವುದಿಲ್ಲ. ನಮ್ಮಲ್ಲೇ ಎಲ್ಲಾ ಸೌಲಭ್ಯ ಮತ್ತು ಮಾರ್ಗದರ್ಶನ ಸಿಗುವುದರಿಂದ ಹೊರಗಡೆ ಹೋಗುವ ಅವಕಾಶವೇ ಇಲ್ಲ. ಆದ್ದರಿಂದ ಉತ್ತಮ ಫಲಿತಾಂಶ ಬಂದಿದೆ ಎಂದರು.

ಮಹೀನ್ ಖಾನಮ್ ಅಫ್ರಿದಿ ೬೦೦ಕ್ಕೆ ೫೯೬ ಅಂಕ ಪಡೆದಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ೪ನೇ ಸ್ಥಾನ ಪಡೆದಿದ್ದಾಳೆ. ಸಾದ್ವಿ ಎಂ.ಎಸ್. ೫೯೪ ಅಂಕ ಪಡೆದು ಜಿಲ್ಲೆಗೆ ತೃತೀಯ ಹಾಗೂ ರಾಜ್ಯಕ್ಕೆ ೬ನೇ ಸ್ಥಾನ ಪಡೆದಿದ್ದಾಳೆ. ಅಂಕಿತ್ ಯು.ವಿ. ೫೮೯, ಧೃತಿ ಹೆಚ್. ಭಟ್ ೫೮೯, ಸಿಂಚನ ಪಿ.ಓ. ೫೮೯ ಅಂಕಗಳಿಸಿ ಕಾಲೇಜಿಗೆ ೩ನೇ ಸ್ಥಾನ ಪಡೆದಿದ್ದಾರೆ ಎಂದರು.
ಪ್ರಾಂಶುಪಾಲರಾದ ಆನಂದ್ ಮಾತನಾಡಿ, ಕೆ.ಎಸ್. ಈಶ್ವರಪ್ಪ ಮತ್ತು ಕೆ.ಈ.ಕಾಂತೇಶ್ ಆಡಳಿತಾತ್ಮಕವಾಗಿ ಸಂಪೂರ್ಣ ಸಹಕಾರ ನೀಡಿ, ಶೈಕ್ಷಣಿಕ ಮಾರ್ಗದರ್ಶನ, ಸಲಹೆ-ಸೂಚನೆ ನೀಡುತ್ತಾ ಬಂದಿದ್ದರಿಂದ ಮತ್ತು ಪೂರ್ಣ ಸ್ವಾತಂತ್ರ್ಯ ನೀಡಿದ್ದರಿಂದ ಕಾಲೇಜು ಯಶಸ್ವಿಯಾಗಿ ಉತ್ತಮ ಉಪನ್ಯಾಸಕರ ಸಹಕಾರದಿಂದ ಈ ಹಂತ ತಲುಪಲು ಸಾಧ್ಯವಾಗಿದೆ ಎಂದರು.
ಹೆಚ್ಚಿನ ಅಂಕಗಳಿಸಿದ ಮಹೀನ್ ಖಾನಮ್ ಅಫ್ರಿದಿ ಮಾತನಾಡಿ, ಕಾಲೇಜಿನಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಎಲ್ಲಾ ಉಪನ್ಯಾಸಕರ ಉತ್ತಮ ಮಾರ್ಗದರ್ಶನ ಸಲಹೆ ಮತ್ತು ನಮಗೆ ಯಾವುದೇ ಅನುಮಾನವಿದ್ದರೂ ವಿಶೇಷವಾಗಿ ಕರೆದು ಮಾರ್ಗದರ್ಶನ ನೀಡಿದ್ದರಿಂದ ನನಗೆ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ.ವಿಶ್ವನಾಥಯ್ಯ ಹಾಗೂ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.